March 29, 2026
Sunday, March 29, 2026
spot_img

ಇಂತಹ ತಂದೆ ಯಾವ ಮಕ್ಕಳಿಗೂ ಸಿಗೋದು ಬೇಡ..! ಚಾಕೊಲೇಟ್ ಕದ್ದಿದ್ದಾಳೆ ಅಂತ ಮಗಳನ್ನು ಹೊಡೆದು ಕೊಂದ ಪಾಪಿ ಅಪ್ಪ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮಾನವೀಯತೆಯನ್ನೇ ಮರೆಸುವಂತಹ ಕ್ರೂರ ಘಟನೆ ಉತ್ತರ ಪ್ರದೇಶದ ಬುಲಂದ್‌ಶಹರ್ ಜಿಲ್ಲೆಯಲ್ಲಿ ನಡೆದಿದೆ. ಕೇವಲ ಸಂಶಯದ ಕಾರಣಕ್ಕೆ ಕೋಪಗೊಂಡ ತಂದೆಯೊಬ್ಬ ತನ್ನ ಮಗಳ ಜೀವ ತೆಗೆಯುವ ಮಟ್ಟಕ್ಕೆ ಹಿಂಸಿಸಿರುವ ದಾರುಣ ಪ್ರಕರಣ ಬೆಳಕಿಗೆ ಬಂದಿದೆ.

ನರೋರಾ ಸಮೀಪದ ರತನ್‌ಪುರ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಅಂಗಡಿಯವನು ಮಗಳು ಹಣ ನೀಡದೆ ಚಾಕೊಲೇಟ್ ತೆಗೆದುಕೊಂಡಿದ್ದಾಳೆ ಎಂದು ಹೇಳಿದ ಹಿನ್ನೆಲೆ, ತಂದೆ ಕೋಪಗೊಂಡಿದ್ದಾನೆ. ಬಳಿಕ ಸಂಜೆ ಮನೆಗೆ ಬಂದ ಆತ, ಮಗಳಿಗೆ ಮರದ ಕೋಲಿನಿಂದ ನಿರ್ದಯವಾಗಿ ಹಲ್ಲೆ ನಡೆಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಮಗುವಿನ ತಾಯಿ ತಡೆಯಲು ಯತ್ನಿಸಿದರೂ ಆತ ಹೊಡೆಯುವುದನ್ನು ನಿಲ್ಲಿಸಿಲ್ಲ. ಭೀಕರ ಹಲ್ಲೆಯಿಂದ ಬಾಲಕಿ ತಲೆಗೆ ಗಂಭೀರ ಗಾಯವಾಗಿದ್ದು, ಪ್ರಜ್ಞೆ ತಪ್ಪಿ ಬಿದ್ದಿದ್ದಾಳೆ. ಆಕೆಗೆ ನೆರವಾಗುವ ಬದಲು, ಆರೋಪಿ ಸ್ಥಳದಿಂದ ಪರಾರಿಯಾಗಿದ್ದು, ತಾಯಿಯನ್ನು ಮನೆಯೊಳಗೆ ಬಂದಿಸಿ ಹೋಗಿದ್ದಾನೆ ಎಂಬ ಆರೋಪ ಕೇಳಿಬಂದಿದೆ.

ಇದನ್ನೂ ಓದಿ:

ಮಗುವಿನ ಕೂಗಾಟ ಕೇಳಿ ನೆರೆಹೊರೆಯವರು ಸ್ಥಳಕ್ಕೆ ಧಾವಿಸಿ ಆಸ್ಪತ್ರೆಗೆ ಕರೆದೊಯ್ದರೂ, ವೈದ್ಯರು ಆಕೆಯನ್ನು ಮೃತಪಟ್ಟಿದ್ದಾಳೆ ಎಂದು ಘೋಷಿಸಿದರು. ಮರಣೋತ್ತರ ಪರೀಕ್ಷೆಯಲ್ಲಿ ತಲೆಯ ಗಾಯ ಸೇರಿದಂತೆ ಹಲವು ಗಾಯಗಳ ಗುರುತುಗಳು ಪತ್ತೆಯಾಗಿವೆ.

ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಗಾಗಿ ಶೋಧ ನಡೆಸುತ್ತಿದ್ದಾರೆ. ಇಂತಹವೇ ಮತ್ತೊಂದು ಘಟನೆ ಇತ್ತೀಚೆಗೆ ಮಹಾರಾಷ್ಟ್ರದಲ್ಲೂ ನಡೆದಿದ್ದು, ಮಕ್ಕಳ ಮೇಲಿನ ಹಿಂಸೆ ಕುರಿತು ಆತಂಕ ಹೆಚ್ಚಿಸಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !