ಅವಿಶ್ವಾಸ ನಿರ್ಣಯ ನಮಗೆ ಅದೃಷ್ಟ; 2024ರಲ್ಲಿ ಬಿಜೆಪಿ ಎಲ್ಲಾ ದಾಖಲೆ ಮುರಿಯಲಿದೆ: ಪ್ರಧಾನಿ ಮೋದಿ

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಪ್ರತಿಪಕ್ಷಗಳು ಜುಲೈ 26 ರಂದು ಮೋದಿ ಸರ್ಕಾರದ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಿದ್ದು, ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಅವರು ಅಂಗೀಕರಿಸಿದರು. ಮೋದಿಯವರು ಅವಿಶ್ವಾಸ ನಿರ್ಣಯ ಎದುರಿಸುತ್ತಿರುವುದು ಇದು ಎರಡನೇ ಬಾರಿ. ಗುರುವಾರ ಲೋಕಸಭೆಯಲ್ಲಿ ಪ್ರಧಾನಿ ಮೋದಿ ಅವರು ಅವಿಶ್ವಾಸ ನಿರ್ಣಯದ ಚರ್ಚೆಗಳಿಗೆ ಉತ್ತರ ನೀಡಿದ್ದಾರೆ.

ಹೊಸ ಸಂಕಲ್ಪ, ಕನಸಿನ ಹೊತ್ತು ಹೆಜ್ಜೆ ಹಾಕುತ್ತಿದ್ದೇವೆ. ಅನುಭವದಿಂದ ನಾನು ಮಾತನಾಡುತ್ತಿದ್ದೇನೆ. ಭಾರತಕ್ಕೆ ಇದು ಗೋಲ್ಡನ್ ಎರಾ ಆಗಿದೆ. ಈ ಸಮಯ ದೇಶಕ್ಕೆ ಮಹತ್ವಪೂರ್ಣ ಆಗಿದೆ ಎಂದರು.

2024ರಲ್ಲೂ ನಾವೇ ಅಧಿಕಾರಕ್ಕೆ ಬರುತ್ತೇವೆ ಎಂದು ಲೋಕಸಭೆಯಲ್ಲಿ ಹೇಳಿದ ಪ್ರಧಾನಿ ಮೋದಿ, ವಿಪಕ್ಷಗಳ ಆಡೋ ಒಂದೊಂದು ಮಾತನ್ನ ಜನರು ನೋಡುತ್ತಿದ್ದಾರೆ. ಯಾವಾಗಲೂ ನಿರಾಸೆಯಿಂದಲೇ ವಿಪಕ್ಷಗಳು ಮಾತನಾಡುತ್ತಿವೆ. ಅವಿಶ್ವಾಸ ನಿರ್ಣಯ ಮಂಡಿಸಿದ್ದಾರೆ. 1999ರಲ್ಲೂ ಅವಿಶ್ವಾಸ ನಿರ್ಣಯ ಮಂಡಿಸಿದ್ದರು. ಶರದ್ ಪವಾರ್ ಅವರು ನೇತೃತ್ವದಲ್ಲಿ ಅವಿಶ್ವಾಸ ಮಂಡನೆ ಮಾಡಲಾಗಿತ್ತು. 2003ರಲ್ಲಿ ವಾಜಪೇಯಿ ಸರ್ಕಾರ ಇದ್ದಾಗಲೂ ಮಂಡಿಸಲಾಗಿತ್ತು. ಆಗ ಸೋನಿಯಾ ಗಾಂಧಿ ವಿಪಕ್ಷ ನಾಯಕರಾಗಿದ್ದರು. 2018ರಲ್ಲಿ ಮಲ್ಲಿಕಾರ್ಜುನ ಖರ್ಗೆ ವಿಪಕ್ಷ ನಾಯಕರಾಗಿದ್ದರು. ಅದೀರ್ ರಂಜನ್ ಅವರಿಗೆ ಏನಾಗಿದೆ ಗೊತ್ತಾಗುತ್ತಿಲ್ಲ. ಅದೀರ್ ರಂಜನ್ ಅವರಿಗೆ ಮಾತಾಡಲು ಬಿಡುತ್ತಿಲ್ಲ. ಕಾಂಗ್ರೆಸ್​ನವರು ಅದೀರ್ ರಂಜನ್​​ ಅವರನ್ನ ನಿರ್ಲಕ್ಷಿಸಿದ್ದಾರೆ ಗೊತ್ತಿಲ್ಲ ಕೋಲ್ಕತ್ತದಿಂದ ಫೋನ್ ಬಂದಿರಬೇಕು ಅನ್ಸುತ್ತದೆ ಎಂದು ಹೇಳಿದರು.

ಅವಿಶ್ವಾಸದ ನಿರ್ಣಯದ ಮೇಲೆ ಲೋಕಸಭೆಯಲ್ಲಿ ಭಾಷಣ ಮಾಡಿದ ಅವರು, ವಿಪಕ್ಷ ನಾಯಕರು ಅವಿಶ್ವಾಸ ನಿರ್ಣಯ ಮಂಡಿಸಿದ್ದಾರೆ. ಬರೀ ನೋ ಬಾಲ್ ಎಸೆಯುತ್ತಿದ್ದಾರೆ. ನಮ್ಮ ಸದಸ್ಯರು ಸೆಂಚುರಿ ಬಾರಿಸುತ್ತಿದ್ದಾರೆ. ಎಲ್ಲರೂ ಶ್ರಮ ಪಡಿ, 2018ರಲ್ಲೂ ಇದನ್ನ ಹೇಳಿದ್ದೇನೆ. ಶ್ರಮ ಮಾಡೋದಕ್ಕೆ 5 ವರ್ಷ ನೀಡಿದ್ದೇನೆ. ಏನು ದಾರಿದ್ರ್ಯ ನೋಡಿ ಇನ್ನೂ ಸರಿಯಾಗಿಲ್ಲ ಎಂದು ವಿಪಕ್ಷಗಳನ್ನು ವ್ಯಂಗ್ಯವಾಡಿದರು.

ಕೇಂದ್ರ ಸರ್ಕಾರದ ಮೇಲೆ ದೇಶದ ಜನತೆಗೆ ವಿಶ್ವಾಸವಿದೆ. ಇದು ಕೇಂದ್ರ ಸರ್ಕಾರದ ವಿರುದ್ಧದ ಅವಿಶ್ವಾಸ ನಿರ್ಣಯವಲ್ಲ. ಅವಿಶ್ವಾಸ ನಿರ್ಣಯ ಮಂಡಿಸಿದ್ದಕ್ಕೆ ವಿಪಕ್ಷಗಳಿಗೆ ಧನ್ಯವಾದಗಳು. ಎನ್‌ಡಿಎ ಬಲ ಇಂಡಿಯಾದ ಬಲ ಎಂದರು. ಮುಂಬರುವ 2024ರ ಲೋಕಸಭೆ ಚುನಾವಣೆಯಲ್ಲಿ ಎನ್‌ಡಿಎ ಮೈತ್ರಿಕೂಟವೂ ಎಲ್ಲ ದಾಖಲೆಗಳನ್ನು ಮುರಿದು ಜಯಭೇರಿ ಬಾರಿಸಲಿದೆ ಎಂಬ ವಿಶ್ವಾಸವನ್ನೂ ಮೋದಿ ವ್ಯಕ್ತಪಡಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!