ಹೊಸದಿಗಂತ ಡಿಜಿಟಲ್ ಡೆಸ್ಕ್:
ಐಪಿಎಲ್ 2026ರ 48ನೇ ಹಣಾಹಣಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವು ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಭರ್ಜರಿ ಗೆಲುವು ದಾಖಲಿಸಿದೆ. ಈ ಗೆಲುವಿನ ಹಿಂದೆ ಕೇರಳದ ಸ್ಫೋಟಕ ಬ್ಯಾಟರ್ ಸಂಜು ಸ್ಯಾಮ್ಸನ್ ಅವರ ಅಜೇಯ ಆಟದ ಶಕ್ತಿಯಿದೆ. ಮೊದಲು ಬ್ಯಾಟ್ ಮಾಡಿದ್ದ ಡೆಲ್ಲಿ ತಂಡ ನೀಡಿದ್ದ 156 ರನ್‌ಗಳ ಸಾಧಾರಣ ಗುರಿಯನ್ನು ಸಿಎಸ್‌ಕೆ ಸಂಜು ಅವರ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ ಕೇವಲ 17.3 ಓವರ್‌ಗಳಲ್ಲಿ ತಲುಪಿತು.
ಕೇವಲ 52 ಎಸೆತಗಳನ್ನು ಎದುರಿಸಿದ ಸಂಜು ಸ್ಯಾಮ್ಸನ್ 6 ಸಿಕ್ಸರ್ ಹಾಗೂ 7 ಬೌಂಡರಿಗಳ ನೆರವಿನಿಂದ 87 ರನ್ ಸಿಡಿಸಿ ಅಜೇಯರಾಗಿ ಉಳಿದರು. ತಮಗೆ ಶತಕ ಸಿಡಿಸುವ ಸುವರ್ಣ ಅವಕಾಶವಿದ್ದರೂ, ವೈಯಕ್ತಿಕ ದಾಖಲೆಗಿಂತ ತಂಡದ ಗೆಲುವೇ ಮುಖ್ಯ ಎಂದು ಸಂಜು ಸಾಬೀತುಪಡಿಸಿದರು. ಅಂತಿಮ ಕ್ಷಣಗಳಲ್ಲಿ ಸಿಂಗಲ್ಸ್ ಪಡೆದು ಶತಕದತ್ತ ಗಮನಹರಿಸುವ ಬದಲು, ತಮ್ಮ ಜೊತೆಗಾರ ಕಾರ್ತಿಕ್ ಶರ್ಮಾಗೆ ಸ್ಟ್ರೈಕ್ ನೀಡುವ ಮೂಲಕ ಸಂಜು ಕ್ರೀಡಾಭಿಮಾನಿಗಳ ಮನಗೆದ್ದಿದ್ದಾರೆ.
“ಶತಕಕ್ಕಿಂತ ತಂಡದ ಗೆಲುವು ಮತ್ತು ಅಜೇಯನಾಗಿ ಉಳಿಯುವುದು ನನಗೆ ಹೆಚ್ಚಿನ ತೃಪ್ತಿ ನೀಡುತ್ತದೆ. ಶತಕಕ್ಕಾಗಿ ನಾನು ಸ್ವಾರ್ಥಿಯಾಗಲು ಬಯಸಲಿಲ್ಲ,” ಎಂದು ಪಂದ್ಯ ಶ್ರೇಷ್ಠ ಪ್ರಶಸ್ತಿ ಸ್ವೀಕರಿಸಿದ ನಂತರ ಸಂಜು ಸ್ಯಾಮ್ಸನ್ ನುಡಿದರು.
ಮೈದಾನದಲ್ಲಿ ಅಭಿಮಾನಿಗಳು ‘ಚೇಟ್ಟಾ.. ಚೇಟ್ಟಾ..’ ಎಂದು ಕೂಗುತ್ತಿದ್ದಾಗ ಪ್ರತಿಕ್ರಿಯಿಸಿದ ಅವರು, “ಜನರು ನನ್ನನ್ನು ಪ್ರೀತಿಯಿಂದ ಹಾಗೆ ಕರೆಯುತ್ತಿದ್ದಾರೆ. ಆದರೆ ನನಗೆ ವೈಯಕ್ತಿಕವಾಗಿ ‘ಸಂಜು’ ಎಂದು ಕರೆಸಿಕೊಳ್ಳುವುದೇ ಹೆಚ್ಚು ಇಷ್ಟ,” ಎಂದರು. ಅಲ್ಲದೆ ತಮ್ಮ ಶಾಂತ ಸ್ವಭಾವದ ಬಗ್ಗೆ ಮಾತನಾಡುತ್ತಾ, ತಾಂತ್ರಿಕ ಬದಲಾವಣೆಗಳು ತಮ್ಮ ಬ್ಯಾಟಿಂಗ್ ಸುಧಾರಿಸಲು ಹೇಗೆ ಸಹಾಯ ಮಾಡಿವೆ ಎಂಬುದನ್ನು ಹಂಚಿಕೊಂಡರು.



