June 2, 2026
Tuesday, June 2, 2026
spot_img

ತೃಣಮೂಲ ಕಾಂಗ್ರೆಸ್ ನಾಯಕರಿಗೆ ನೋ ಎಂಟ್ರಿ: ಬಿಜೆಪಿಗೆ ಬೇಡವೇ ಬೇಡ ‘ಟಿಎಂಸಿ ಸಂಸ್ಕೃತಿ’!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಪಶ್ಚಿಮ ಬಂಗಾಳದ ರಾಜಕಾರಣದಲ್ಲಿ ಹಠಾತ್ ಬೆಳವಣಿಗೆಯೊಂದು ನಡೆದಿದ್ದು, ಆಡಳಿತಾರೂಢ ತೃಣಮೂಲ ಕಾಂಗ್ರೆಸ್ (TMC) ಪಕ್ಷದ ಬಂಡಾಯ ನಾಯಕರು ಹಾಗೂ ಕಾರ್ಯಕರ್ತರಿಗೆ ಬಿಜೆಪಿ ಬಿಗ್ ಶಾಕ್ ನೀಡಿದೆ. ಟಿಎಂಸಿ ತೊರೆದು ಕಮಲ ಪಾಳಯ ಸೇರಲು ಕಾಯುತ್ತಿದ್ದ ನಾಯಕರಿಗೆ ಬಿಜೆಪಿ ತನ್ನ ಬಾಗಿಲುಗಳನ್ನು ಸಂಪೂರ್ಣವಾಗಿ ಮುಚ್ಚಿರುವುದಾಗಿ ಅಧಿಕೃತವಾಗಿ ಪ್ರಕಟಿಸಿದೆ. ಯಾವುದೇ ಕಾರಣಕ್ಕೂ ತನ್ನ ಪಕ್ಷವು ‘ತೃಣಮೂಲೀಕರಣ’ ಆಗಲು ಬಿಡುವುದಿಲ್ಲ ಎಂದು ಬಿಜೆಪಿ ಹೈಕಮಾಂಡ್ ಶಪಥ ಮಾಡಿದೆ.

ವಲಸೆ ರಾಜಕಾರಣಕ್ಕೆ ಬ್ರೇಕ್ ಬಿದ್ದಿದ್ದೇಕೆ?

ಬಂಗಾಳ ವಿಧಾನಸಭಾ ಚುನಾವಣೆಗಳ ಮುನ್ನ ಮತ್ತು ನಂತರದ ದಿನಗಳಲ್ಲಿ ಟಿಎಂಸಿಯ ಘಟಾನುಘಟಿ ನಾಯಕರು ಬಿಜೆಪಿಗೆ ಜಿಗಿಯಲು ತೀವ್ರ ಕಸರತ್ತು ನಡೆಸುತ್ತಿದ್ದರು. ಆದರೆ, ಈ ವಲಸೆ ರಾಜಕಾರಣದಿಂದಾಗಿ ಬಿಜೆಪಿಯ ಮೂಲ ಸಿದ್ಧಾಂತಕ್ಕೆ ಹಾಗೂ ನಿಷ್ಠಾವಂತ ಕಾರ್ಯಕರ್ತರಿಗೆ ಭಾರಿ ಧಕ್ಕೆಯಾಗುತ್ತಿದೆ ಎಂಬ ಅಸಮಾಧಾನ ಪಕ್ಷದ ಒಳಗಡೆಯೇ ತೀವ್ರವಾಗಿ ಕೇಳಿಬಂದಿತ್ತು. ಪಶ್ಚಿಮ ಬಂಗಾಳದಲ್ಲಿ ಆರಂಭದಿಂದಲೂ ಬಿಜೆಪಿ ಶಿಸ್ತು ಮತ್ತು ರಾಷ್ಟ್ರೀಯತಾವಾದಿ ಸಿದ್ಧಾಂತವನ್ನು ನೆಚ್ಚಿಕೊಂಡಿದೆ. ಆದರೆ ಟಿಎಂಸಿಯ ಭ್ರಷ್ಟಾಚಾರ ಮತ್ತು ಹಿಂಸಾಚಾರದ ಸಂಸ್ಕೃತಿಯನ್ನು ತೀವ್ರವಾಗಿ ವಿರೋಧಿಸುತ್ತಾ ಬಂದಿರುವ ಬಿಜೆಪಿ, ಈಗ ಅದೇ ಪಕ್ಷದ ನಾಯಕರನ್ನು ಸೇರಿಸಿಕೊಂಡರೆ ಪಕ್ಷದ ವರ್ಚಸ್ಸಿಗೆ ಮಸಿ ಬಳಿದಂತಾಗುತ್ತದೆ ಎಂದು ರಾಜ್ಯ ನಾಯಕತ್ವವು ಕೇಂದ್ರ ವರಿಷ್ಠರಿಗೆ ಮನವರಿಕೆ ಮಾಡಿಕೊಟ್ಟಿದೆ.

ಕಾರ್ಯಕರ್ತರ ಭಾವನೆಗೆ ಮನ್ನಣೆ:

ತಳಮಟ್ಟದಲ್ಲಿ ಟಿಎಂಸಿ ನಾಯಕರ ದೌರ್ಜನ್ಯ ಹಾಗೂ ದಬ್ಬಾಳಿಕೆಯ ವಿರುದ್ಧ ರಕ್ತ ಹರಿಸಿ ಹೋರಾಡಿದವರು ಬಿಜೆಪಿಯ ಸ್ಥಳೀಯ ಕಾರ್ಯಕರ್ತರು. ಹೀಗಿರುವಾಗ, ಅದೇ ಟಿಎಂಸಿ ನಾಯಕರಿಗೆ ಪಕ್ಷದಲ್ಲಿ ಮಣೆ ಹಾಕುವುದನ್ನು ತಳಮಟ್ಟದ ಕಾರ್ಯಕರ್ತರು ತೀವ್ರವಾಗಿ ವಿರೋಧಿಸಿದ್ದರು. ಸದ್ಯ ಕಾರ್ಯಕರ್ತರ ಈ ಆಕ್ರೋಶ ಮತ್ತು ಭಾವನೆಗಳನ್ನು ಗೌರವಿಸಿರುವ ಬಿಜೆಪಿ ಹೈಕಮಾಂಡ್, ವಲಸಿಗರಿಗೆ ನೋ ಎಂಟ್ರಿ ಬೋರ್ಡ್ ತೂಗುಹಾಕಿದೆ.

ಸ್ವಂತ ಬಲದ ಮೇಲೆ ಪಕ್ಷ ಸಂಘಟನೆ:

ಬೇರೆ ಪಕ್ಷದಿಂದ ಬರುವ ಪ್ರಭಾವಿ ನಾಯಕರು ಕೇವಲ ಅಧಿಕಾರದ ಆಸೆಗಾಗಿ ವಲಸೆ ಬರುತ್ತಾರೆ ಮತ್ತು ತಮ್ಮ ಹಳೆಯ ಪಕ್ಷದ ಗುಂಪುಗಾರಿಕೆ ಸಂಸ್ಕೃತಿಯನ್ನು ತರುತ್ತಾರೆ ಎಂಬುದು ಬಿಜೆಪಿಯ ಹಿರಿಯ ನಾಯಕರ ವಾದವಾಗಿದೆ. ಹೀಗಾಗಿ ಇನ್ಮುಂದೆ ಪಶ್ಚಿಮ ಬಂಗಾಳದಲ್ಲಿ ಪರಾವಲಂಬಿ ರಾಜಕಾರಣಕ್ಕೆ ಮುಕ್ತಾಯ ಹಾಡಲು ನಿರ್ಧರಿಸಲಾಗಿದೆ. ಮುಂಬರುವ ಚುನಾವಣೆಗಳಲ್ಲಿ ಬೇರೆ ಪಕ್ಷದ ನಾಯಕರನ್ನು ನಂಬುವ ಬದಲು, ಸ್ವಂತ ಬಲದ ಮೇಲೆ ಸಂಘಟನೆ ಮಾಡಲು ಬಿಜೆಪಿ ಮುಂದಾಗಿದೆ. ಮುಂದಿನ ದಿನಗಳಲ್ಲಿ ಪಕ್ಷಕ್ಕಾಗಿ ದುಡಿದ ನಿಷ್ಠಾವಂತ ಕಾರ್ಯಕರ್ತರು ಮತ್ತು ಯುವ ಮುಖಗಳಿಗೆ ಹೆಚ್ಚಿನ ಜವಾಬ್ದಾರಿ ಹಾಗೂ ಚುನಾವಣಾ ಟಿಕೆಟ್ ನೀಡಲು ಕಮಲ ಪಾಳಯ ಆದ್ಯತೆ ನೀಡಲಿದೆ ಎಂದು ಮೂಲಗಳು ಖಚಿತಪಡಿಸಿವೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !