ಹಿಂದುಗಳ ಯಾವ ದೇವರೂ ಕೂಡ ಬ್ರಾಹ್ಮಣರಲ್ಲ: JNU ಉಪಕುಲಪತಿ ಶಾಂತಿಶ್ರೀ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ದೆಹಲಿಯ ಜೆಎನ್‌ಯುನ ಉಪಕುಲಪತಿ ಶಾಂತಿಶ್ರೀ ಧೂಳಿಪುಡಿ ಪಂಡಿತ್‌ ವಿವಾದಿತ ಹೇಳಿಕೆಯನ್ನು ಸೋಮವಾರ ನೀಡಿದ್ದಾರೆ. ಭಗವಾನ್‌ ಶಿವ ಶೂದ್ರ. ಈತ ವಾಸ ಮಾಡುವುದು ಸ್ಮಶಾನದಲ್ಲಿ ಎಂದು ಹೇಳಿದ್ದಾರೆ.

ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯವು ದೆಹಲಿಯಲ್ಲಿ ವಿಚಾರ ಸಂಕಿರಣವನ್ನು ಆಯೋಜಿಸಿತ್ತು, ಡಾ. ಬಿ.ಆರ್. ಅಂಬೇಡ್ಕರ್ ಲಿಂಗ ನ್ಯಾಯದ ಕುರಿತು ಚಿಂತನೆ: ಏಕರೂಪ ನಾಗರಿಕ ಸಂಹಿತೆಯ ಡಿಕೋಡಿಂಗ್ ಎನ್ನುವುದು ಇದರ ವಿಚಾರವಾಗಿತ್ತು. ಇಲ್ಲಿ ಮಾತನಾಡುವ ವೇಳೆ ವಿವಾದಿತ ಹೇಳಿಕೆಯನ್ನು ನೀಡಿದ್ದಾರೆ.

ಯಾವುದೇ ದೇವತೆ ಬ್ರಾಹ್ಮಣರಲ್ಲ. ಕ್ಷತ್ರಿಯ ಎನ್ನುವುದು ಅತ್ಯುನ್ನತ ಸ್ಥಾನಮಾನ. ಶಿವನು ಪರಿಶಿಷ್ಟ ಜಾತಿ ಅಥವಾ ಪರಿಶಿಷ್ಟ ಪಂಗಡದವನಾಗಿರಬೇಕು, ಏಕೆಂದರೆ ಅವನು ಸ್ಮಶಾನದಲ್ಲಿ ಹಾವಿನ ಜೊತೆ ಕುಳಿತುಕೊಳ್ಳುವ ವ್ಯಕ್ತಿ. ಅಲ್ಲದೆ, ಶಿವನಿಗೆ ಧರಿಸಲು ಬಹಳ ಕಡಿಮೆ ಬಟ್ಟೆಗಳಿದ್ದವು. ಅದಲ್ಲದೆ, ಬಾಹ್ಮಣರು ಯಾರೂ ಕೂಡ ಸ್ಮಶಾನದಲ್ಲಿ ಕುಳಿತುಕೊಳ್ಳುವುದಿಲ್ಲ ಎಂದು ಹೇಳಿದ್ದಾರೆ.

ಇದೆಲ್ಲವನ್ನು ನೋಡಿದರೆ, ದೇವತೆಗಳಲ್ಲಿ ಯಾರೂ ಕೂಡ ಮೇಲ್ಜಾತಿಯಿಂದ ಬಂದವರಲ್ಲ. ನೀವು ನೋಡುವುದಾದರೆ ಲಕ್ಷ್ಮಿ, ಶಕ್ತಿ ಮತ್ತು ಜಗನ್ನಾಥ ಎಲ್ಲಾ ದೇವತೆಗಳು ಬುಡಕಟ್ಟು ಜನಾಂಗದಿಂದ ಬಂದವರು. ಆದರೆ, ಈಗಲೂ ನಾವು ಜಾತಿ ವ್ಯವಸ್ಥೆಯನ್ನು ಮುಂದುವರಿಸುತ್ತಲೇ ಇದ್ದೇವೆ. ಇದು ನಿಜಕ್ಕೂ ಅಮಾನವೀಯವಾಗಿದೆ ಎಂದು ಹೇಳಿದ್ದಾರೆ.

ಭಾರತೀಯ ಸಮಾಜ ಏನಾದರೂ ಒಳ್ಳೆಯದನ್ನು ಮಾಡಲು ಬಯಸಿದರೆ ಜಾತಿಯನ್ನು ತೊಡೆದುಹಾಕುವುದು ಬಹಳ ಮುಖ್ಯ. ತಾರತಮ್ಯ ಮತ್ತು ಅಸಮಾನತೆಯ ಗುರುತಿನ ಬಗ್ಗೆ ನಾವು ಏಕೆ ಭಾವನಾತ್ಮಕವಾಗಿದ್ದೇವೆ ಎಂದು ನನಗೆ ಅರ್ಥವಾಗುತ್ತಿಲ್ಲ. ಈ ಕೃತಕ ಗುರುತನ್ನು ರಕ್ಷಿಸಲು ನಾವು ಯಾರನ್ನೂ ಕೊಲ್ಲಲು ನಾವು ಸಿದ್ಧರಿದ್ದೇವೆ ಎಂದು ಶಾಂತಿಶ್ರೀ ಧೂಳಿಪುಡಿ ಪಂಡಿತ್‌ ಹೇಳಿದ್ದಾರೆ.

ಬೌದ್ಧಧರ್ಮವು ಶ್ರೇಷ್ಠ ಧರ್ಮಗಳಲ್ಲಿ ಒಂದಾಗಿದೆ, ಏಕೆಂದರೆ ಭಾರತೀಯ ನಾಗರಿಕತೆಯು ಭಿನ್ನಾಭಿಪ್ರಾಯ, ವೈವಿಧ್ಯತೆ ಮತ್ತು ವ್ಯತ್ಯಾಸವನ್ನು ಸ್ವೀಕರಿಸುತ್ತದೆ ಎನ್ನುವುದನ್ನು ಅದು ಸಾಬೀತು ಮಾಡಿದೆ. ಗೌತಮ ಬುದ್ಧ ಬ್ರಾಹ್ಮಣ ಹಿಂದೂ ಧರ್ಮದ ಮೊದಲ ವಿರೋಧಿ. ಅವರು ಇತಿಹಾಸದಲ್ಲಿ ಮೊದಲ ವಿಚಾರವಾದಿಯೂ ಹೌದು. ಇಂದು ಡಾ.ಬಾಬಾಸಾಹೇಬ್ ಅಂಬೇಡ್ಕರ್ ಅವರು ಪುನರುಜ್ಜೀವನಗೊಳಿಸಿದ ಸಂಪ್ರದಾಯವನ್ನು ನಾವು ಹೊಂದಿದ್ದೇವೆ ಎಂದು ಹೇಳಿದ್ದಾರೆ.

ರಾಜಸ್ಥಾನದಲ್ಲಿ ಒಂಬತ್ತು ವರ್ಷದ ದಲಿತ ಬಾಲಕನ ಸಾವಿನ ಬಗ್ಗೆಯೂ ಮಾತನಾಡಿದ ಅವರು, ಆ ಹುಡುಗ ಮೇಲ್ಜಾತಿಯ ಶಿಕ್ಷಕನಿಂದ ಹಲ್ಲೆಗೊಳಗಾದ. ದುರದೃಷ್ಟವಶಾತ್ ಇಂದು ಜಾತಿ ಹುಟ್ಟಿನ ಮೇಲೆ ಆಧಾರಿತವಾಗಿದೆ, ಯಾರಾದರೂ ಬ್ರಾಹ್ಮಣ ಅಥವಾ ಚಮ್ಮಾರರಾಗಿದ್ದರೆ, ಅವನು ಹುಟ್ಟಿದ ತಕ್ಷಣ ಅವನು ದಲಿತನಾಗುತ್ತಾನೆಯೇ? ರಾಜಸ್ಥಾನದಲ್ಲಿ ಇತ್ತೀಚೆಗೆ ಒಂದು ಘಟನೆ ನಡೆಯಿತು. ಮೇಲ್ಜಾತಿಯವರಿಗೆ ಸೇರಿದ ನೀರನ್ನು ಬರೀ ಮುಟ್ಟಿದ ಕಾರಣಕ್ಕೆ ಹೊಡೆದು ಸಾಯಿಸಲಾಗಿದೆ. ಇದು ಮಾನವ ಹಕ್ಕುಗಳ ಪ್ರಶ್ನೆಯಾಗಿದೆ. ಮನುಷ್ಯನೊಬ್ಬನನ್ನು ಮನುಷ್ಯ ಈ ರೀತಿಯಾಗಿ ನಡೆಸಿಕೊಳ್ಳಲು ಹೇಗೆ ಸಾಧ್ಯ’ ಎಂದು ಪ್ರಶ್ನೆ ಮಾಡಿದ್ದಾರೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!