ವಿಧಾನಸಭೆ ಚುನಾವಣೆಯಲ್ಲಿ ಯಾರೊಂದಿಗೂ ಹೊಂದಾಣಿಕೆ ಇಲ್ಲ: ನಳಿನ್ ಕುಮಾರ್ ಕಟೀಲ್

ಹೊಸದಿಗಂತ ವರದಿ,ಮೈಸೂರು:

ಬರುವ ವಿಧಾನಸಭೆ ಚುನಾವಣೆಯಲ್ಲಿ ಯಾರೊಂದಿಗೂ ಹೊಂದಾಣಿಕೆ, ಒಳ ಒಪ್ಪಂದವನ್ನು ಮಾಡಿಕೊಳ್ಳುವುದಿಲ್ಲ. 150ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲುವ ಮೂಲಕ ಮತ್ತೊಮ್ಮೆ ಬಿಜೆಪಿ ಸರ್ಕಾರವನ್ನು ಅಧಿಕಾರಕ್ಕೆ ತರುತ್ತೇವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ಕುಮಾರ್ ಕಟೀಲ್ ತಿಳಿಸಿದರು.
ಶನಿವಾರ ಸಂಜೆ ಮೈಸೂರಿನ ವಿದ್ಯಾರಣ್ಯಪುರಂನಲ್ಲಿರುವ ಬೂತಾಳೆ ಮೈದಾನದಲ್ಲಿ ಕೆ.ಆರ್.ಕ್ಷೇತ್ರದ ಬಿಜೆಪಿವತಿಯಿಂದ ಆಯೋಜಿಸಲಾಗಿದ್ದ ಕಾರ್ಯಕರ್ತರ ಸಂಕಲ್ಪ ಸಭೆಯನ್ನು ಶಂಖ ಊದುವ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು, ಪಂಚರತ್ನ ಯಾತ್ರೆ ಕಲ್ಪನೆ ಬಿಜೆಪಿಯದ್ದು, ಅದನ್ನು ಜೆಡಿಎಸ್‌ನವರು ನಕಲಿ ಮಾಡಿಕೊಂಡು ಯಾತ್ರೆ ಮಾಡಲು ಹೊರಟಿದ್ದಾರೆ. 2018ರಲ್ಲಿ ನಡೆದ ಚುನಾವಣೆಯಲ್ಲಿ ರಾಜ್ಯದ ಜನರು ಬಿಜೆಪಿಗೆ ಆಶೀರ್ವಾದ ಮಾಡಿದ್ದರು. 104 ಮಂದಿ ಶಾಸಕರನ್ನು ಹೊಂದಿದ್ದ ಬಿಜೆಪಿ ಅಧಿಕಾರಕ್ಕೆ ಬರಬಾರದು, ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿಯಾಗಬಾರದು ಎಂದು ಸಿದ್ದರಾಮಯ್ಯ, ಜೆಡಿಎಸ್‌ನೊಂದಿಗೆ ಅನೈತಿಕ ಸಂಬAಧವನ್ನು ಬೆಳೆಸಿ, ಹೆಚ್.ಡಿ.ಕುಮಾರಸ್ವಾಮಿ ಅವರನ್ನು ಮುಖ್ಯಮಂತ್ರಿ ಮಾಡಿದರು. ಆದರೆ ಮುಖ್ಯಮಂತ್ರಿಯಾದ ಹೆಚ್.ಡಿ.ಕುಮಾರಸ್ವಾಮಿ, ಕುಮಾರಕೃಪ, ವಿಧಾನಸೌಧದಲ್ಲಿ ಕುಳಿತು ಆಡಳಿತ ನಡೆಸದೆ ಪಂಚತಾರಾ ಹೋಟೆಲ್‌ನಲ್ಲಿ ಕುಳಿತು ಆಡಳಿತ ನಡೆಸಿದರು. ತಮ್ಮ ಪಕ್ಷದಶಾಸಕರು, ಕಾಂಗ್ರೆಸ್ ಶಾಸಕರ ಕೈಗೆ ಸಿಗುತ್ತಿರಲಿಲ್ಲ, ಅವರನ್ನು ಒಳಸಂಚು ನಡೆಸಿ, ಸಿದ್ದರಾಮಯ್ಯನವರೇ ಅಧಿಕಾರದಿಂದ ಕೆಳಕ್ಕೆ ಇಳಿಸಿದರು. ಅವರ ಸಮಿಶ್ರ ಸರ್ಕಾರದ ಆಡಳಿತ ವೈಖರಿಯಿಂದ ಬೇಸೆತ್ತು 17 ಮಂದಿ ಶಾಸಕರು, ಮಂತ್ರಿಯಾಗಿದ್ದರು, ಅವರಿದ್ದ ಪಕ್ಷವನ್ನು ಬಿಟ್ಟು ಬಿಜೆಪಿಗೆ ಬಂದರು. ವಿಪಕ್ಷ ಸ್ಥಾನದಲ್ಲಿದ್ದವರು ಆಡಳಿತ ಪಕ್ಷಕ್ಕೆ ಹೋಗುವುದು ಇಲ್ಲಿಯವರಿಗೆ ನಡೆದುಕೊಂಡು ಬಂದಿತ್ತು. ಆದರೆ ರಾಜ್ಯದಲ್ಲಿ ಹೊಸ ಪ್ರಯೋಗವಾಗಿ ಆಡಳಿತ ಪಕ್ಷದಲ್ಲಿದ್ದವರೇ ಅವರ ಪಕ್ಷವನ್ನು ತೊರೆದು ಬಿಜೆಪಿಗೆ ಬಂದಿದ್ದಾರೆ. ಜನರು ಕೂಡ 17 ಮಂದಿಯಲ್ಲಿ 15 ಮಂದಿಯನ್ನು ಉಪಚುನಾವಣೆಯಲ್ಲಿ ಗೆಲ್ಲಿಸಿ ಕಳುಹಿಸಿದ್ದಾರೆ. ಅಲ್ಲದೇ ಪಂಚಾಯತ್ ಚುನಾವಣೆಗಳಲ್ಲೂ ಬಿಜೆಪಿ ಜಯಭೇರಿ ಭಾರಿಸಿದೆ. ಹಾಗಾಗಿ ಬರುವ ವಿಧಾನಸಭೆ ಚುನಾವಣೆಯಲ್ಲೂ ಬಿಜೆಪಿ 150ಕ್ಕೂ ಹೆಚ್ಚುಸ್ಥಾನಗಳಲ್ಲಿ ಭರ್ಜರಿ ಗೆಲುವು ಸಾಧಿಸುವ ಮೂಲಕ ಮತ್ತೊಮ್ಮೆ ಬಿಜೆಪಿ ಸರ್ಕಾರವೇ ಅಧಿಕಾರಕ್ಕೆ ಬರಲಿದೆ. ಅಪ್ಪ, ಮಕ್ಕಳ ಪಕ್ಷ ಸಮುದ್ರಕ್ಕೆ ಬೀಳಲಿದ್ದಾರೆ. ಅಮ್ಮ, ಮಗ ದೆಹಲಿಗೆ ಹೋಗಲಿದ್ದಾರೆ ಎಂದರು.
ಇಡೀ ದೇಶಕ್ಕೆ ಕೆ.ಆರ್.ಕ್ಷೇತ್ರ ಮಾದರಿಯಾಗಿದೆ; ಮೈಸೂರಿನ ಕೃಷ್ಣರಾಜ ಕ್ಷೇತ್ರದ ಇದೀಗ ಇಡೀ ರಾಜ್ಯಕ್ಕೆ ಮಾತ್ರವಲ್ಲ, ಇಡೀ ದೇಶಕ್ಕೆ ಮಾದರಿಯಾಗಿದೆ. ಇಲ್ಲಿನ ಶಾಸಕ ಎಸ್.ಎ.ರಾಮದಾಸ್ ಅವರು, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಪ್ರತಿಯೊಂದು ಯೋಜನೆಯ ಫಲವನ್ನು ಮನೆ, ಮನೆಗಳಿಗೆ ತಲುಪಿಸುವ ಅದ್ಬುತ ಕೆಲಸಗಳನ್ನು ಮಾಡುತ್ತಿದ್ದಾರೆ. ಪಕ್ಷದ ಆಶಯಗಳು, ಮೋದಿಯವರ ಸಂಕಲ್ಪಗಳನ್ನು ಇಲ್ಲಿ ನೆರವೇರಿಸಲಾಗುತ್ತಿದೆ. ಏನಾದರೂ ಬಡವರಿಗೆ ಅನುಕೂಲವಾಗುವಂತಹ, ಪಕ್ಷವನ್ನು ಬೇರು ಮಟ್ಟದಲ್ಲಿ ಗಟ್ಟಿಗೊಳಿಸುವ ಕಾರ್ಯಕ್ರಮಗಳನ್ನು ಇಲ್ಲಿ ವಿಭಿನ್ನವಾಗಿ ಮಾಡಲಾಗುತ್ತಿದೆ. ಇಲ್ಲಿನ ಅನುಭವವನ್ನು ಪಡೆದು, ಅದನ್ನು ರಾಜ್ಯಮಟ್ಟಕ್ಕೆ ವಿಸ್ತರಿಸುತ್ತಿದ್ದೇವೆ. ಹೊಸ ಹೊಸ ಚಿಂತನೆಗಳು, ಪ್ರಯೋಗಗಳನ್ನು ಈ ಕ್ಷೇತ್ರದಲ್ಲಿ ಮಾಡಲಾಗುತ್ತಿದೆ. ಇದೀಗ ಬೂತ್ ಮಟ್ಟದಲ್ಲಿಯೇ ಬಿಜೆಪಿಯನ್ನು ಗೆಲ್ಲಿಸುವ ಸಂಕಲ್ಪವನ್ನು ಮಾಡಲಾಗಿದೆ. ಮತ್ತೊಂದು ಹೊಸ ಪ್ರಯೋಗವನ್ನು ಇಲ್ಲಿ ನಡೆಸಲಾಗುತ್ತಿದೆ. ಚುನಾವಣೆಯಲ್ಲಿ ಆದಷ್ಟು ಖರ್ಚು ಕಡಿಮೆ ಮಾಡುವುದು, ಚುನಾವಣಾ ಭ್ರಷ್ಟಾಚಾರವನ್ನು ತಡೆಗಟ್ಟುವುದು, ಪ್ರತಿಯೊಂದು ಬೂತ್‌ನ ಎಲ್ಲಾ ಮತಗಳನ್ನು ಬಿಜೆಪಿಗೆ ಹಾಕಿಸುವ ಮೂಲಕ ಬೂತ್ ಮಟ್ಟದಲ್ಲಿಯೇ ಬಿಜೆಪಿಯನ್ನು ಗೆಲ್ಲಿಸುವ ಸಂಕಲ್ಪವನ್ನು ಶಾಸಕ ಎಸ್.ಎ.ರಾಮದಾಸ್ ನೇತೃತ್ವದಲ್ಲಿ ಇಲ್ಲಿನ ಕಾರ್ಯಕರ್ತರು ಮಾಡಿದ್ದಾರೆ. ಇಂತಹ ಹೊಸ ಪ್ರಯೋಗವನ್ನು ಇಡೀ ರಾಜ್ಯಕ್ಕೆ ವಿಸ್ತರಿಸಬೇಕಾಗಿದೆ ಎಂದರು.
ಸಭೆಯಲ್ಲಿ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮಹೇಶ್ ಟೆಂಗಿನಕಾಯಿ, ಉಪಾಧ್ಯಕ್ಷ ರಾಜೇಂದ್ರ, ಬಿಜೆಪಿ ನಗರಾಧ್ಯಕ್ಷ ಟಿ.ಎಸ್.ಶ್ರೀವತ್ಸ, ಪ್ರಧಾನ ಕಾರ್ಯದರ್ಶಿ ಹೆಚ್.ಜಿ.ಗಿರಿಧರ್, ಮೈಸೂರು ವಿಭಾಗೀಯ ಪ್ರಭಾರಿ ಮೈ.ವಿ.ರವಿಶಂಕರ್, ನಗರ ಪ್ರಭಾರಿ ಹಿರೇಂದ್ರಷಾ, ಪ್ರಧಾನ ಕಾರ್ಯದರ್ಶಿಗಳಾದ ವಾಣೀಶ್ ಕುಮಾರ್, ಸೋಮಸುಂದರ್, ನಗರಪಾಲಿಕೆಯ ಮೇಯರ್ ಶಿವಕುಮಾರ್, ಉಪಮೇಯರ್ ರೂಪಾ, ವಿಧಾನಪರಿಷತ್ ಮಾಜಿ ಸದಸ್ಯ ತೋಂಟದಾರ್ಯ, ವಸ್ತು ಪ್ರದರ್ಶನ ಪ್ರಾಧಿಕಾರದ ಮಾಜಿ ಅಧ್ಯಕ್ಷ ಹೇಮಂತ್ ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!