August 9, 2026
Sunday, August 9, 2026
spot_img

ಯಾವುದೇ ಸರ್ಕಾರ ಇರಲಿ, ಸಂಪುಟ ವಿಸ್ತರಣೆ ವೇಳೆ ಅಸಮಾಧಾನ ಇದ್ದೇ ಇರುತ್ತೆ: ಸಚಿವ ಯತೀಂದ್ರ ಸಿದ್ದರಾಮಯ್ಯ

ಹೊಸದಿಗಂತ ವರದಿ ವಿಜಯಪುರ:

ಸಚಿವ ಸಂಪುಟ ಪುನರ್ ರಚನೆ ಅಥವಾ ವಿಸ್ತರಣೆ ಆದಾಗ ಯಾವುದೇ ಸರ್ಕಾರ ಇರಲಿ ಅಸಮಾಧಾನ ಇರುತ್ತೆ ಎಂದು ನಗರಾಭಿವೃದ್ಧಿ ಸಚಿವ ಯತೀಂದ್ರ ಸಿದ್ದರಾಮಯ್ಯ ಹೇಳಿದರು.

ಸಚಿವ ಸಂಪುಟ ವಿಸ್ತರಣೆಯಿಂದ ಕೆಲವರ ಅಸಮಾಧಾನ ವಿಚಾರಕ್ಕೆ ನಗರದಲ್ಲಿ ಪ್ರತಿಕ್ರಿಯಿಸಿದ ಅವರು, ಖಾತೆ ಹಂಚಿಕೆ ಕುರಿತು ಇದೂವರೆಗೂ ಯಾವುದೇ ತೀರ್ಮಾನ ಆಗಿಲ್ಲ. ಯಾರಿಗೆ ಯಾವ ಖಾತೆ ಬೇಕು ಅವರು ಹೈಕಮಾಂಡ್‌ನಲ್ಲಿ ಮನವಿ ಮಾಡುತ್ತಾರೆ. ಆದರೆ ಅದನ್ನು ತೀರ್ಮಾನ ಮಾಡುವುದು ಹೈಕಮಾಂಡ್ ಎಂದರು.

ಬಿಡದಿ ಟೌನ್ ಶಿಪ್ ವಿರೋಧಿಸಿ ಜೆಡಿಎಸ್, ಬಿಜೆಪಿ ಪಾದಯಾತ್ರೆ ವಿಚಾರ ಬಗ್ಗೆ ಪ್ರತಿಕ್ರಿಯಿಸಿ, ಈಗಾಗಲೇ ಬಿಡದಿ ಟೌನ್‌ಶಿಪ್ ಬಗ್ಗೆ ಮುಖ್ಯಮಂತ್ರಿಗಳೆಲ್ಲ ಹೇಳಿದ್ದಾರೆ. ಅದು ಯಾವುದೂ ಕೂಡ ನಾವು ಬಲವಂತವಾಗಿ ರೈತರಿಂದ ಕಿತ್ತುಕೊಳ್ಳುತ್ತಿಲ್ಲ. ಅದು ವಾಲಂಟರಿಯಾಗಿ ಯಾರು ಕೊಡೋಕೆ ಇಷ್ಟ ಇದೆಯೋ, ಅವರು ಅವರಿಂದ ಭೂಸ್ವಾಧೀನ ಮಾಡಿಕೊಳ್ಳುತ್ತೇವೆ. ಹಾಗಾಗಿ ಯಾರದ್ದೂ ಬಲವಂತ ಇಲ್ಲದೆ ಇದ್ದಾಗ ಇವರು ಅನಾವಶ್ಯಕವಾಗಿ ರೈತರನ್ನ ಸುಮ್ಮನೆ ತಪ್ಪು ದಾರಿಗೆ ಎಳೆಯುತ್ತಿದ್ದಾರೆ ಎಂದರು.

ಸಿಎಂ ಡಿಕೆಶಿ ಸರ್ಕಾರ ಟೇಕಾಫ್ ಆಗುತ್ತಿಲ್ಲ ಎಂಬ ವಿಚಾರಕ್ಕೆ, ಯಾಕೆ ಟೇಕ್ ಆಫ್ ಆಗ್ತಿಲ್ಲ. ಸಂಪುಟ ವಿಸ್ತರಣೆ ಆಗಿ ಈಗ ಒಂದೆರಡು ವಾರ ಆಗಿದೆ. ಅದಕ್ಕಿಂತ ಮುಂಚೆಯಿಂದಲೂ ಸರ್ಕಾರ ಬಂದು 3 ತಿಂಗಳು ಆಗ್ತಾ ಬಂತು. ಡಿ.ಕೆ.ಶಿವಕುಮಾರ ಸರ್ಕಾರ ಬಂದ ತಕ್ಷಣವೇ ಹಲವಾರು ಪ್ರೋಗ್ರಾಮ್‌ಗಳನ್ನ ನಾವು ಅನೌನ್ಸ್ ಮಾಡಿದ್ದೀವಿ. ಮೊದಲ ಕ್ಯಾಬಿನೆಟ್‌ನಲ್ಲೇ ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ಮಾಡಿದ್ದೀವಿ. ಸಾವಿರ ಕೋಟಿಯಲ್ಲಿ ಭಾರತ ಜೋಡೋ ಕ್ಲಬ್‌ಗಳನ್ನ ಮಾಡಿದ್ದೀವಿ. ಬಿ ಖಾತೆಗಳನ್ನ ಎ ಖಾತೆಗಳನ್ನ ಮಾಡಬೇಕು ಅಂತ ಹೇಳಿದ್ದೀವಿ. ಬರ ಪರಿಸ್ಥಿತಿ ಬಂತು, ಬರ ಪರಿಸ್ಥಿತಿ ಬಂದಾಗ ಸೀರೀಸ್ ಆಫ್ ಮೀಟಿಂಗ್ ಮುಖ್ಯಮಂತ್ರಿಗಳು ಸೇರಿದಂತೆ ಇದ್ದಂತಹ ಎಲ್ಲ ಮಂತ್ರಿಗಳು ಕೂಡ ಮಾಡಿದ್ದೀವಿ. ನಾವೆಲ್ಲ ನಮ್ಮ ಉಸ್ತುವಾರಿ ಜಿಲ್ಲೆಗಳಿಗೆ ಭೇಟಿ ಮಾಡಿದ್ದೀವಿ. ಈಗ ತಾಲೂಕು ಮಟ್ಟದಲ್ಲೂ ಹೋಗಿ ಎಲ್ಲ ಕಡೆ ಬರ ಪರಿವೀಕ್ಷಣೆ ಮಾಡಿಕೊಂಡು ಬಂದಿದ್ದೀವಿ. ಹಾಗಾಗಿ ಸರ್ಕಾರ ಕೆಲಸ ಮಾಡ್ತಾ ಇದೆ ಎಂದು ತಿಳಿಸಿದರು.

ಇದನ್ನೂ ಓದಿ:

ಸಂಪುಟ ವಿಸ್ತರಣೆ ವೇಳೆ ಸಿದ್ದರಾಮಯ್ಯ ಆಪ್ತರಿಗೆ ಸಚಿವ ಸ್ಥಾನ ಸಿಕ್ಕಿಲ್ಲ ಎಂದು ಅಸಮಾಧಾನ ವಿಚಾರದ ಬಗ್ಗೆ, ಸಿದ್ದರಾಮಯ್ಯನವರು ಅಸಮಾಧಾನ ಆಗಿದ್ದಾರೆ ಎಂದು ಯಾರು ಹೇಳಿದ್ದು. ತಂದೆಯವರೇ ಬಂದು ಬಹಿರಂಗವಾಗಿ ಬಂದು ಅಸಮಾಧಾನ ಇಲ್ಲ ಎಂದು ಹೇಳಿದ್ದಾರೆ. ನಾನೇ ತಂದೆಯವರ ಜೊತೆ ಇದ್ದೀನಲ್ಲ. ಅವರಿಗೆ ಏನು ಅಸಮಾಧಾನ ಇಲ್ಲ. ಮತ್ತೆ ಮೂಲೆಗುಂಪು ಕೂಡ ಮಾಡಿಲ್ಲ. ಸಚಿವ ಸಂಪುಟ ವಿಸ್ತರಣೆ ಮಾಡಬೇಕಾದರೆ ತಂದೆಯವರನ್ನ ಕರೆದು, ಅವರ ಅಭಿಪ್ರಾಯಗಳನ್ನು ತೆಗೆದುಕೊಂಡಿದ್ದಾರೆ. ಅವರದ್ದು, ಅಭ್ಯರ್ಥಿಗಳ ಪಟ್ಟಿ ಕೊಟ್ಟಿದ್ದರು, ಅದನ್ನೂ ಇಟ್ಟುಕೊಂಡು ಅದರಲ್ಲಿ ಎಷ್ಟು ಸಾಧ್ಯವಾಗುತ್ತೋ ಅಷ್ಟು ಮಾಡಿದ್ದಾರೆ. ತಂದೆಯವರಿಗೂ ಗೊತ್ತಿತ್ತು. ಇದ್ದಿದ್ದೇ 15 ಸ್ಥಾನಗಳು, ಅದರೊಳಗೆ ತಂದೆಯವರು ಹೆಚ್ಚಿನ ಹೆಸರೇ ಕೊಟ್ಟಿದ್ದರು. ಅದರೊಳಗೆ ಅವರು ಕೆಲವರನ್ನ ಪಿಕ್ ಮಾಡಿಕೊಂಡಿದ್ದಾರೆ. ಹಾಗಾಗಿ ತಂದೆಯವರಿಗೆ ಏನು ಅಸಮಾಧಾನ ಇಲ್ಲ ಎಂದು ತಿಳಿಸಿದರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !