ಆಂಬ್ಯುಲೆನ್ಸ್ ಡೀಸೆಲ್’ಗೆ ಹಣವಿಲ್ಲ: ಆರೋಪ

ಹೊಸದಿಗಂತ ವರದಿ, ಕೊಡಗು:

ಇಡೀ ವಿಶ್ವವನ್ನೇ ಕಾಡುತ್ತಿರುವ ಕೋವಿಡ್ ಸೋಂಕು ನಿವಾರಣೆಗೆ ಕಟಿಬದ್ಧವಾಗಿರುವುದಾಗಿ ಆಡಳಿತ ವ್ಯವಸ್ಥೆಗಳು ಹೇಳಿಕೊಳ್ಳುತ್ತಿವೆ. ಆದರೆ ಕನಿಷ್ಟ ಆಂಬ್ಯುಲೆನ್ಸ್’ಗೆ ಡೀಸೆಲ್ ಹಾಕುವುದಕ್ಕೂ ಹಣವಿಲ್ಲದ ಪರಿಸ್ಥಿತಿಯಲ್ಲಿ ಆರೋಗ್ಯ ಇಲಾಖೆ ಇದೆ ಎನ್ನುವುದನ್ನು ಶನಿವಾರಸಂತೆ ಆಸ್ಪತ್ರೆಯ ಆಂಬ್ಯುಲೆನ್ಸ್ ಸಾಬೀತುಪಡಿಸಿದೆ.
ತುರ್ತು ಸಂದರ್ಭಗಳಲ್ಲಿ ರೋಗಿಗಳಿಗೆ ಆಂಬ್ಯುಲೆನ್ಸ್ ಲಭ್ಯವಾಗದೆ ಮೂರು ತಿಂಗಳುಗಳೇ ಕಳೆದಿವೆ. ಕಾರಣ ಕೇಳಿದರೆ ಡೀಸೆಲ್’ಗೆ ಅನುದಾನವಿಲ್ಲ ಎನ್ನುವ ಉತ್ತರ ವೈದ್ಯಾಧಿಕಾರಿಗಳಿಂದ ಕೇಳಿ ಬರುತ್ತಿದೆ.
ಒಂದು ತಿಂಗಳ ಹಿಂದೆ ರಾಮನಹಳ್ಳಿಯ ವ್ಯಕ್ತಿಯೊಬ್ಬರಿಗೆ ಗೋಪಾಲಪುರದಲ್ಲಿ ಅಪಘಾತವಾಗಿ ಚಿಕಿತ್ಸೆಗಾಗಿ ಶನಿವಾರಸಂತೆ ಆಸ್ಪತ್ರೆಗೆ ಕರೆ ತರಲಾಗಿತ್ತು. ಹೆಚ್ಚಿನ ಚಿಕಿತ್ಸೆಗಾಗಿ ಹಾಸನದ ಆಸ್ಪತ್ರೆಗೆ ಕರೆದೊಯ್ಯುವಂತೆ ವೈದ್ಯರು ಸೂಚಿಸಿದರಾದರೂ ಆಂಬ್ಯುಲೆನ್ಸ್ ರೋಗಗ್ರಸ್ತವಾಗಿತ್ತು. ಈ ಕುರಿತು ಕರ್ನಾಟಕ ರಕ್ಷಣಾ ವೇದಿಕೆಯ ಸೋಮವಾರಪೇಟೆ ತಾಲೂಕು ಅಧ್ಯಕ್ಷ ಫ್ರಾನ್ಸಿಸ್ ಡಿಸೋಜ ಅವರು ಪ್ರಶ್ನಿಸಿದಾಗ ಡೀಸೆಲ್ ಇಲ್ಲ ಎನ್ನುವ ಉತ್ತರ ಕೇಳಿ ಬಂದಿದೆ.
ಪರಿಸ್ಥಿತಿ ಸರಿಹೋಗುವ ವಿಶ್ವಾಸವಿತ್ತಾದರೂ ಮೂರು ತಿಂಗಳು ಕಳೆದರೂ ಆಂಬ್ಯುಲೆನ್ಸ್ ಶೆಡ್ ಬಿಟ್ಟು ಹೊರ ಬಂದಿಲ್ಲ. ಸಾರ್ವಜನಿಕರ ಒತ್ತಾಯದ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ಹೊಸ ಆಂಬ್ಯುಲೆನ್ಸ್ ತರಲಾಗಿದೆ. ಆದರೆ ರೋಗಿಗಳಿಗೆ ಇದರಿಂದ ಯಾವುದೇ ಪ್ರಯೋಜವಿಲ್ಲದಾಗಿದ್ದು, ಡೀಸೆಲ್’ಗೆ ಅನುದಾನವಿಲ್ಲ ಎನ್ನುವ ಹಾಸ್ಯಾಸ್ಪದ ಉತ್ತರ ಕೇಳಿ ಬರುತ್ತಿದೆ.
ಜಿಲ್ಲಾ ಆರೋಗ್ಯಾಧಿಕಾರಿಗಳು ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ರೋಗ ಫ್ರಾನ್ಸಿಸ್ ಡಿಸೋಜ, ಆರೋಗ್ಯ ಇಲಾಖೆಯಲ್ಲಿ ಅಸಹಾಯಕ ಮನೋಭಾವದ ಸೇವೆ ಸರಿಯಲ್ಲವೆಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಜಿಲ್ಲೆಯಲ್ಲಿರುವ ಎಲ್ಲಾ ಸರಕಾರಿ ಆಸ್ಪತ್ರೆಗಳ ಆಂಬ್ಯುಲೆನ್ಸ್’ಗಳ ಸ್ಥಿತಿಗತಿಯ ಬಗ್ಗೆ ವರದಿ ಪಡೆದು ದುರಸ್ತಿ ಪಡಿಸುವ ಮತ್ತು ಡೀಸೆಲ್’ಗೆ ಅನುದಾನ ಬಿಡುಗಡೆ ಮಾಡುವ ಮೂಲಕ ರೋಗಿಗಳಿಗೆ ಅನುಕೂಲ ಕಲ್ಪಿಸಬೇಕೆಂದು ಅವರು ಆಗ್ರಹಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!