May 25, 2026
Monday, May 25, 2026
spot_img

ಇನ್ಮುಂದೆ ರಾಜಕೀಯ ಮಾತಾಡಲ್ಲ! ಡಿಸಿಎಂ ಡಿ.ಕೆ.ಶಿವಕುಮಾರ್ ಮಹತ್ವದ ಘೋಷಣೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕರ್ನಾಟಕ ರಾಜಕೀಯದಲ್ಲಿ ಕಳೆದ ಕೆಲವು ದಿನಗಳಿಂದ ಕೇಳಿಬರುತ್ತಿರುವ ನಾಯಕತ್ವ ಬದಲಾವಣೆಯ ವದಂತಿಗಳಿಗೆ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸ್ಪಷ್ಟನೆ ನೀಡಿದ್ದಾರೆ. “ನಮ್ಮಲ್ಲಿ ನಾಯಕತ್ವದ ವಿಚಾರದಲ್ಲಿ ಯಾವುದೇ ಭಿನ್ನಾಭಿಪ್ರಾಯಗಳಿಲ್ಲ. ಹೈಕಮಾಂಡ್ ಏನು ಸೂಚನೆ ನೀಡುತ್ತದೆಯೋ ಅದರಂತೆ ನಾನು ಮತ್ತು ಮುಖ್ಯಮಂತ್ರಿಗಳು ನಡೆದುಕೊಳ್ಳುತ್ತೇವೆ,” ಎಂದು ಅವರು ಪ್ರತಿಪಾದಿಸಿದ್ದಾರೆ.

ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಈ ಕೆಳಗಿನ ಪ್ರಮುಖ ಅಂಶಗಳನ್ನು ಹಂಚಿಕೊಂಡರು.

ದೆಹಲಿ ಭೇಟಿ ಹಾಗೂ ಮುಂದಿನ ರಾಜಕೀಯ ಬೆಳವಣಿಗೆಗಳ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಅವರು, “ನಾನು ಇನ್ಮುಂದೆ ಮಾಧ್ಯಮಗಳ ಮುಂದೆ ರಾಜಕೀಯ ವಿಚಾರಗಳ ಬಗ್ಗೆ ಚರ್ಚಿಸುವುದಿಲ್ಲ. ಸಮಯ ಬಂದಾಗ ಎಲ್ಲವೂ ತಾನಾಗಿಯೇ ತಿಳಿಯಲಿದೆ. ಯಾವ ಸಮಯದಲ್ಲಿ ಏನು ನಿರ್ಧಾರವಾಗಬೇಕೋ ಅದು ಖಂಡಿತವಾಗಿಯೂ ಆಗಲಿದೆ,” ಎಂದು ಮಾರ್ಮಿಕವಾಗಿ ಹೇಳಿದರು.

ಸಚಿವ ಸತೀಶ್ ಜಾರಕಿಹೊಳಿ ಅವರ ‘ಪಕ್ಷದಲ್ಲಿ ಗೊಂದಲಗಳಿವೆ’ ಎಂಬ ಹೇಳಿಕೆಗೆ ಪ್ರತಿಕ್ರಿಯಿಸಿದ ಡಿಕೆಶಿ, “ನಮಗೆ ನಮ್ಮ ಪಕ್ಷದ ನಾಯಕತ್ವದ ಮೇಲೆ ಸಂಪೂರ್ಣ ವಿಶ್ವಾಸವಿದೆ. ಪಕ್ಷದ ಹಿತದೃಷ್ಟಿಯಿಂದ ಯಾವಾಗ ಯಾವ ತೀರ್ಮಾನ ತೆಗೆದುಕೊಳ್ಳಬೇಕು ಎಂಬುದು ಹೈಕಮಾಂಡ್ ಗೆ ತಿಳಿದಿದೆ. ಈಗಾಗಲೇ ಏನೇನು ತೀರ್ಮಾನಗಳಾಗಿವೆಯೋ ಅವುಗಳು ನಿಗದಿತ ಸಮಯದಲ್ಲಿ ಜಾರಿಗೆ ಬರಲಿವೆ,” ಎಂದರು.

ನಾಯಕತ್ವ ಬದಲಾವಣೆಯ ಬಗ್ಗೆ ಮಾಧ್ಯಮಗಳಲ್ಲಿ ಸೃಷ್ಟಿಯಾಗಿರುವ ಚರ್ಚೆಗಳ ಬಗ್ಗೆ ಮಾತನಾಡಿದ ಅವರು, “ಇದು ನಿಮಗೆ ದೊಡ್ಡ ವಿಚಾರವಾಗಿರಬಹುದು, ಆದರೆ ನಾನು ಈ ಬಗ್ಗೆ ಎಲ್ಲಿಯೂ ಚರ್ಚೆ ಮಾಡಿಲ್ಲ. ಹೈಕಮಾಂಡ್ ಆದೇಶಕ್ಕೆ ತಲೆಬಾಗುವುದು ನಮ್ಮ ಕರ್ತವ್ಯ,” ಎಂದು ಹೇಳುವ ಮೂಲಕ ಸದ್ಯಕ್ಕೆ ಎದ್ದಿರುವ ವಿವಾದಗಳಿಗೆ ತೆರೆ ಎಳೆಯಲು ಪ್ರಯತ್ನಿಸಿದರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !