ಇನ್ಮುಂದೆ ವಾಹನದ ನಂಬರ್‌ಪ್ಲೇಟ್ ಮೇಲೆ‌ ಹೆಸರು, ಹುದ್ದೆಗಳನ್ನು ಹಾಕುವಂತಿಲ್ಲ: ರಾಜ್ಯ ಸರ್ಕಾರ ಆದೇಶ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌

ರಾಜ್ಯದಲ್ಲಿ ಯಾವುದೇ ವಾಹನಗಳ ನೋಂದಣಿ ಫಲಕಗಳ ಮೇಲೆ ನಿಯಮಬಾಹಿರವಾಗಿ ಪ್ರದರ್ಶಿಸುತ್ತಿರುವ ಸಂಘ, ಸಂಸ್ಥೆಗಳ ಹೆಸರು, ಚಿನ್ನೆ, ಲಾಂಛನವನ್ನು ಸರ್ಕಾರ ಅಧಿಕೃತವಾಗಿ ತೆರವುಗೊಳಿಸುವಂತೆ ಆದೇಶ ಹೊರಡಿಸಿದೆ.
ಈ ಕುರಿತಂತೆ ರಾಜ್ಯ ಸರ್ಕಾರ ಮುಖ್ಯ ಕಾರ್ಯದರ್ಶಿ ಪಿ ರವಿಕುಮಾರ್ ಅವರು ಸುತ್ತೋಲೆ ಹೊರಡಿಸಿದ್ದು, ವಾಹನಗಳ ನೋಂದಣಿ ಸಂಖ್ಯಾ ಫಲಕಗಳನ್ನು ಕೇಂದ್ರ ಮೋಟಾರು ವಾಹನಗಳ ನಿಯಮದ ಮಾನದಂಡಗಳಿಗೆ ಅನುಗುಣವಾಗಿ ಅಳವಡಿಸಬೇಕಾಗಿರುತ್ತದೆ ಎಂದು ತಿಳಿಸಿದ್ದಾರೆ.
ಖಾಸಗಿ ವಾಹನಗಳು ಸರ್ಕಾರದ ಲಾಂಛನ ಮತ್ತು ಹೆಸರುಗಳನ್ನು ವಾಹನಗಳ ಮೇಲೆ ಪ್ರದರ್ಶಿಸುವುದನ್ನು ನಿರ್ಬಂಧಿಸಲಾಗಿದೆ. ತಮ್ಮ ವಾಹನಗಳ ಮೇಲೆ ಸರ್ಕಾರಿ ಲಾಂಛನ ಅಥವಾ ಹೆಸರುಗಳನ್ನು ಅಳವಡಿಸಬೇಕಾದಲ್ಲಿ, ಕೇಂದ್ರ ಸರ್ಕಾರದಿಂದ ಅನುಮತಿ ಪಡೆದುಕೊಳ್ಳುವುದು ಅವಶ್ಯಕ.
ಈ ಬಗ್ಗೆ ಕೋರ್ಟ್ ಆದೇಶ ಕೂಡ ಇದ್ದು, ಸರ್ಕಾರದ ಲಾಂಛನಗಳನ್ನು ಉಪಯೋಗಿಸದಂತೆ ಹಾಗೂ ವಾಹನಗಳ ಮೇಲೆ ನಿಗಮ, ಮಂಡಳಿ ಮತ್ತು ಸಂಸ್ಥೆಗಳ ಹೆಸರುಗಳನ್ನು ಬರೆದ ಯಾವುದೇ ತರಹದ ಫಲಕ ಅಥವಾ ಬರಹಗಳನ್ನು ಅಳವಡಿಸಬಾರದು ಎಂದು ಸ್ಪಷ್ಟ ಆದೇಶ ಮಾಡಿದ್ದು, ನ್ಯಾಯಾಲಯದ ಆದೇಶದಂತೆ ಸೂಕ್ತ ಕ್ರಮ ತೆಗೆದುಕೊಂಡು, ತ್ವರಿತವಾಗಿ ಅನಧಿಕೃತ ಫಲಕಗಳನ್ನು ತೆರವುಗೊಳಿಸಲು ಮತ್ತು ತೆಗೆದುಕೊಂಡ ಕ್ರಮಗಳ ವಿವರಗಳನ್ನು ಮಾಹಿತಿ ರೂಪದಲ್ಲಿ ನೀಡಲು ತಿಳಿಸಿದ್ದಾರೆ.
. ನಿಯಮದ ಪ್ರಕಾರ, ವಾಹನದ ನಂಬರ್‌ಪ್ಲೇಟ್ ಮೇಲೆ ಯಾವುದೇ ಹೆಸರು, ಹುದ್ದೆಯನ್ನು ಹಾಕುವಂತಿಲ್ಲ.ಆದೇಶ ಪಾಲನೆಯ ಗಡುವಿನ ಬಳಿಕ ನಾಮಫಲಕ ತೆರವುಗೊಳಿಸದಿದ್ರೆ ಅಂತಹ ವಾಹನ ಮಾಲೀಕರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಆದೇಶದಲ್ಲಿ ತಿಳಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!