ಮಕ್ಕಳ ಭವಿಷ್ಯವನ್ನು ರೂಪಿಸುವಲ್ಲಿ ಅವರ ಬೆಳಗಿನ ದಿನಚರಿ ಅತ್ಯಂತ ಪ್ರಮುಖ ಪಾತ್ರ ವಹಿಸುತ್ತದೆ. ಮುಂಜಾನೆ ಮಕ್ಕಳು ಎದ್ದೇಳುವ ಶೈಲಿ ಮತ್ತು ಅವರ ಮೊದಲ ಒಂದು ಗಂಟೆಯ ವಾತಾವರಣವು ಅವರ ಇಡೀ ದಿನದ ಉತ್ಸಾಹ, ಏಕಾಗ್ರತೆ ಮತ್ತು ಮಾನಸಿಕ ಆರೋಗ್ಯವನ್ನು ನಿರ್ಧರಿಸುತ್ತದೆ. ಮಕ್ಕಳ ಮುಂಜಾವು ಸಕಾರಾತ್ಮಕವಾಗಿ ಮತ್ತು ಆನಂದದಾಯಕವಾಗಿರಲು ಪೋಷಕರು ಅಳವಡಿಸಿಕೊಳ್ಳಬೇಕಾದ ಪ್ರಮುಖ ಅಂಶಗಳ ಬಗ್ದಗೆ ತಿಳಿಯೋಣ.
ಪ್ರೀತಿ ಮತ್ತು ಸಕಾರಾತ್ಮಕತೆಯೊಂದಿಗೆ ದಿನದ ಆರಂಭ
ಮಕ್ಕಳನ್ನು ಕೂಗಾಡಿ, ಗದರಿಸಿ ಅಥವಾ ಜಗಳವಾಡಿ ಎಬ್ಬಿಸಬಾರದು. ಪ್ರೀತಿಯಿಂದ ಬೆನ್ನು ಸವರಿ, ಮುದ್ದಾಡಿ ಅಥವಾ ಅವರ ನೆಚ್ಚಿನ ಸಣ್ಣ ಸಂಗೀತವನ್ನು ಹಾಡುವ ಮೂಲಕ ಎಬ್ಬಿಸಬೇಕು. ಎದ್ದ ತಕ್ಷಣ ಸಕಾರಾತ್ಮಕ ಮಾತುಗಳನ್ನು ಆಡುವುದರಿಂದ ಮಕ್ಕಳಲ್ಲಿ ಆತ್ಮವಿಶ್ವಾಸ ಹೆಚ್ಚುತ್ತದೆ.
ಮೊಬೈಲ್ ಮತ್ತು ಟಿವಿ ಪರದೆಗಳಿಂದ ದೂರ
ಬೆಳಿಗ್ಗೆ ಎದ್ದ ತಕ್ಷಣ ಮಕ್ಕಳಿಗೆ ಮೊಬೈಲ್ ಫೋನ್ ನೀಡುವುದು ಅಥವಾ ಟಿವಿ ಆನ್ ಮಾಡುವುದು ಅವರ ಮೆದುಳಿನ ಬೆಳವಣಿಗೆಯ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ. ಕನಿಷ್ಠ 10 ನಿಮಿಷಗಳ ಕಾಲ ಕಿಟಕಿಯಿಂದ ಹೊರಗೆ ನೋಡಲು, ಗಿಡ-ಮರಗಳನ್ನು ವೀಕ್ಷಿಸಲು ಅಥವಾ ತಂಗಾಳಿಯನ್ನು ಆಸ್ವಾದಿಸಲು ಪ್ರೇರೇಪಿಸಬೇಕು. ಇದು ಅವರ ಕಣ್ಣು ಮತ್ತು ಮನಸ್ಸಿಗೆ ತಂಪು ನೀಡುತ್ತದೆ.
ಲಘು ವ್ಯಾಯಾಮ ಮತ್ತು ದೈಹಿಕ ಚಟುವಟಿಕೆ
ಎದ್ದ ತಕ್ಷಣ 3-4 ಬಾರಿ ಆಳವಾದ ಉಸಿರಾಟ ಮಾಡಿಸುವುದನ್ನು ರೂಢಿ ಮಾಡಿ. ಕೇವಲ 5 ರಿಂದ 10 ನಿಮಿಷಗಳ ಕಾಲ ಲಘು ವ್ಯಾಯಾಮ ಅಥವಾ ಯೋಗಾಸನ ಮಾಡಿಸುವುದರಿಂದ ಅವರ ದೇಹದಲ್ಲಿ ರಕ್ತಸಂಚಲನ ಸುಧಾರಿಸಿ, ಇಡೀ ದಿನ ಚುರುಕಾಗಿರಲು ಸಹಾಯವಾಗುತ್ತದೆ.
ಪೌಷ್ಟಿಕಾಂಶಯುಕ್ತ ಉಪಹಾರ
ಬೆಳಗಿನ ತಿಂಡಿ ಮಕ್ಕಳ ಮೆದುಳಿಗೆ ಇಂಧನದಂತೆ ಕೆಲಸ ಮಾಡುತ್ತದೆ. ಯಾವುದೇ ಕಾರಣಕ್ಕೂ ಉಪಹಾರವನ್ನು ಬಿಡಿಸಬಾರದು. ಪ್ಯಾಕೆಟ್ ಆಹಾರಗಳು ಅಥವಾ ಮೈದಾದಿಂದ ಮಾಡಿದ ತಿಂಡಿಗಳ ಬದಲಿಗೆ ಇಡ್ಲಿ, ದೋಸೆ, ಉಪ್ಪಿಟ್ಟು, ಮೊಳಕೆ ಬರಿಸಿದ ಕಾಳುಗಳು ಮತ್ತು ತಾಜಾ ಹಣ್ಣುಗಳನ್ನು ನೀಡಬೇಕು.
ದಿನದ ಯೋಜನೆ ಮತ್ತು ಜವಾಬ್ದಾರಿ
ಮಕ್ಕಳು ಎದ್ದ ತಕ್ಷಣ ತಮ್ಮ ಹಾಸಿಗೆಯನ್ನು ತಾವೇ ಮಡಚಿಡುವುದು, ತಮ್ಮ ಶಾಲೆಯ ಬ್ಯಾಗ್ ಅಥವಾ ಬಟ್ಟೆಗಳನ್ನು ಜೋಡಿಸಿಕೊಳ್ಳುವುದನ್ನು ಕಲಿಸಬೇಕು. ಇದು ಅವರಲ್ಲಿ ಸ್ವಾವಲಂಬನೆ ಮೂಡಿಸುತ್ತದೆ. ಶಾಲೆಗೆ ಹೊರಡುವಾಗ ಯಾವುದೇ ಒತ್ತಡವಿಲ್ಲದೆ, “ಹ್ಯಾವ್ ಎ ಹ್ಯಾಪಿ ಡೇ, ಚೆನ್ನಾಗಿ ಓದು, ಗೆಳೆಯರೊಂದಿಗೆ ಆಟವಾಡು” ಎಂದು ಹಾರೈಸಿ ಕಳುಹಿಸಬೇಕು.



