Sunday, December 3, 2023

Latest Posts

ಶಾಲೆಗಳ ಸಮಯ ಬದಲಾವಣೆಯ ಅವಶ್ಯಕತೆ ಇಲ್ಲ: ಶಿಕ್ಷಣ ಇಲಾಖೆ

ಹೊಸದಿಂತ ಡಿಜಿಟಲ್‌ ಡೆಸ್ಕ್:‌

ಬೆಂಗಳೂರಿನಲ್ಲಿ ಹೆಚ್ಚುತ್ತಿರುವ ವಾಹನ ದಟ್ಟಣೆಯನ್ನು ತಪ್ಪಿಸಲು ಶಾಲೆಗಳ ಸಮಯ (School timing) ಬದಲಾವಣೆ ಸಾಧ್ಯವೇ ಎಂಬ ಹೈಕೋರ್ಟ್‌ (karnataka high Court) ಸಲಹೆಯ ಬಗ್ಗೆ ಚರ್ಚೆ ನಡೆಸಿದ ಶಿಕ್ಷಣ ಇಲಾಖೆ (Education Department) ಸಮಯ ಬದಲಾವಣೆಯ ಅವಶ್ಯಕತೆ ಇಲ್ಲ ಎಂದು ಅಭಿಪ್ರಾಯಪಟ್ಟಿದೆ.

ವಾಹನ ದಟ್ಟಣೆ ತಪ್ಪಿಸುವ ಸಲುವಾಗಿ ಶಾಲೆಗಳು ಮತ್ತು ಕೈಗಾರಿಕೆಗಳ ಕಾರ್ಯನಿರ್ವಹಣೆ ಸಮಯ ಬದಲಾವಣೆಗೆ ಹೈಕೋರ್ಟ್‌ ಸರಕಾರಕ್ಕೆ ಸಲಹೆ ನೀಡಿತ್ತು. ಈ ನಿಟ್ಟಿನಲ್ಲಿ ಎಲ್ಲ ಸರಕಾರಿ ಮತ್ತು ಖಾಸಗಿ ಶಾಲೆಗಳು, ಶಾಲಾ ಬಸ್‌ ಆಪರೇಟರ್‌ಗಳು, ಪೋಷಕರ ಸಂಘಗಳೂ ಸೇರಿದಂತೆ ಸಂಬಂಧಿಸಿದ ಎಲ್ಲರ ಸಭೆ ಕರೆದು ವಾಹನ ದಟ್ಟಣೆ ತಗ್ಗಿಸಲು ಶಾಲಾ ಸಮಯ ಬದಲಾವಣೆ ಮಾಡುವ ಬಗ್ಗೆ ಚರ್ಚೆ ನಡೆಸಿ ತೀರ್ಮಾನ ಕೈಗೊಳ್ಳಬಹುದು ಎಂದು ಹೈಕೋರ್ಟ್‌ ಹೇಳಿತ್ತು. ಸೋಮವಾರ ಬೆಂಗಳೂರಿನ ನೃಪತುಂಗ ರಸ್ತೆಯ ಸಮಗ್ರ ಶಿಕ್ಷಣ ಇಲಾಖೆ ಕಚೇರಿಯಲ್ಲಿ ಉನ್ನತ ಮಟ್ಟದ ಸಭೆ ನಡೆದು ಅದರಲ್ಲಿ ಶಾಲಾ ಸಮಯ ಬದಲಾವಣೆ ಬೇಡ ಎಂಬ ನಿರ್ಧಾರಕ್ಕೆ ಬರಲಾಗಿದೆ.

ಶಾಲಾ ಶಿಕ್ಷಣ ಇಲಾಖೆ ಆಯುಕ್ತರಾದ ಕಾವೇರಿ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಸಂಚಾರಿ ಜಂಟಿ ಪೊಲೀಸ್ ಆಯುಕ್ತ ಅನುಚೇತ್, ಖಾಸಗಿ ಶಾಲಾ ಒಕ್ಕೂಟ ಕ್ಯಾಮ್ಸ್ ಅಧ್ಯಕ್ಷ ಶಶಿಕುಮಾರ್, ರುಪ್ಸಾ ಸಂಘಟನೆಯ ಹಾಲನೂರು ಲೇಪಾಕ್ಷಿ, ಪೋಷಕರ ಒಕ್ಕೂಟದ ಸದಸ್ಯರು ಭಾಗಿಯಾಗಿದ್ದರು. ಎಲ್ಲ ಆಯಾಮಗಳಲ್ಲಿ ಚರ್ಚೆ ನಡೆಸಿ ಸಮಯ ಬದಲಾವಣೆ ಬೇಡ ಎಂಬ ತೀರ್ಮಾನಕ್ಕೆ ಬರಲಾಗಿದೆ ಮತ್ತು ಈ ನಿರ್ಧಾರವನ್ನು ಹೈಕೋರ್ಟ್‌ಗೆ ತಿಳಿಸಲು ನಿರ್ಧರಿಸಲಾಗಿದೆ.

ಸಭೆಯ ಬಳಿಕ ಮಾತನಾಡಿದ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ರಿತೇಶ್ ಕುಮಾರ್ ಸಿಂಗ್ ಅವರು, ಶಾಲಾ ಸಮಯದ ಬದಲಾವಣೆ ಬಗ್ಗೆ ಅಭಿಪ್ರಾಯ ಪಡೆದಿದ್ದೇವೆ. ಎಲ್ಲರ ಅಭಿಪ್ರಾಯದ ವರದಿಯನ್ನು ಮಂಗಳವಾರ ಹೈಕೋರ್ಟ್‌ಗೆ ನೀಡುತ್ತೇವೆ. ಎಲ್ಲರ ಸಲಹೆಗಳು ಕೂಡ ಒಂದೇ ರೀತಿಯಾಗಿವೆ. ಟ್ರಾಫಿಕ್ ಪೊಲೀಸ್ ಅಧಿಕಾರಿಗಳ ಜೊತೆಗೂ ಚರ್ಚಿಸಿದ್ದೇವೆ. ಕೋರ್ಟ್ ಏನೂ ಆದೇಶ ಕೊಡುತ್ತದೋ ಅದನ್ನು ಅನುಸರಿಸುತ್ತೇವೆ ಎಂದು ಹೇಳಿದರು.

ಮಕ್ಕಳ ಹಿತದೃಷ್ಟಿಯಿಂದ ಶಾಲಾ ಸಮಯ ಬದಲಾಯಿಸುವುದು ಬೇಡ ಎಂದು ತೀರ್ಮಾನಿಸಿದ್ದೇವೆ. ಸ್ಕೂಲ್ ಬಸ್, ಶಾಲಾ ವಾಹನಗಳ ಸಮಸ್ಯೆ ಬಗ್ಗೆ ಸಲಹೆ ಕೊಟ್ಟಿದ್ದೇವೆ ಎಂದು ಕ್ಯಾಮ್ಸ್‌ ಅಧ್ಯಕ್ಷ ಶಶಿಕುಮಾರ್‌ ತಿಳಿಸಿದರು.

 

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!