ಅಕ್ಕಿ ವಿಚಾರದಲ್ಲಿ ರಾಜಕೀಯ ಬೇಡ, ಕೇಂದ್ರದ ಮೇಲೆ ಗೂಬೆ ಕೂರಿಸುವುದೂ ಬೇಡ: ಸಿ.ಟಿ.ರವಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಅಕ್ಕಿಯ ವಿಚಾರದಲ್ಲಿ ಕಾಂಗ್ರೆಸ್ ರಾಜಕಾರಣ ಮಾಡುವುದು ಬೇಡ ಮತ್ತು ಕೇಂದ್ರದ ಮೇಲೆ ಗೂಬೆ ಕೂರಿಸುವುದೂ ಬೇಡ ಎಂದು ರಾಷ್ಟ್ರೀಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಆಗ್ರಹಿಸಿದ್ದಾರೆ.

ಅಕ್ಕಿ ಕೊಡುವ ವಿಚಾರದಲ್ಲಿ ಕಾಂಗ್ರೆಸ್, ತನ್ನ ವೈಫಲ್ಯವನ್ನು ಮುಚ್ಚಿಕೊಳ್ಳುವ ಸಲುವಾಗಿ ಬಿಜೆಪಿಯನ್ನು ಹಾಗೂ ಪ್ರಧಾನಿ ನರೇಂದ್ರ ಮೋದಿಯವರನ್ನು ಎಳೆದು ತರಲು ಹರ ಸಾಹಸ ಪಡುತ್ತಿದೆ ಎಂದು ಟೀಕಿಸಿದ್ದಾರೆ.

ರಾಜ್ಯದ ಮುಖ್ಯಮಂತ್ರಿಯವರು ಎರಡು ಲಕ್ಷ ಟನ್ ಅಕ್ಕಿ ಬೇಡಿಕೆಗೆ ಸಂಬಂಧಿಸಿದಂತೆ ಪ್ರಧಾನ ಮಂತ್ರಿಗಳಿಗಾಗಲಿ, ಕೇಂದ್ರದ ಆಹಾರ ನಾಗರೀಕ ಸರಬರಾಜು ಸಚಿವರಿಗಾಗಲಿ ಬೇಡಿಕೆ ಇಡಲೇ ಇಲ್ಲ. ಅವರೊಂದಿಗೆ ಮಾತನಾಡುವ ಸೌಜನ್ಯವನ್ನೂ ತೋರಿಸಲಿಲ್ಲ. ರಾಜ್ಯ ಸರ್ಕಾರ 2 ಲಕ್ಷ ಟನ್ ಅಕ್ಕಿಗಾಗಿ ಎಫ್‍ಸಿಐ ವಿಭಾಗೀಯ ವ್ಯವಸ್ಥಾಪಕರಿಗೆ ಪತ್ರ ಮುಖೇನ ವಿನಂತಿ ಮಾಡಿದ್ದಾರೆ. ವಿಭಾಗೀಯ ವ್ಯವಸ್ಥಾಪಕ ಇದಕ್ಕೆ ಅನುಮತಿ ನೀಡಿದೆ. ಆದರೆ ಈ ಅನುಮತಿ ನೀಡುವ ಮುನ್ನ ಅವರು ಕೇಂದ್ರ ಕಚೇರಿಯನ್ನು ಸಂಪರ್ಕಿಸದೆ ಪ್ರಾಯಶ: ಏಕಮುಖವಾಗಿ ತೀರ್ಮಾನ ಕೈಗೊಂಡ ಹಾಗೆ ಭಾಸವಾಗುತ್ತದೆ ಎಂದಿದ್ದಾರೆ.

ಆಹಾರ ಮತ್ತು ನಾಗರಿಕ ಸರಬರಾಜು ಕಚೇರಿಯಿಂದ ಎಫ್‍ಸಿಐ ಕೇಂದ್ರ ಕಚೇರಿಗೆ ಒಎಂಎಸ್‍ಎಸ್ ಕೋಟಾದಡಿ ಅಕ್ಕಿ ಮಾರಾಟ ನಿರ್ಬಂಧಿಸಿರುವ ಬಗ್ಗೆ ಆದೇಶ ಬಂದಿತ್ತು. ಈ ಕುರಿತು ಜೂನ್‌ 08,2023 ರಂದು ನಡೆದ ಸಭೆಯಲ್ಲಿ ತೀರ್ಮಾನ ತೆಗೆದುಕೊಳ್ಳಲಾಗಿತ್ತು. ಈ ಪತ್ರವು ಕರ್ನಾಟಕ ಸರ್ಕಾರಕ್ಕೆ ಬರೆದ ಪತ್ರವಲ್ಲ ಬದಲಿಗೆ ಎಫ್‍ಸಿಐ ಮುಖ್ಯಸ್ಥರಿಗೆ ಬರೆದಿರುವ ಪತ್ರ ಎಂದು ವಿವರಿಸಿದ್ದಾರೆ.

ರಾಜ್ಯ ಸರ್ಕಾರ ಎಫ್‍ಸಿಐ ಗೆ ಪತ್ರ ಬರೆಯುವ ಒಂದು ದಿನ ಮುಂಚಿತವಾಗಿ ತೆಗೆದುಕೊಂಡ ತೀರ್ಮಾನವಿದು ಎಂದು ಅವರು ನೆನಪಿಸಿದ್ದಾರೆ. ಕೇಂದ್ರ ಸರಕಾರ ಮುಂಗಾರು ಮಳೆ, ಬೆಳೆಯನ್ನು ಆಧರಿಸಿ ಕೇಂದ್ರದಲ್ಲಿರುವ ದಾಸ್ತಾನನ್ನು ಪರಿಗಣಿಸಿ ಫುಡ್ ಸೆಕ್ಯೂರಿಟಿ ಆಕ್ಟ್ ಪ್ರಕಾರ ಉಚಿತವಾಗಿ ಅಕ್ಕಿ ಕೊಡಬೇಕಾಗಿರುವ ಸರಬರಾಜಿಗೆ ಯಾವುದೇ ಭಂಗವಾಗದಂತೆ ಕಾಲಕಾಲಕ್ಕೆ ಇಂತಹ ನಿರ್ಣಯ ತೆಗೆದುಕೊಳ್ಳುವುದು ಸರ್ವೇಸಾಮಾನ್ಯ. ಈಗಾಗಲೇ ಪ್ರತಿ ಕುಟುಂಬದ ಪ್ರತಿಯೊಬ್ಬ ಸದಸ್ಯರಿಗೂ ಐದು ಕೆಜಿ ಉಚಿತ ಅಕ್ಕಿ ನಿರಂತರವಾಗಿ ಕೇಂದ್ರ ಸರ್ಕಾರ ನೀಡುತ್ತಿದೆ ( ಕೋವಿಡ್ ಸಂಕಷ್ಟದ 84 ಕೋಟಿ ಜನರಿಗೆ ಕಾಲದಲ್ಲಿ ಪ್ರತಿ ವ್ಯಕ್ತಿಗೆ ಹತ್ತು ಕೆಜಿ ಅಕ್ಕಿ ಯಂತೆ ನೀಡಿದೆ) ಎಂದು ಗಮನ ಸೆಳೆದಿದ್ದಾರೆ.

ಪ್ರತಿ ಕುಟುಂಬದ ಅಕ್ಕಿಯ ಅವಶ್ಯಕತೆಯನ್ನು ಕೇಂದ್ರ ಸರಕಾರವೇ ಪೂರೈಸುತ್ತಿದೆ. ಆದ ಕಾರಣ ರಾಜ್ಯ ಸರಕಾರ ಬಡ ಕುಟುಂಬಗಳಿಗೆ ಕೇಂದ್ರ ಸರಕಾರದ ಅಕ್ಕಿಯ ಜೊತೆಗೆ ರಾಗಿ, ಗೋಧಿ, ಬೆಳೆ ಮತ್ತು ರವೆಯನ್ನು ನೀಡಬಹುದು. ತಾನು ವಾಗ್ದಾನ ಮಾಡಿರುವಂತೆ ಹತ್ತು ಕೆಜಿ ಅಕ್ಕಿಯ ಬದಲಾಗಿ ಅದಕ್ಕೆ ಸಮ ಮೊತ್ತದ ಹಣವನ್ನು ನೀಡಲಿ ಎಂದು ಒತ್ತಾಯಿಸಿದ್ದಾರೆ.

ಈಗ ರಾಜ್ಯ ಸರ್ಕಾರ ಬಡವರಿಗೆ ಸಹಾಯ ಮಾಡುವುದು ಮುಖ್ಯವಾಗಬೇಕೇ ಹೊರತು ರಾಜಕಾರಣವಲ್ಲ. ಇದು ಸಿದ್ದರಾಮಯ್ಯನವರಂತಹ ಅನುಭವಿ ರಾಜಕಾರಣಿಗೆ ತಿಳಿಯದ ಸಂಗತಿಯೇನಲ್ಲ ಎಂದಿದ್ದಾರೆ.

ಅಕ್ಕಿ ವಿತರಣೆಯ ಹೆಸರಲ್ಲಿ ರಾಜಕಾರಣ ಮಾಡದೆ ಮತ್ತು ಕೇಂದ್ರದ ಮೇಲೆ ಗೂಬೆ ಕೂರಿಸುವ ಸಣ್ಣತನ ತೋರದೆ ಬಡವರ ಆಹಾರದ ಅಗತ್ಯವನ್ನು ಪೂರೈಸಲು ಸೂಕ್ತ ಹಾಗು ಅಗತ್ಯವಿರುವ ಆಹಾರವನ್ನು ಅಥವಾ ಅದರ ಮೌಲ್ಯದಷ್ಟು ಹಣವನ್ನು ನೀಡಲು ವ್ಯವಸ್ಥೆ ಮಾಡಬೇಕು ಎಂದು ಅವರು ಒತ್ತಾಯಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!