ಮಳೆ ಕೈಕೊಟ್ಟರೂ ಈ ರೈತ ಕೈಕೊಡಲಿಲ್ಲ, ಜಾನುವಾರುಗಳಿಗೆ ಇವನೇ ‘ಭಗೀರಥ’!

ಹೊಸದಿಗಂತ ವರದಿ ಅರಳೇಶ್ವರ:

ಮಳೆ ಕೈಕೊಟ್ಟ ಬೆಳೆಗೆ ನೀರು ಹರಿಸಲು ಕೃಷಿಕರು ಪರದಾಡುತ್ತಿರುವಾಗ ಇಲ್ಲೊಬ್ಬ ರೈತ ಜಮೀನಿನ ಪಕ್ಕದ ಕೊಳ್ಳಿಕೆರೆಗೆ ನೀರು ಹರಿಸಿ ಜಾನುವಾರುಗಳ ದಾಹ ನೀಗಿಸುವ ಕೆಲಸ ಮಾಡುತ್ತಿದ್ದಾರೆ.

ಹಾವೇರಿ ಜಿಲ್ಲೆ ಹಾನಗಲ್ಲ ತಾಲೂಕಿನ ಅರಳೇಶ್ವರ ಗ್ರಾಮದ ರವಿ ತಿರುಮಲೆ ಅವರೇ ಮಳೆ ಬಾರದೆ ತತ್ತರಿಸಿರುವ ಮೂಕ ಪ್ರಾಣಿಗಳ ದಾಹ ನೀಗಿಸುತ್ತಿರುವ ರೈತ. ಬರಡಾಗಿರುವ ಕೊಳ್ಳಿ ಕೆರೆಗೆ ನೀರು ಹರಿಸುವ ಮೂಲಕ ಜಾನುವಾರುಗಳ ನೆರವಿಗೆ ನಿಂತಿದ್ದಾರೆ.

ಈ ವರ್ಷ ಮಳೆ ಕೈಕೊಟ್ಟಿದ್ದರಿಂದ ರವಿ ಅವರು ಕಳೆದ ತಿಂಗಳಿಂದ ತಮ್ಮ ಬೋರವೆಲ್ ನೀರನ್ನು ಕೆರೆಗೆ ನೀರು ಹರಿಸುತ್ತಿದ್ದಾರೆ. ಗ್ರಾಮಕ್ಕೆ ನಿತ್ಯ ಹಗಲು ನಾಲ್ಕು ತಾಸು ರಾತ್ರಿ ಮೂರು ತಾಸು ತ್ರಿಫೇಸ್ ವಿದ್ಯುತ್ ನೀಡುತ್ತಿದ್ದು, ಈ ಏಳು ತಾಸು ರವಿ ಅವರು ಮೋಟರ್ ಮೂಲಕ ಕೆರೆಗೆ ನೀರು ಹರಿಸುತ್ತಿದ್ದಾರೆ. ಈ ನೀರು ಕೆರೆಯ ಗುಂಡಿಯಲ್ಲಿ ಶೇಖರಣೆಯಾಗಿ ಜಾನುವಾರುಗಳ ದಾಹ ತಣಿಸುತ್ತಿದೆ.

ಬರದಿಂದಾಗಿ ಎಲ್ಲೆಡೆ ನೀರಿನ ಅಭಾವವಿದೆ. ಕೆರೆ ನೀರು ಬತ್ತಿದ್ದರಿಂದ ಜಾನುವಾರುಗಳಿಗೆ ಎಲ್ಲೂ ಕುಡಿಯಲು ನೀರಿಲ್ಲ. ಹಿಂದೆ ನಾವು ಪಂಪ್ಸೆಟ್ ಮೂಲಕ ಕೆರೆ ನೀರು ಪಡೆದಿದ್ದೇವೆ. ಹೀಗಾಗಿ ಕೆರೆಗೆ ಸ್ವಲ್ಪವಾದರೂ ನೀರು ಮರಳಿ ನೀಡಿ ಋಣ ತೀರಿಸಿಕೊಳ್ಳುತ್ತಿದ್ದೇನೆ ಎಂದು ಅರಳೇಶ್ವರದ ರೈತ ರವಿ ತಿರುಮಲೆ ತಿಳಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!