ಹೊಸದಿಗಂತ ವರದಿ, ಬೆಳಗಾವಿ:
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಅಧಿಕಾರದಿಂದ ಕೆಳಗಿಳಿಸಲು ಯಾರಿಂದಲೂ ಸಾಧ್ಯವಿಲ್ಲ. ಅವರು ಮುಖ್ಯಮಂತ್ರಿಯಾಗಿ ಮುಂದುವರೆಯಬೇಕು ಎಂಬುದು ನಮ್ಮೆಲ್ಲರ ಆಸೆ, ಅವರೇ ಮುಂದುವರೆಯುತ್ತಾರೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ತಿಳಿಸಿದರು.
ನಗರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೋರ್ಟ್ ನಲ್ಲಿ ಅರವಿಂದ ಕ್ರೆಜಿವಾಲ್, ಮಮತಾ ಬ್ಯಾನರ್ಜಿ ಸೇರಿದಂತೆ ಅನೇಕರ ವಿರುದ್ಧದ ಕೇಸಗಳಿವೆ. ಆದರೆ ಅವರಿಗೆ ಸಿದ್ದರಾಮಯ್ಯ ಅಷ್ಟೇ ಏಕೆ ಕಾಣುತ್ತಾರೋ ಗೊತ್ತಿಲ್ಲ ಎಂದರು.
ನಮ್ಮ ತಂದೆಯವರು ಮುಖ್ಯಮಂತ್ರಿ ಇದ್ದಾಗ ಬೇಕಾದಷ್ಟು ಕೇಸ್ ಗಳನ್ನು ನಾವು ನೋಡಿದ್ದೇವೆ. ಅದರ ಬಗ್ಗೆ ಚರ್ಚೆ ಮಾಡುವ ಅವಶ್ಯಕತೆ ಇಲ್ಲ. ಸಿಎಂ ರೇಸ್ ನಲ್ಲಿ ಕಾಂಗ್ರೆಸ್ ನಾಯಕರೇ ಹೆಚ್ಚಿನವರಿದ್ದಾರೆ ಎಂಬ ಬಿಜೆಪಿ ಆರೋಪಕ್ಕೆ ಉತ್ತರ ಕೊಡುವ ದೊಡ್ಡ ಮನುಷ್ಯ ಅಲ್ಲ, ಅದಕ್ಕೆ ನಾನು ಪ್ರತಿಕ್ರಿಯೆ ಕೊಡುವುದಿಲ್ಲ ಎಂದು ಮಧು ಬಂಗಾರಪ್ಪ ಸ್ಪಷ್ಟಪಡಿಸಿದರು.
ಬಿಜೆಪಿ, ಜೆಡಿಎಸ್ ನಾಯಕರಿಗೆ ಸಿದ್ದರಾಮಯ್ಯ ಭಯ ಇದೆ. ಏಕೆಂದರೆ ಸಿದ್ದರಾಮಯ್ಯ ಅವರು ನುಡಿದಂತೆ ನಡೆದಿದ್ದಾರೆ.
ಒಳ್ಳೆಯವರನ್ನು ಕೆಳಗಿಳಿಸಲು ಕುತಂತ್ರ ಇದ್ದೇ ಇರುತ್ತದೆ. ಅದರಲ್ಲಿ ಬಿಜೆಪಿಯವರು ನಿಸ್ಸೀಮರು. ಇವತ್ತಿನವರೆಗೂ ಅವರ ಹಣೆಬರಹಕ್ಕೆ ಸ್ವಂತ ಶಕ್ತಿ ಮೇಲೆ ಅಧಿಕಾರಕ್ಕೆ ಬಂದಿಲ್ಲ. ಬಾಂಬೆ ಬಾಯ್ಸ ಅಂತಾ ಮಾಧ್ಯಮದವರೆ ಹೇಳುತ್ತಾ ಇದ್ದರು. ಇಂತಹ ಸಂಪ್ರದಾಯ ಬೇಕಾ ನಮಗೆ ಎಂದು ಸಚಿವ ಮಧುಬಂಗಾರಪ್ಪ ಪ್ರಶ್ನಿಸಿದರು.
ದೀಪಾವಳಿ ನಂತರ ಸರ್ಕಾರ ಪತನ ಆಗುತ್ತೆ ಎಂಬ ಬಿಜೆಪಿ ಮುಖಂಡ ಸಿ.ಟಿ.ರವಿ ಹೇಳಿಕೆ ಕುರಿತಂತೆ ಉತ್ತರಿಸಿದ ಅವರು, ಬಿಜೆಪಿಯವರು ಇನ್ನೂ ನಾಲ್ಕು ದೀಪಾವಳಿ ಕಾಯಬೇಕು ಎಂದು ತಿರುಗೇಟು ಕೊಟ್ಟರು.