Tuesday, July 5, 2022

Latest Posts

ಜೆಡಿಎಸ್ ಪಕ್ಷವನ್ನು ನಾಶ ಮಾಡಲು ಯಾರಿಂದಲೂ ಸಾಧ್ಯವಿಲ್ಲ – ಹೆಚ್.ಡಿ.ಕೆ

ಹೊಸದಿಗಂತ ವರದಿ ಕಲಬುರಗಿ:‌ 

ಜೆಡಿಎಸ್ ಪಕ್ಷವನ್ನು ಅಷ್ಟು ಸುಲಭವಾಗಿ ನಾಶ ಮಾಡಲು ಯಾರಿಂದಲೂ ಸಾಧ್ಯವಿಲ್ಲ. ಕಾರ್ಯಕರ್ತರ ಹೋರಾಟದ ಮೇಲೆ ಜೆಡಿಎಸ್ ಬಲಿಷ್ಠವಾಗಿ ನಿಂತಿದೆ. ಬಿಟ್ಟು ಹೋದ ನಾಯಕರು ಗೆಲುವಿಗಾಗಿ ಏನೇನು ಮಾಡುತ್ತಿದ್ದಾರೆ ನನಗೂ ಗೊತ್ತಿಲ್ಲ. ಆ ವಿಚಾರ ಕುರಿತು ಮಾತನಾಡಲಾರೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಹೇಳಿದರು. ನಗರದ ಮಣ್ಣೂರು ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಸೋಮವಾರ ಪತ್ರಕರ್ತರ ಆರೋಗ್ಯ ಚಿಕಿತ್ಸಾ ಶಿಬಿರಕ್ಕೆ ಚಾಲನೆ ನೀಡಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.

ರಾಜ್ಯ ಸಭೆಯ ಚುನಾವಣೆಗಳ ಬಳಿಕ ಮಾತನಾಡುತ್ತೇನೆ. ಸದ್ಯಕ್ಕೆ ಮೂರು ಪಕ್ಷಗಳಲ್ಲಿ ತಮ್ಮದೇ ಆಗಿರುವ ತಂತ್ರಗಳಿವೆ. ಲೆಕ್ಕಾಚಾರಗಳಿವೆ. ಬಹುತೇಕ ಅಡ್ಡ ಮತದಾನ ಸಾಧ್ಯವಾಗಲಿದೆ ಎನ್ನುವ ಲೆಕ್ಕಾಚಾರವೇ ಇಂದಿನ ದಿನಗಳ ಚರ್ಚೆಯೂ ಆಗಿದೆ. ಆದ್ದರಿಂದ ಈಗಲೇ ಏನೂ ಮಾತನಾಡುವಂತಿಲ್ಲ ಎಂದರು.

ಬಸವರಾಜ್ ಹೊರಟ್ಟಿ ಕುರಿತು ಮಾತನಾಡಿದ ಕುಮಾರಸ್ವಾಮಿ, 40 ವರ್ಷ ನಮ್ಮ ಪಕ್ಷದಲ್ಲೇ ಇದ್ದರಲ್ಲಾ ಆವಾಗ ಏನು ಮಾಡಿದ್ದೀರಿ. ನಾನು ಮುಖ್ಯಮಂತ್ರಿಯಾಗಿದ್ದಾಗ ನಿಮಗೆ ರಾಜ್ಯದಲ್ಲಿ ಎಷ್ಟು ಕಾಲೇಜುಗಳಿದ್ದವು. ನಿಮ್ಮ ಭಾಗದಲ್ಲಿ ಏನು ಆಗುತ್ತಿದೆ ಎನ್ನುವುದು ಗೊತ್ತಿರಲಿಲ್ಲ. ಈಗಲೂ ನೀವು ಗೆಲುವಿಗಾಗಿ ಮ್ಯಾಚ್ ಫಿಕ್ಸಿಂಗ್ ಮಾಡಿಕೊಂಡಿರುವುದು ಗೊತ್ತಿಲ್ಲವೇನು? ನಾನು ಇದ್ದಾಗ ನಾನೇ ಬ್ಯಾಟಿಂಗ್, ಫಿಲ್ಡಿಂಗ್, ಬೌಲಿಂಗ್ ಮಾಡಿದ್ದೇನೆ. ಅವರು ನಮಗೇನು ಮಾಡಿಲ್ಲ, ನಮ್ಮಲ್ಲಿಯೇ ಉಂಡು, ಕೊಂಡು ಹೋಗಿದ್ದಾರೆ ಎಂದು ಹೊರಟ್ಟಿ ಅವರ ನಡೆಯನ್ನು ಟೀಕಿಸಿದರು.

ರಾಜ್ಯದಲ್ಲಿ ಬಿಜೆಪಿ ಆಡಳಿತದಲ್ಲಿ ಏನು ಉಳಿದುಕೊಂಡಿಲ್ಲ. ಬರೀ ಜಾತಿ ವಿವಾದಗಳು, ಹಗರಣಗಳೇ ಪ್ರಮುಖವಾಗಿವೆ. “ನನಗೇನು ಚಡ್ಡಿ ವಿಚಾರ ಬೇಕಿಲ್ಲ” ಯಾರೂ ಬೇಕಾದರೂ ಚಡ್ಡಿ ಬಿಚ್ಚಿಕೊಳ್ಳಲಿ. ಆದರೆ, ಜನರಿಗೆ ಮಾತ್ರ ಚಡ್ಡಿ ತೊಡಿಸುವ ದುಸ್ಸಾಹಸ ಸರ್ಕಾರ ಮಾಡದಿದ್ದರೆ ಸಾಕು ಎಂದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ವ್ಯಂಗ್ಯವಾಡಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss