ವಯನಾಡು ಭೂಕುಸಿತದ ಸ್ಥಳದಲ್ಲಿ ಯಾರೂ ಬದುಕುಳಿದಿಲ್ಲ: ಕೇರಳ ಸಿಎಂ ಪಿಣರಾಯಿ ವಿಜಯನ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ವಯನಾಡು ಭೂಕುಸಿತದ ಸ್ಥಳದಲ್ಲಿ ಯಾರೂ ಜೀವಂತವಾಗಿ ಉಳಿದಿಲ್ಲ. ಕಾಂಕ್ರೀಟ್ ಮತ್ತು ಮಣ್ಣಿನ ಅವಶೇಷಗಳ ಅಡಿಯಲ್ಲಿ ಮೃತದೇಹಗಳನ್ನು ಪತ್ತೆ ಮಾಡಲು ಸೇನೆ ಮತ್ತು ಎನ್‌ಡಿಆರ್‌ಎಫ್ ಪ್ರಯತ್ನಿಸುತ್ತಿದೆ ಎಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹೇಳಿದ್ದಾರೆ.

ವಯನಾಡಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಪರಿಹಾರ ಶಿಬಿರಗಳಲ್ಲಿ ಇರುವವರು ಪುನರ್ವಸತಿ ಪೂರ್ಣಗೊಳ್ಳುವವರೆಗೆ ಇನ್ನೂ ಕೆಲವು ದಿನಗಳವರೆಗೆ ಮುಂದುವರಿಯಬೇಕಾಗುತ್ತದೆ ಎಂದಿದ್ದಾರೆ.

275ಕ್ಕೂ ಹೆಚ್ಚು ಜನರನ್ನು ಬಲಿ ಪಡೆದಿರುವ ವಯನಾಡ್ ಭೂಕುಸಿತವನ್ನು ರಾಷ್ಟ್ರೀಯ ವಿಪತ್ತು ಎಂದು ಘೋಷಿಸುವಂತೆ ಕೇಂದ್ರ ಸರ್ಕಾರವನ್ನು ಕೋರಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಈ ಕುರಿತು ರಾಜ್ಯ ಸರ್ಕಾರ ಅಧಿಕೃತವಾಗಿ ಕೇಂದ್ರ ಸರ್ಕಾರವನ್ನು ರಾಷ್ಟ್ರೀಯ ವಿಪತ್ತು ಎಂದು ಘೋಷಿಸಲು ವಿಪತ್ತು ನಿರ್ವಹಣಾ ಕಾಯ್ದೆಯಡಿ ಅಗತ್ಯ ಕ್ರಮ ಕೈಗೊಳ್ಳುವಂತೆ ಕೋರಲಿದೆ.

ಪುನರ್ವಸತಿ ಕಾರ್ಯವನ್ನು ಸಾಧ್ಯವಾದಷ್ಟು ಉತ್ತಮ ರೀತಿಯಲ್ಲಿ ಪೂರ್ಣಗೊಳಿಸಲಾಗುವುದು ಎಂದು ನಾವು ಖಚಿತಪಡಿಸುತ್ತೇವೆ. ಅಲ್ಲದೆ, ರಕ್ಷಣಾ ಶಿಬಿರಗಳಿಗೆ ಪ್ರವೇಶಿಸದಂತೆ ನಾನು ಮಾಧ್ಯಮದವರನ್ನು ವಿನಂತಿಸುತ್ತೇನೆ, ಬದಲಿಗೆ ಅಲ್ಲಿರುವ ರಿಸಪ್ಶನ್ ಗೆ ಹೋಗಿ ಅವರೊಂದಿಗೆ ಮಾತನಾಡಿ ಎಂದು ಪಿಣರಾಯಿ ಹೇಳಿದ್ದಾರೆ.

ಅಗತ್ಯವಿರುವವರಿಗೆ ಸಮಾಲೋಚನೆ ನೀಡುವ ಏಜೆನ್ಸಿಗಳನ್ನು ನಾವು ಕಂಡುಕೊಂಡಿದ್ದೇವೆ. ಅವರ ಮಾನಸಿಕ ಸ್ಥಿತಿಯನ್ನು ನಾವು ಅರ್ಥ ಮಾಡಿಕೊಳ್ಳಬೇಕು. ಇದು ಅಸಹನೀಯ ಸಂಗತಿಯಾಗಿದೆ ಎಂದು ಮುಖ್ಯಮಂತ್ರಿ ಹೇಳಿದರು.

ಸಾವಿನ ಸಂಖ್ಯೆ ಹೆಚ್ಚುತ್ತಲೇ ಇದ್ದರೂ, ಇದುವರೆಗೆ 166 ಮೃತದೇಹಗಳ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ. ಮೃತರಲ್ಲಿ 100 ಮಂದಿಯನ್ನು ಗುರುತಿಸಲಾಗಿದೆ ಎಂದು ಜಿಲ್ಲಾಡಳಿತ ತಿಳಿಸಿದೆ. ಮೂರನೇ ದಿನವೂ ರಕ್ಷಣಾ ಕಾರ್ಯಾಚರಣೆ ಮುಂದುವರಿದಿದ್ದು, ಸೇನೆ, ನೌಕಾಪಡೆ ಮತ್ತು ಕೋಸ್ಟ್ ಗಾರ್ಡ್ ತಂಡಗಳು ಅಟ್ಟಮಲ, ಮುಂಡಕೈ ಮತ್ತು ಚೂರಲ್‌ಮಲಾ ಮೂರು ಸ್ಥಳಗಳಲ್ಲಿ ಶೋಧ ಕಾರ್ಯ ನಡೆಸುತ್ತಿವೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!