ರಷ್ಯಾ-ಉಕ್ರೇನ್ ಯುದ್ಧದಲ್ಲಿ ಯಾರಿಗೂ ಗೆಲುವಿಲ್ಲ, ವಿನಾಶ ಮಾತ್ರ: ಪ್ರಧಾನಿ ಮೋದಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಈಗ ನಡೆಯುತ್ತಿರುವ ರಷ್ಯಾ-ಉಕ್ರೇನ್ ಯುದ್ಧದಿಂದ ಯಾರಿಗೂ ಗೆಲುವು ಲಭಿಸದು, ಬದಲಿಗೆ ಎಲ್ಲರಿಗೂ ನಾಶ-ನಷ್ಟವಷ್ಟೇ ಆಗಲಿರುವುದು ಎಂದು ತೀವ್ರ ವಿಷಾದದಿಂದ ಹೇಳಿರುವ ಪ್ರಧಾನಿ ನರೇಂದ್ರ ಮೋದಿಯವರು, ಭಾರತ ಸದಾ ಶಾಂತಿಯ ಪರವಾಗಿದೆ. ತಕ್ಷಣವೇ ಯುದ್ಧ ನಿಲ್ಲಬೇಕೆಂದು ಬಯಸುತ್ತದೆ ಎಂದಿದ್ದಾರೆ.
ಜರ್ಮನಿ ಭೇಟಿಯಲ್ಲಿರುವ ಪ್ರಧಾನಿ ಮೋದಿಯವರು, ಜರ್ಮನಿ ಚಾನ್ಸಲರ್ ಒಲಾಫ್ ಸ್ಕೊಲ್ಜ್ ಅವರ ಜೊತೆ ಬರ್ಲಿನ್‌ನಲ್ಲಿ ನಡೆಸಿದ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಉಕ್ರೇನ್ ಬಿಕ್ಕಟ್ಟಿನ ಬಗ್ಗೆ ಪ್ರತಿಕ್ರಿಯೆ ನೀಡುವಲ್ಲಿಂದಲೇ ಆರಂಭಿಸಿದರು. ದ್ವೇಷ, ಘರ್ಷಣೆಯನ್ನು ತಕ್ಷಣವೇ ನಿಲ್ಲಬೇಕು.ಮಾತುಕತೆ ಒಂದೇ ವಿವಾದವನ್ನು ಪರಿಹರಿಸಲು ಇರುವ ದಾರಿ ಎಂಬುದಾಗಿ ಕರೆ ನೀಡಿದರು.
ಈ ಸಂದರ್ಭ ಮಾತನಾಡಿದ ಜರ್ಮನಿಯ ಚಾನ್ಸಲರ್ ಸ್ಕೊಲ್ಜ್ ಅವರು, ಆರ್ಥಿಕ, ಭದ್ರತಾ ನೀತಿ, ಹವಾಮಾನ -ರಾಜಕೀಯ ನೆಲೆಗಳಲ್ಲಿ ಏಶ್ಯಾದಲ್ಲೇ ಭಾರತವು ಜರ್ಮನಿಯ ಸೂಪರ್ ಪಾಲುದಾರನಾಗಿದೆ. ಜೂನ್‌ನಲ್ಲಿ ನಡೆಯಲಿರುವ ಜಿ೭ಸಮ್ಮೇಳನಕ್ಕೆ ಪ್ರಧಾನಿ ನರೇಂದ್ರ ಮೋದಿಯವರನ್ನು ನಾವು ಅತಿಥಿಯಾಗಿ ಆಹ್ವಾನಿಸಿದ್ದೇವೆ.ಅವರನ್ನು ಮತ್ತೆ ಜರ್ಮನಿಗೆ ಸ್ವಾಗತಿಸಲು ನಾವು ಕಾಯುತ್ತೇವೆ ಎಂದರು. ಈ ಸಂದರ್ಭ ಭಾರತ ಮತ್ತು ಜರ್ಮನಿ ನಡುವೆ ದ್ವಿಪಕ್ಷೀಯ ಸಹಕಾರವನ್ನು ಬಲಗೊಳಿಸುವ ಬಗ್ಗೆ ಚರ್ಚೆಗಳು ನಡೆದಿದ್ದು, ಸಮಗ್ರ ವ್ಯೂಹಾತ್ಮಕ ಪಾಲುದಾರಿಕೆ , ಪ್ರಾದೇಶಿಕ ಮತ್ತು ಜಾಗತಿಕ ಬೆಳವಣಿಗೆಗಳ ಬಗೆಗೂ ಸಮಾಲೋಚನೆಗಳು ನಡೆದವು ಎಂಬುದಾಗಿ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಹೇಳಿಕೆ ತಿಳಿಸಿದೆ.

10.5ಬಿ.ಡಾ.ಹಸಿರು ಅಭಿವೃದ್ಧಿ ಒಪ್ಪಂದಕ್ಕೆ ಭಾರತ-ಜರ್ಮನಿ ಸಹಿ
ಪ್ರಧಾನಿ ನರೇಂದ್ರ ಮೋದಿ ಅವರ ಜರ್ಮನಿಯ ಭೇಟಿ ವೇಳೆ ಉಭಯ ದೇಶಗಳ ನಡುವೆ 10ಬಿ.ಯೂರೋ(10.5ಬಿ.ಡಾ.)ಗಳ ಸ್ವಚ್ಛ ಇಂಧನ ಬಳಕೆ ವ್ಯವಹಾರ ಒಪ್ಪಂದಕ್ಕೆ ಸಹಿ ಮಾಡಲಾಗಿದೆ.ಇದರಂತೆ ಸುಸ್ಥಿರ ಅಭಿವೃದ್ಧಿಯಲ್ಲಿ 2030ರೊಳಗೆ ಭಾರತಕ್ಕೆ 10ಬಿ.ಡಾ.ನೆರವು ಲಭಿಸಲಿದೆ. ಉಭಯ ನಾಯಕರ ಜಂಟಿ ಘೋಷಣಾ ಉದ್ದೇಶ(ಜೆಡಿಐ)ದಲ್ಲಿ ಹಸಿರು ಮತ್ತು ಸುಸ್ಥಿರ ಅಭಿವೃದ್ಧಿಯಲ್ಲಿ ಪಾಲುದಾರಿಕೆಗೆ ಒತ್ತು ನೀಡಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!