Tuesday, February 27, 2024

ಭಾರತ ಹಿಂದು ರಾಷ್ಟ್ರ ಆಗುವುದನ್ನು ಯಾವ ಶಕ್ತಿಯಿಂದಲೂ ತಪ್ಪಿಸಲು ಸಾಧ್ಯವಿಲ್ಲ: ಅನಂತ ಕುಮಾರ ಹೆಗಡೆ

ಹೊಸದಿಗಂತ ವರದಿ, ಅಂಕೋಲಾ:

ಮುಂಬರುವ ಲೋಕಸಭಾ ಚುನಾವಣೆ ದೇಶದ ಮಹಾಸಂಗ್ರಾಮವಾಗಲಿದ್ದು ಹೊಸ ದಾಖಲೆಯೊಂದಿಗೆ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರಲಿದೆ ದೇಶದ ಜನರಲ್ಲಿ ಬಿಜೆಪಿ ಗೆಲ್ಲಬೇಕು ಮೋದಿ ಮತ್ತೊಮ್ಮೆ ಪ್ರಧಾನಿ ಆಗಬೇಕು ಎಂಬ ತುಡಿತ ಹೆಚ್ಚುತ್ತಿದ್ದು ಇದು ಭಗವಂತನ ಪ್ರೇರಣೆಯಾಗಿದೆ ಎಂದು ಸಂಸದ ಅನಂತಕುಮಾರ ಹೆಗಡೆ ಹೇಳಿದರು.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ಕಾರ್ಯಕರ್ತರನ್ನು ಭೇಟಿ ಮಾಡಿ ಮಾತನಾಡಿದ ಅವರು ಭಾರತದ ಅಖಂಡ ಹಿಂದೂ ರಾಷ್ಟ್ರದ ಪರಿಕಲ್ಪನೆಗೆ ಬರುವ ಚುನಾವಣೆ ವೇದಿಕೆಯಾಗಲಿದ್ದು ಭಾರತ ಹಿಂದೂ ರಾಷ್ಟ್ರ ಆಗುವುದನ್ನು ತಪ್ಪಿಸಲು ಜಗತ್ತಿನ ಯಾವ ಶಕ್ತಿಯಿಂದಲೂ ಸಾಧ್ಯವಿಲ್ಲ ಎಂದರು.

ಕಾರವಾರ ಲೋಕಸಭಾ ಕ್ಷೇತ್ರಕ್ಕೆ ಭಾರತೀಯ ಜನತಾ ಪಕ್ಷದಿಂದ ಯಾರೇ ಸ್ಪರ್ಧಿಸಲಿ ಕಳೆದ ಬಾರಿಯ ದಾಖಲೆಯನ್ನು ಮುರಿದು ಹೊಸ ಇತಿಹಾಸ ಸೃಷ್ಟಿಸಬೇಕು ಐದು ಲಕ್ಷಕ್ಕೂ ಅಧಿಕ ಮತಗಳಿಂದ ಗೆಲುವು ದೊರಕುವಂತೆ ಮಾಡಬೇಕು ಎಂದ ಅವರು ಬರುವ ಏಪ್ರಿಲ್ ಅಂತ್ಯದ ಒಳಗೆ ಚುನಾವಣೆ ಪ್ರಕ್ರಿಯೆಗಳು ಮುಗಿಯಲಿದ್ದು ಎಲ್ಲರೂ ಒಗ್ಗಟ್ಟಿನಿಂದ ಬಿಜೆಪಿ ಗೆಲುವಿಗಾಗಿ ಸಿದ್ಧತೆಗಳನ್ನು ನಡೆಸುವಂತೆ ಕರೆ ನೀಡಿದರು.
ರಾಜ್ಯದ ಬಹಳಷ್ಟು ಕಾಂಗ್ರೆಸ್ಸಿಗರು ಕೇಂದ್ರದಲ್ಲಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರಲಿ ಎಂದು ಆಶೆ ಪಡುತ್ತಿದ್ದಾರೆ, ಅಯೋಧ್ಯೆಯಲ್ಲಿ

ಶ್ರೀರಾಮ ಮಂದಿರ ಆಗುವುದು ಬಹಳಷ್ಟು ಕಾಂಗ್ರೆಸ್ಸಿಗರಿಗೂ ಖುಷಿ ನೀಡಿದೆ ಸಿದ್ಧರಾಮಯ್ಯ ಮಾತ್ರ ಏಕಾಂಗಿಯಾಗಿದ್ದಾರೆ ಎಂದ ಅವರು ರಾಮ ಮಂದಿರ ಯಾವುದೇ ಪಕ್ಷದ ಅಜೆಂಡಾ ಆಗಿರದೇ ದೇಶದ ಸಮಸ್ಥ ಹಿಂದೂ ಸಮಾಜದ ಬಹುಕಾಲದ ಕನಸಾಗಿದೆ ಮಂದಿರದ ಉದ್ಘಾಟನೆಗೆ ದೇಶದ ಹಿಂದೂ ಸಮಾಜ ಸಿದ್ಧವಾಗಿ ನಿಂತಿದೆ ಎಂದರು.

ಅಯೋಧ್ಯೆಯ ಶ್ರೀರಾಮ ಮಂದಿರ
ಯಾರೋ ಹಣವಂತರು, ದೊಡ್ಡ ಉದ್ಯಮಿಗಳ ಹಣದಿಂದ ನಿರ್ಮಾಣವಾದ ಮಂದಿರವಲ್ಲ ಇಡೀ ದೇಶದ ಜನರ ಭಕ್ತಿ, ಭಾವನೆಗಳು ದೇಶದ ಮೂಲೆ ಮೂಲೆಗಳಿಂದ ಇಟ್ಟಿಗೆ ರೂಪದಲ್ಲಿ ಸಂಗ್ರಹಿಸಲ್ಪಟ್ಟು ನಿರ್ಮಾಣವಾಗುತ್ತಿರುವ ದೇಶದ ದೇಗುಲ ಎಂದು ಸಂಸದ ಅನಂತಕುಮಾರ ಹೆಗಡೆ ಹೇಳಿದರು.

ಬಿಜೆಪಿ ಜಿಲ್ಲಾಧ್ಯಕ್ಷ ವೆಂಕಟೇಶ ನಾಯಕ ಮಾತನಾಡಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಆದ ಬದಲಾವಣೆಗಳನ್ನು ದೇಶದ ಜನತೆ ಗಮನಿಸಿದ್ದು ದೇಶದ ಗಡಿಗಳು ಇಂದು ಸುರಕ್ಷಿತವಾಗಿವೆ, ಕಾಶ್ಮೀರದಲ್ಲಿ ನಮ್ಮ ಸೈನಿಕರ ಮೇಲೆ ಕಲ್ಲು ತೂರಾಟ ನಿಂತಿವೆ, ಸರ್ಕಾರದ ಸೌಲಭ್ಯಗಳು ಸಂಪೂರ್ಣವಾಗಿ ಫಲಾನುಭವಿಗಳಿಗೆ ತಲುಪುತ್ತಿವೆ ಎಂದರು.
ನಿಕಟಪೂರ್ವ ಜಿಲ್ಲಾಧ್ಯಕ್ಷ ಕೆ.ಜಿ.ನಾಯ್ಕ ಮಾತನಾಡಿ ಉತ್ತರ ಕನ್ನಡ ಜಿಲ್ಲೆಯಲ್ಲಿ ಹಿಂದೂ ವಿರೋಧಿ ಚಟುವಟಿಕೆಗಳು ನಿಂತು ಹಿಂದುಗಳು ಶಾಂತಿಯಿಂದ ಜೀವನ ನಡೆಸಲು ಅನಂತಕುಮಾರ ಹೆಗಡೆ ಕಾರಣೀಕರ್ತರಾಗಿದ್ದು ಅವರು ಸಕ್ರಿಯ ರಾಜಕಾರಣದಲ್ಲಿ ಮುಂದುವರಿಯುವಂತೆ ಜಿಲ್ಲೆಯ ಜನತೆ ಬಯಸುತ್ತಿದೆ ಎಂದರು.

ಜಿಲ್ಲಾ ಬಿಜೆಪಿ ವಕ್ತಾರ ನಾಗರಾಜ ನಾಯಕ ಮಾತನಾಡಿದರು.
ಬಿಜೆಪಿ ಮಂಡಲ ಅಧ್ಯಕ್ಷ ಸಂಜಯ ನಾಯ್ಕ, ವಿಭಾಗೀಯ ಪ್ರಭಾರಿ ಎನ್. ಎಸ್. ಹೆಗಡೆ, ಹಿರಿಯ ಮುಖಂಡ ಭಾಸ್ಕರ ನಾರ್ವೇಕರ್, ಹಿಂದುಳಿದ ವರ್ಗಗಳ ಮೋರ್ಛಾ ರಾಜ್ಯ ಕಾರ್ಯಕಾರಿಣಿ ಸದಸ್ಯ ರಾಜೇಂದ್ರ ನಾಯ್ಕ ಮೊದಲಾದವರು ಉಪಸ್ಥಿತರಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!