ಮುಖ್ಯಮಂತ್ರಿ ಬದಲಾವಣೆ ಪ್ರಶ್ನೆಯೇ ಇಲ್ಲ: ಕೃಷಿ ಸಚಿವ ಬಿ.ಸಿ.ಪಾಟೀಲ್

ಹೊಸದಿಗಂತ ವರದಿ, ಹಾವೇರಿ:

ಮುಖ್ಯಮಂತ್ರಿಗಳ ಬದಲಾವಣೆ ಪ್ರಶ್ನೆನೇ ಇಲ್ಲ. ಈ ಕುರಿತು ಪಕ್ಷದ ವರಿಷ್ಠರಾದ ಅಮಿತ್ ಶಾ ಹಾಗೂ ಬಿಜೆಪಿ ಹೈಕಮಾಂಡ ಸ್ಪಷ್ಟಪಡಿಸಿದೆ. ಇದು ಪಕ್ಷದ ಆಂತರಿಕ ವಿಚಾರ ಈ ಕುರಿತು ಕಾಂಗ್ರೆಸ್‌ನವರು ಏಕೆ ಮಾತನಾಡುತ್ತಿದೆ ಎನ್ನುವುದನ್ನು ಕಾಂಗ್ರೆಸ್ ಸ್ಪಷ್ಟಪಡಿಸಲಿ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ ಹೇಳಿದರು.
ಬುಧವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಳೆ ಹಾನಿಯ ಪ್ರಗತಿ ಪರಿಶೀಲನಾ ಸಭೆಗೆ ಆಗಮಿಸಿದ ವೇಳೆ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್‌ನವರು ಬಂದು ಬೊಮ್ಮಾಯಿವರನ್ನು ಮುಖ್ಯಮಂತ್ರಿಗಳನ್ನಾಗಿ ಮಾಡಿಲ್ಲ. ಶಾಸಕರ ಮ್ಯಾಜಿಕ್ ನಂಬರ್, ಶಾಸಕಾಂಗ ಪಕ್ಷದ ಸಭೆಯಲ್ಲಿ ಹಾಗೂ ಪಕ್ಷದ ವರಿಷ್ಠರು ನಿರ್ಧಾರದಂತೆ ಸಿಎಂ ಆಯ್ಕೆ ಮಾಡಲಾಗಿದೆ ಎಂದರು.
ಮುಖ್ಯಮಂತ್ರಿಗಳು ಯಾವುದೇ ಹಗರಣ ಮಾಡಿಲ್ಲ. ರಾಜ್ಯದಲ್ಲಿ ಸಿಎಂ ಬದಲಾವಣೆ ಇಲ್ಲ, ಪಕ್ಷದ ವರಿಷ್ಟರಾದ ಅಮಿತ್ ಶಾ ಅವರು ಇದನ್ನ ಸ್ಪಷ್ಟಪಡಿಸಿದ್ದಾರೆ. ನಮ್ಮ ಪಕ್ಷದ ಆಂತರಿಕ ವಿಚಾರ ಕಾಂಗ್ರೆಸ್‌ಗೆ ಏಕೆ ಅದು ಎನ್ನುವುದೇ ನನಗೆ ದೊಡ್ಡ ಪ್ರಶ್ನೆಯಾಗಿದೆ, ಅದಕ್ಕೆ ಅವರು ಉತ್ತರ ಕೊಡಲಿ ಎಂದು ತರಾಟೆ ತೆಗೆದುಕೊಂಡರು.
ಸಿದ್ದರಾಮೋತ್ಸವ ಆಚರಣೆ ಮಾಡುವ ಮೊದಲು, ಡಿ.ಕೆ.ಶಿವಕುಮಾರ ಹಾಗೂ ಡಿ.ಕೆ.ಸುರೇಶವರು ಪ್ರಭಲವಾಗಿ ವಿರೋಧ ವ್ಯಕ್ತಪಡಿಸಿದ್ದರು. ಇದು ಸಿದ್ದರಾಮೋತ್ಸವ ಆಗಬಾರದು ಕಾಂಗ್ರೆಸ್ ಉತ್ಸವ ಆಗಬೇಕೆಂದು ಹೇಳಿದ್ದರು. ರಾಹುಲ್ ಗಾಂಧಿ ಬರುತ್ತಾರೆ ಎಂಬ ಕಾರಣಕ್ಕೆ ಅನಿವಾರ್ಯವಾಗಿ ಅವರು ಈ ಕಾರ್ಯಕ್ರಮಕ್ಕೆ ಬಂದಿದ್ದಾರೆ ಎಂದರು.
ಕಾಂಗ್ರೆಸ್‌ನವರಿಗೆ ಮಾಡಲು ಕೇಲಸವಿಲ್ಲ, ವಿನಾಕಾರಣ ಗೊಂದಲ ಸೃಷ್ಟಿ ಮಾಡುತ್ತಿದ್ದಾರೆ. ಡಿ.ಕೆ.ಶಿವಕುಮಾರ ಮತ್ತು ಸಿದ್ದರಾಮಯ್ಯನವರು ಬಲ ಪ್ರದರ್ಶನಕ್ಕೆ ಪ್ರಯತ್ನ ಮಾಡುತ್ತಿದ್ದಾರೆ. ಮೆಕೇದಾಟು ಹೋರಾಟದಲ್ಲಿ ಸಿದ್ದರಾಮಯ್ಯನವರ ಸಹಕಾರ ಇರಲಿಲ್ಲ. ರಾಹುಲ್ ಗಾಂಧಿಯವರ ಒತ್ತಾಸೆ ಮೇರೆಗೆ ಆಲಿಂಗನ ಮಾಡಿಕೊಂಡರು. ಸಿದ್ದರಾಮಯ್ಯ ಹಾಗೂ ಡಿಕೆಶಿ ಆಲಿಂಗನ ದೃತರಾಷ್ಟ್ರನ ಆಲಿಂಗನದ ರೀತಿಯಿದೆ ಎಂದು ಸಚಿವ ಅಶೋಕ ಅವರು ಇಗಾಗಲೇ ಹೇಳಿದ್ದಾರೆ. ಸಿದ್ದರಾಮೋತ್ಸವದಿಂದ ಕಾಂಗ್ರೆಸ್ ಹೋಳಾಗುತ್ತೆ, ಸಿಡಿದು ಹೋಗುತ್ತೆ ಎಂದು ಭವಿಷ್ಯ ನುಡಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!