Monday, October 3, 2022

Latest Posts

ಸ್ವಾತಂತ್ರ್ಯ ಸಂಭ್ರಮ: ವೆಂಕಣ್ಣ ನಾಯಕ, ಸುಕ್ರಿ ಬೊಮ್ಮ ಗೌಡರಿಗೆ ಸನ್ಮಾನ

ಹೊಸದಿಗಂತ ವರದಿ, ಅಂಕೋಲಾ:

ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವದ ಪ್ರಯುಕ್ತ ಭಾರತೀಯ ತಟರಕ್ಷಕ ಪಡೆಯ ಕಮಾಂಡರ್ ಮತ್ತು ಯೋಧರು ಅಂಕೋಲಾ ಪಟ್ಟಣಕ್ಕೆ ಬೈಕ್ ರ್ಯಾಲಿ ಮೂಲಕ ಆಗಮಿಸಿ ಭಾಸಗೋಡದ ಸ್ವಾತಂತ್ರ್ಯ ಹೋರಾಟಗಾರ ವೆಂಕಣ್ಣ ನಾಯಕ ಮತ್ತು ಬಡಗೇರಿಯ ಸುಕ್ರಿ ಬೊಮ್ಮ ಗೌಡ ಅವರ ಮನೆಗೆ ಭೇಟಿ ನೀಡಿ ಅವರನ್ನು ಸನ್ಮಾನಿಸಿ ಗೌರವಿಸಿದರು.
ಪಟ್ಟಣದ ಪಿ.ಎಂ.ಹೈಸ್ಕೂಲ್ ಬಳಿ ಆಗಮಿಸಿದ ಬೈಕ್ ರ್ಯಾಲಿಯನ್ನು ಹೈಸ್ಕೂಲ್ ಎನ್.ಸಿ.ಸಿ ಘಟಕದ ವತಿಯಿಂದ ಕಮಾಂಡರ್ ಗಣಪತಿ ತಾಂಡೇಲ್ ಮತ್ತು ಕೆಡೆಟ್ ಗಳು ಗೌರವಪೂರ್ವಕವಾಗಿ ಸ್ವಾಗತಿಸಿದರು.
ಬಾಸಗೋಡದ ಸೂರ್ವೆಯ ಸ್ವಾತಂತ್ರ್ಯ ಹೋರಾಟಗಾರ ವೆಂಕಣ್ಣ ನಾಯಕ ಅವರ ಮನೆಗೆ ಬೈಕ್ ರ್ಯಾಲಿ ಮೂಲಕ ತೆರಳಿದ ಯೋಧರು ವೆಂಕಣ್ಣ ನಾಯಕ ದಂಪತಿಗೆ ಕೋಸ್ಟ್ ಗಾರ್ಡ ಲಾಂಛನ ಇರುವ ಸ್ಮರಣಿಕೆ ನೀಡಿ ಗೌರವಿಸಿದರು.
ಈ ಸಂದರ್ಭದಲ್ಲಿ ಕೋಸ್ಟ ಗಾರ್ಡ್ ಕಮಾಂಡರ್ ಸುರೇಶ ಕುರಫ್ ಮಾತನಾಡಿ ಸ್ವಾತಂತ್ರ್ಯ ಹೋರಾಟದಲ್ಲಿ ಅಂಕೋಲೆಯ ಪಾತ್ರ ಮಹತ್ವದಾಗಿದ್ದು, ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಂಡ ಧೀಮಂತ ವ್ಯಕ್ತಿಯನ್ನು ಸನ್ಮಾನಿಸಲು ಹೆಮ್ಮೆ ಪಡುತ್ತೇವೆ ಎಂದರು.
ಯುನಿಟ್ ಕಮಾಂಡರ್ ಮಂಜುನಾಥ ಮಾತನಾಡಿ ಅಂಕೋಲಾ ತಾಲೂಕಿನಲ್ಲಿ ನಡೆದ ಉಪ್ಪಿನ ಸತ್ಯಾಗ್ರಹ, ಕರ ನಿರಾಕರಣೆ ಚಳುವಳಿ ಒಂದು ಐತಿಹಾಸಿಕ ಹೋರಾಟ ಎಂದರು.
ಎನ್. ಸಿ.ಸಿ ಕಮಾಂಡರ್ ದೀನಾನಾಥ ಬೋಸ್ಲೆ, ಕರಾವಳಿ ಕಾವಲು ಪಡೆ ನಿರೀಕ್ಷಕ ಸುರೇಶ ನಾಯಕ ಉಪಸ್ಥಿತರಿದ್ದರು, ಪತ್ರಕರ್ತ ಸುಭಾಷ ಕಾರೇಬೈಲ್ ಸ್ವಾಗತಿಸಿದರು, ರಾಜೇಶ್ ನಾಯಕ ವಂದಿಸಿದರು.
ಇದೇ ಸಂದರ್ಭದಲ್ಲಿ ತಾಲೂಕಿನ ಬಡಗೇರಿಗೆ ತೆರಳಿದ ಕೋಸ್ಟ್ ಗಾರ್ಡ ತಂಡ ಜಾನಪದ ಹಾಡುಗಾರ್ತಿ ಪದ್ಮಶ್ರೀ ಸುಕ್ರಿ ಗೌಡ ಅವರಿಗೆ ರಾಷ್ಟ್ರಧ್ವಜ ನೀಡಿ ಗೌರವಿಸಿದರು.
ಗೌರವ ಸ್ವೀಕರಿಸಿದ ಸುಕ್ರಜ್ಜಿ ಮಾತನಾಡಿ ಯೋಧರು ಬಂದು ಗೌರವಿಸಿರುವುದು ಜೀವನದ ಅತ್ಯಮೂಲ್ಯ ಕ್ಷಣ ಎಂದರು.
ಈ ಸಂದರ್ಭದಲ್ಲಿ ಸುಕ್ರಿ ಗೌಡ ಮತ್ತು ಸಂಗಡಿಗರು ಜಾನಪದ ಹಾಡು ಹಾಡಿ ಯೋಧರಿಗೆ ಸಮರ್ಪಿಸಿದರು.
ಸುಕ್ರಿ ಗೌಡ ಅವರ ಕುಟುಂಬದ ಮಹೇಶ ಗೌಡ ಉಪಸ್ಥಿತರಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!