ಹೊಸದಿಗಂತ ಡಿಜಿಟಲ್ ಡೆಸ್ಕ್:
ಅಭಿವೃದ್ಧಿಗೆ ಹಣದ ಕೊರತೆ ಇಲ್ಲ. ನಮ್ಮ ರಾಜ್ಯದ ಆರ್ಥಿಕ ಪರಿಸ್ಥಿತಿ ಉತ್ತಮವಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ನಮ್ಮ ರಾಜ್ಯದ ಬಜೆಟ್ 3 ಲಕ್ಷದ 71 ಸಾವಿರ ಕೋಟಿ ಇದ್ದು, ಇದರಲ್ಲಿ ಪಂಚ ಗ್ಯಾರೆಂಟಿ ಯೋಜನೆಗಳಿಗೆ 55 ಸಾವಿರ ಕೋಟಿಯನ್ನು ಬಳಕೆ ಮಾಡಲಾಗುತ್ತಿದೆ. ಉಳಿದ ಹಣವನ್ನು ಯೋಜನಾ, ಯೋಜನೇತರ ಹಾಗೂ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಬಳಕೆ ಮಾಡಲಾಗುತ್ತಿದೆ ಎಂದರು.
ನಾವು 5 ಗ್ಯಾರೆಂಟಿ ಯೋಜನೆಗಳನ್ನು ಜಾರಿಗೆ ತಂದಿದ್ದರೂ ಸಹ ಕರ್ನಾಟಕದ ಬಜೆಟ್ 3 ಲಕ್ಷದ 71 ಸಾವಿರ ಕೋಟಿ ಅದರಲ್ಲಿ 1 ಲಕ್ಷದ 21 ಸಾವಿರ ಕೋಟಿಯನ್ನು ಅಭಿವೃದ್ಧಿಗೆ ಖರ್ಚು ಮಾಡಲಾಗುತ್ತಿದೆ. ಗ್ಯಾರೆಂಟಿ ಯೋಜನೆಗಳಿಗೆ ವಾರ್ಷಿಕ 58 ಸಾವಿರ ಕೋಟಿಗಳನ್ನು ಖರ್ಚು ಮಾಡಲಾಗುತ್ತಿದೆ. ನಮ್ಮ ರಾಜ್ಯದ ಆರ್ಥಿಕ ಪರಿಸ್ಥಿತಿ ಉತ್ತಮವಾಗಿದೆ ಎಂದಿದ್ದಾರೆ.
ಶಕ್ತಿ ಯೋಜನೆಯಡಿ 325 ಕೋಟಿ ಮಹಿಳೆಯರು ಉಚಿತವಾಗಿ ಸರ್ಕಾರಿ ಬಸ್ ಗಳಲ್ಲಿ ಪ್ರಯಾಣ ಮಾಡಿದ್ದಾರೆ.1.22 ಕೋಟಿ ಕುಟುಂಬದ ಮಹಿಳೆಯರು ಮಾಸಿಕ 2 ಸಾವಿರ ಗೃಹ ಲಕ್ಷ್ಮಿ ಯೋಜನೆಯಡಿ ಹಣ ಪಡೆಯುತ್ತಿದ್ದಾರೆ. 1.61 ಕೋಟಿ ಕುಟುಂಬಗಳು ಉಚಿತ ವಿದ್ಯುತ್ ಬಳಸುತ್ತಿದ್ದಾರೆ. ಅನ್ನ ಭಾಗ್ಯ ಯೋಜನೆಯಡಿ ಉಚಿತವಾಗಿ 5 ಕೆ ಜಿ ಅಕ್ಕಿ ಹಾಗೂ 5 ಕೆ ಜಿ ಗೆ ಹಣ ನೀಡಲಾಗುತ್ತಿದೆ. ಯುವ ನಿಧಿ ಯೋಜನೆಯಡಿ ನಿರುದ್ಯೋಗಿ ಯುವಕ ಯುವತಿಯರಿಗೆ ಮಾಸಿಕ ಹಣ ನೀಡಲಾಗುತ್ತಿದೆ. ಒಟ್ಟಾರೆ ಒಂದು ಕುಟುಂಬಕ್ಕೆ ವಾರ್ಷಿಕ 50 ರಿಂದ 60 ಸಾವಿರ ಸೌಲಭ್ಯವನ್ನು ನೀಡಲಾಗುತ್ತಿದೆ ಮಾಹಿತಿ ನೀಡಿದರು.