Wednesday, August 10, 2022

Latest Posts

ಭೂ ಕಂಪನದ ಬಗ್ಗೆ ಆತಂಕ ಬೇಡ: ಸಚಿವ ನಾಗೇಶ್

ಹೊಸದಿಗಂತ ವರದಿ,ಮಡಿಕೇರಿ:

ಹಾಸನ ಹಾಗೂ ಕೊಡಗು ಜಿಲ್ಲೆಯ ನೈರುತ್ಯ ಗಡಿಭಾಗದಲ್ಲಿ ಇತ್ತೀಚೆಗೆ ಭೂ ಕಂಪಿಸಿರುವ ಬಗ್ಗೆ ವರದಿಯಾಗಿದ್ದು, ಯಾರು ಸಹ ಆತಂಕಪಡುವ ಅಗತ್ಯ ಇಲ್ಲ ಎಂದು ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ಬಿ.ಸಿ.ನಾಗೇಶ್ ಅವರು ತಿಳಿಸಿದ್ದಾರೆ.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮುಂಗಾರು ಸಂದರ್ಭದಲ್ಲಿ ಜಿಲ್ಲಾಡಳಿತ ಕೈಗೊಂಡಿರುವ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳ ಬಗ್ಗೆ ಮಾಹಿತಿ ಪಡೆದು ಅವರು ಮಾತನಾಡಿದರು.
ಭೂ ಕಂಪನದಿಂದ ಜಿಲ್ಲೆಯ ಯಾವುದೇ ಭಾಗದಲ್ಲಿ ಭೂಮಿ ಬಿರುಕು ಬಿಟ್ಟಿರುವ ಬಗ್ಗೆ ವರದಿಯಾಗಿಲ್ಲ. ಈ ಹಿಂದೆ 2018 ರಲ್ಲಿ ರಿಕ್ಟರ್ ಮಾಪಕದಲ್ಲಿ 3.3 ರಷ್ಟು ಭೂ ಕಂಪಿಸಿರುವ ಬಗ್ಗೆ ವರದಿಯಾಗಿತ್ತು. ಆ ಸಂದರ್ಭದಲ್ಲಿ ಭೂಕುಸಿತ ಹಾಗೂ ಪ್ರವಾಹ ಉಂಟಾಗಿತ್ತು. ಈ ಬಾರಿ ಸರಾಸರಿ ಮಳೆಯ ಪ್ರಮಾಣ ಕಡಿಮೆ ಇದ್ದು, ಆ ನಿಟ್ಟಿನಲ್ಲಿ ಯಾರೂ ಸಹ ಆತಂಕ ಪಡಬೇಕಿಲ್ಲ ಎಂದು ಸಚಿವರು ಹೇಳಿದರು.
ಹೆಚ್ಚಿನ ಮಳೆಯಾಗಿ ಹಾರಂಗಿ ಜಲಾಶಯ ಭರ್ತಿಯಾದಲ್ಲಿ ಕನಿಷ್ಟ 6 ರಿಂದ 7 ಅಡಿ ನೀರನ್ನು ಸಂಗ್ರಹ ಮಾಡಿಕೊಂಡು ಉಳಿದ ಹೆಚ್ಚುವರಿ ನೀರನ್ನು ಜಲಾಶಯದಿಂದ ಹೊರಗೆ ಬಿಡಬೇಕಾಗುತ್ತದೆ. ಆ ನಿಟ್ಟಿನಲ್ಲಿ ಜಿಲ್ಲಾಡಳಿತ ಕ್ರಮವಹಿಸಲಿದೆ ಎಂದು ಅವರು ತಿಳಿಸಿದರು.
ಮುಂಗಾರು ಸಂದರ್ಭದಲ್ಲಿ ಸಾಂಕ್ರಾಮಿಕ ರೋಗ ನಿಯಂತ್ರಣಕ್ಕೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಸ್ಥಳೀಯ ಸಂಸ್ಥೆಗಳು ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಬೇಕು. ಹೆಚ್ಚು ಮಳೆಯಾದಲ್ಲಿ ಅಗತ್ಯವಿರುವ ಕಡೆಗಳಲ್ಲಿ ಪರಿಹಾರ ಕೇಂದ್ರಗಳನ್ನು ತೆರೆಯುವುದು, ವೈದ್ಯರನ್ನು ನಿಯೋಜಿಸುವುದು, ಮತ್ತಿತರ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಬಿ.ಸಿ.ನಾಗೇಶ್ ಸೂಚಿಸಿದರು.
ಈಗಾಗಲೇ 2018 ರಲ್ಲಿ ಸಂಭವಿಸಿದ ಪ್ರಾಕೃತಿಕ ವಿಕೋಪದಿಂದ ಮನೆ ಕಳೆದುಕೊಂಡವರಿಗೆ ಮನೆ ನೀಡಲಾಗಿದೆ. ಹಾಗೆಯೇ ಬಾಕಿ ಇರುವ ಮನೆಗಳ ಹಸ್ತಾಂತರ ಮಾಡುವುದು, ಅಗತ್ಯ ಮೂಲ ಸೌಲಭ್ಯ ಕಲ್ಪಿಸುವಂತೆ ಸಚಿವರು ತಿಳಿಸಿದರು.
2018 ರ ಜುಲೈ 9 ರಂದು ಸಂಪಾಜೆ ಹೋಬಳಿ ವ್ಯಾಪ್ತಿಯಲ್ಲಿ ರಿಕ್ಟರ್ ಮಾಪಕದಲ್ಲಿ 3.3 ರಷ್ಟು ದಾಖಲಾಗಿ ಭೂಮಿ ಕಂಪಿಸಿದ ಕೆಲವೊಂದು ಕಡೆ ಭೂಮಿ ಬಿರುಕು ಬಿಟ್ಟಿತ್ತು. ನಂತರ ಆಗಸ್ಟ್ ತಿಂಗಳಲ್ಲಿ ಅತಿ ಹೆಚ್ಚು ಮಳೆಯಾದ ಕಾರಣ ಬಿರುಕು ಬಿಟ್ಟ ಸ್ಥಳದಲ್ಲಿ ಮಳೆ ನೀರು ಹೋಗಿ ಭೂ ಕುಸಿತವಾಗಿತ್ತು ಎಂದು ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರಾದ ಅನನ್ಯ ವಾಸುದೇವ ಅವರು ಮಾಹಿತಿ ನೀಡಿದರು.
ಶನಿವಾರ ಕರಿಕೆಯಿಂದ 4 ಕಿ.ಮೀ. ವಾಯುವ್ಯ ಭಾಗದಲ್ಲಿ ಭೂಕಂಪನವಾಗಿದ್ದು, ರಿಕ್ಟರ್ ಮಾಪಕದಲ್ಲಿ 2.3 ಎಂದು ದಾಖಲಾಗಿದೆ. ಹಾಗೂ ಕಳೆದ ವಾರ ಹಾಸನದ ಹೊಳೆನರಸೀಪುರ ತಾಲೂಕಿನಲ್ಲಿ ಭೂಕಂಪನವಾಗಿದ್ದು, ರಿಕ್ಟರ್ ಮಾಪಕದಲ್ಲಿ 3.4 ಎಂದು ದಾಖಲಾಗಿದೆ. ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ಕೆಲವು ಗ್ರಾಮಗಳಲ್ಲಿ ಹಾಗೂ ಮಡಿಕೇರಿ ತಾಲೂಕಿನ ದೇವಸ್ತೂರು ಗ್ರಾಮಗಳಲ್ಲಿ ಭೂಮಿ ಕಂಪಿಸಿದ ಅನುಭವವಾಗಿದ್ದು, ಭೂಮಿ ಬಿರುಕು ಬಿಟ್ಟಿರುವ ಬಗ್ಗೆ ಯಾವುದೇ ವರದಿಯಾಗಿಲ್ಲ ಎಂದು ಅವರು ಹೇಳಿದರು.
ಮನೆಗಳ ಹಸ್ತಾಂತರ: ಪ್ರಾದೇಶಿಕ ಸಾರಿಗೆ ಕಚೇರಿ ಬಳಿ ನಿರ್ಮಾಣವಾಗಿರುವ ಮನೆಗಳ ಹಸ್ತಾಂತರಕ್ಕೆ ಬಾಕಿ ಇದ್ದು, ವಿದ್ಯುತ್ ಕಾಮಗಾರಿ ಕೈಗೊಳ್ಳಲಾಗುತ್ತದೆ. ಜುಲೈ ಮೊದಲ ವಾರದಲ್ಲಿ ಮನೆ ಹಸ್ತಾಂತರಕ್ಕೆ ಸಿದ್ಧವಾಗಲಿದೆ ಎಂದು ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ ಅವರು ಹೇಳಿದರು.
ಪ್ರಕರಣ ದಾಖಲಿಸಿ: ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ಎಂ.ಪಿ.ಅಪ್ಪಚ್ಚುರಂಜನ್ ಅವರು ಲೋಕೋಪಯೋಗಿ ಇಲಾಖೆ ವ್ಯಾಪ್ತಿಯ ರಸ್ತೆ ಒತ್ತುವರಿ ಮಾಡಿಕೊಂಡಿರುವ ಬಗ್ಗೆ ಮಾಹಿತಿ ಇದ್ದು, ಒತ್ತುವರಿ ತೆರವುಗೊಳಿಸಬೇಕು. ಈ ಸಂಬಂಧ ಪ್ರಕರಣ ದಾಖಲಿಸಬೇಕು ಎಂದು ನಿರ್ದೇಶನ ನೀಡಿದರು.
ರಸ್ತೆ ಬದಿ ಕಟ್ಟಡ ನಿರ್ಮಾಣ ಮಾಡುವುದು ಕಂಡುಬಂದಲ್ಲಿ ಗ್ರಾಮ ಪಂಚಾಯಿತಿ ಅಥವಾ ಸ್ಥಳೀಯ ಆಡಳಿತದಿಂದ ಯಾವುದೇ ಕಾರಣಕ್ಕೂ ಎನ್‍ಒಸಿ ನೀಡಬಾರದು ಎಂದು ಅವರು ತಾಕೀತು ಮಾಡಿದರು.
ರಸಗೊಬ್ಬರ ಕೊರತೆ: ಜಿಲ್ಲೆಯಲ್ಲಿ ಸುಫಲಾ ಹೊರತುಪಡಿಸಿ ಡಿಎಪಿ ಮತ್ತಿತರ ರಸಗೊಬ್ಬರ ಸಹಕಾರ ಸಂಘಗಳಲ್ಲಿ ದೊರೆಯುತ್ತಿಲ್ಲ ಎಂದು ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬಾಂಡ್ ಗಣಪತಿ ಅವರು ಸಚಿವರ ಗಮನಕ್ಕೆ ತಂದರು.
ಇದಕ್ಕೆ ಧ್ವನಿಗೂಡಿಸಿದ ಶಾಸಕ ಎಂ.ಪಿ.ಅಪ್ಪಚ್ಚುರಂಜನ್ ಅವರು, ಡಿಎಪಿ ರಸಗೊಬ್ಬರ ಯಾವುದೇ ಸಹಕಾರ ಸಂಘದಲ್ಲಿ ಸಿಗುತ್ತಿಲ್ಲ. ಈ ಸಂಬಂಧ ಕಳೆದ ಸಭೆಯಲ್ಲಿ ರಸಗೊಬ್ಬರ ಸಮರ್ಪಕವಾಗಿ ಪೂರೈಕೆಗೆ ಸೂಚಿಸಲಾಗಿತ್ತು. ಆದರೆ ಇಲ್ಲಿನ ರೈತರಿಗೆ ರಸಗೊಬ್ಬರ ಸರಿಯಾಗಿ ದೊರೆಯುತ್ತಿಲ್ಲ ಎಂದು ಹೇಳಿದರು.
ರಸಗೊಬ್ಬರವು ನೆರೆ ರಾಜ್ಯಕ್ಕೆ ಕಳ್ಳಸಾಗಣೆ ಆಗುತ್ತಿರುವುದು ಕಂಡುಬಂದರೆ, ಕಠಿಣ ಕ್ರಮ ಜರುಗಿಸುವಂತೆ ಶಾಸಕ ಎಂ.ಪಿ.ಅಪ್ಪಚ್ಚುರಂಜನ್ ಅವರು ಸೂಚಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಕೃಷಿ ಇಲಾಖೆಯ ಜಂಟಿ ನಿರ್ದೇಶಕಿ ಶಬಾನಾ ಎಂ.ಷೇಕ್ ಅವರು ಹಾಸನದಲ್ಲಿ ರಸಗೊಬ್ಬರ ದಾಸ್ತಾನು ಇದ್ದು, ರಸಗೊಬ್ಬರ ಪೂರೈಕೆಗೆ ಅಗತ್ಯ ಕ್ರಮವಹಿಸಲಾಗುವುದು ಎಂದು ಹೇಳಿದರು.
ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ ಅವರು, ರಸಗೊಬ್ಬರ ಪೂರೈಸುವ ಲಾರಿಗಳಿಗೆ ಯಾವುದೇ ರೀತಿ ತೊಂದರೆ ಆಗದಂತೆ ಗಮನಹರಿಸಲಾಗಿದೆ ಎಂದರು.
ಲೋಕೋಪಯೋಗಿ ಇಲಾಖೆ ಎಂಜಿನಿಯರ್ ಪುರುಷೋತ್ತಮ ಹಾಗೂ ಪಂಚಾಯತ್ ರಾಜ್ ಎಂಜಿನಿಯರ್ ನಾಗೇಂದ್ರಪ್ಪ ಅವರು ಮಳೆಗಾಲದಲ್ಲಿ ಚರಂಡಿಯಲ್ಲಿ ನೀರು ನಿಲ್ಲದಂತೆ ಕ್ರಮವಹಿಸಲಾಗುವುದು. ರಸ್ತೆ ಗುಂಡಿ ಮುಚ್ಚಲಾಗುವುದು ಎಂದು ತಿಳಿಸಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಆರ್.ವೆಂಕಟೇಶ್ ಅವರು ಮುಂಗಾರಿನಲ್ಲಿ ಸಾಂಕ್ರಾಮಿಕ ರೋಗಗಳು ಉಲ್ಭಣವಾಗದಂತೆ ಗಮನಹರಿಸಲಾಗಿದೆ. ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ವೈದ್ಯರನ್ನು ನಿಯೋಜಿಸಲು ಕ್ರಮವಹಿಸಲಾಗಿದೆ ಎಂದರು.
ಬಳಿಕ ಜಿಲ್ಲಾ ಉಸ್ತುವಾರಿ ಸಚಿವ ಬಿ.ಸಿ.ನಾಗೇಶ್ ಅವರು, ಮಳೆಗಾಲದ ಸಂದರ್ಭದಲ್ಲಿ ಯಾವುದೇ ರೀತಿಯಲ್ಲಿ ಸಮಸ್ಯೆಗಳು ಉಂಟಾಗದಂತೆ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ವಹಿಸಬೇಕು ಎಂದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ಎ.ಅಯ್ಯಪ್ಪ, ಅಪರ ಜಿಲ್ಲಾಧಿಕಾರಿ ಡಾ.ನಂಜುಂಡೇಗೌಡ, ಉಪ ವಿಭಾಗಾಧಿಕಾರಿ ಡಾ.ಯತೀಶ್ ಉಲ್ಲಾಳ್, ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆಯ ನಿರ್ದೇಶಕ ಡಾ.ಕಾರ್ಯಪ್ಪ, ಅಧೀಕ್ಷ ರೂಪೇಶ್ ಗೋಪಾಲ್, ತಹಶೀಲ್ದಾರರಾದ ಮಹೇಶ, ಗೋವಿಂದರಾಜು, ಕಾವೇರಿ ನೀರಾವರಿ ನಿಗಮದ ಇಇ ಪುಟ್ಟಸ್ವಾಮಿ ಮತ್ತಿತರರು ಇದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss