SIIMA ಪ್ರಶಸ್ತಿಗೆ ನಾಮಿನೇಷನ್: ಕನ್ನಡ ಸೇರಿದಂತೆ ಟಾಪ್​ ಸೌತ್​ ಸಿನಿಮಾಗಳ ಪಟ್ಟಿ ಬಿಡುಗಡೆ!

ಹೊಸ ದಿಗಂತ ಡಿಜಿಟಲ್ ಡೆಸ್ಕ್

ದಕ್ಷಿಣ ಭಾರತದ ಚಿತ್ರರಂಗದ ಪ್ರತಿಷ್ಠಿತಯ ಸೈಮಾ ಪ್ರಶಸ್ತಿ ಪ್ರದಾನ ಸಮಾರಂಭವು ಮುಂದಿನ ತಿಂಗಳು 10 ಮತ್ತು 11 ರಂದು ನಡೆಯಲಿದೆ. ಈ ಹಿನ್ನೆಲೆಯಲ್ಲಿ ಸೈಮಾ ವೇದಿಕೆಯಲ್ಲಿ ಸ್ಪರ್ಧಿಸಲಿರುವ ಟಾಪ್ ನಟರ ಚಿತ್ರಗಳ ಪಟ್ಟಿಯನ್ನು ಬುಧವಾರ ಬಿಡುಗಡೆ ಮಾಡಲಾಗಿದೆ.

ಕಳೆದ ವರ್ಷ ತೆಲುಗು, ತಮಿಳು, ಮಲಯಾಳಂ ಮತ್ತು ಕನ್ನಡ ಭಾಷೆಗಳಲ್ಲಿ ಬಿಡುಗಡೆಯಾದ ಮತ್ತು ನಾಮನಿರ್ದೇಶನಕ್ಕೆ ಆಯ್ಕೆಯಾದ ಚಲನಚಿತ್ರಗಳು ಸ್ಪರ್ಧಿಸಲಿವೆ ಎಂದು ತಿಳಿಸಲಾಗಿದೆ.

ಕನ್ನಡದ ಚಾಲೆಂಜಿಂಗ್​ ಸ್ಟಾರ್​ ದರ್ಶನ್​ ನಟನೆಯ ರಾಬರ್ಟ್​ ಚಿತ್ರವು 10 ಹೆಚ್ಚು ವಿಭಾಗಗಳಲ್ಲಿ ನಾಮಿನೇಟ್ ಆಗಿದೆ. ರಿಷಬ್ ಶೆಟ್ಟಿ ಮತ್ತು ರಾಜ್ ಬಿ ಶೆಟ್ಟಿ (ನಿರ್ದೇಶನ) ನಟನೆಯ ಸಿನಿಮಾ ಗರುಡ ಗಮನ ವೃಷಭ ವಾಹನ ಕೂಡ 8 ವಿಭಾಗಗಳಲ್ಲಿ ನಾಮಿನೇಟ್ ಆದರೆ ಪುನೀತ್ ರಾಜ್‌ಕುಮಾರ್ ನಟನೆಯ ಯುವರತ್ನ ಚಿತ್ರವು 7 ವಿಭಾಗಗಳಲ್ಲಿ ನಾಮಿನೇಟ್ ಆಗಿದೆ.
ಇವುಗಳ ಜೊತೆಗೆ ದುನಿಯಾ ವಿಜಯ್​ ನಟನೆ ಮತ್ತು ನಿರ್ದೇಶನ ಮಾಡಿರುವ ಸಲಗ ಮತ್ತು ಶಿವರಾಜ್​ ಕುಮಾರ್​ ನಟನೆಯ ಹರ್ಷ ನಿರ್ದೇಶನದ ಭಜರಂಗಿ 2 ಚಿತ್ರ ಕೂಡ ನಾಮನಿರ್ದೇಶನಗೊಂಡಿವೆ.

ಟಾಲಿವುಡ್​ನಲ್ಲಿ ‘ಪುಷ್ಪ’, ‘ಅಖಂಡ’, ‘ಉಪ್ಪೇನ’ ಮತ್ತು ‘ಜಾತಿರತ್ನ’ ಹೆಚ್ಚು ವಿಭಾಗಗಳಲ್ಲಿ ನಾಮಿನೇಟ್ ಆಗಿವೆ. ಸೌತ್​ ಸ್ಟಾರ್​ ಅಲ್ಲು ಅರ್ಜುನ್ ಅಭಿನಯದ ‘ಪುಷ್ಪ-ದಿ ರೈಸ್​’ ಚಿತ್ರ 12 ವಿಭಾಗಗಳಲ್ಲಿ ನಾಮಿನೇಟ್ ಆಗಿದ್ದರೆ, ಬಾಲಯ್ಯ ಅಭಿನಯದ ‘ಅಖಂಡ’ ಸಿನಿಮಾ 10 ವಿಭಾಗಗಳಲ್ಲಿ ಎರಡನೇ ಸ್ಥಾನಕ್ಕೆ ನಾಮನಿರ್ದೇಶನಗೊಂಡಿದೆ.

ಮಲಯಾಳಂನಲ್ಲಿ ಟೊವಿನೋ ಥಾಮಸ್ ನಟನೆಯ ‘ಮಿನ್ನಲ್ ಮುರಳಿ’ 10 ವಿಭಾಗಗಳಲ್ಲಿ ನಾಮಿನೇಟ್ ಆಗಿದೆ. ಅಲ್ಲದೆ ದುಲ್ಕರ್ ಸಲ್ಮಾನ್ ಅಭಿನಯದ ಕುರುಪ್ ಚಿತ್ರವು 6 ವಿಭಾಗಗಳಲ್ಲಿ ನಾಮಿನೇಟ್ ಆದರೆ, ಫಹಾದ್ ಫಾಜಿಲ್ ನಟನೆಯ ಜೋಜಿ ಚಿತ್ರ ಕೂಡ 6 ವಿಭಾಗಗಳಲ್ಲಿ ನಾಮಿನೇಟ್ ಆಗಿದೆ.

ತಮಿಳಿನಲ್ಲಿ ಸೆಲ್ವರಾಜ್ ನಿರ್ದೇಶನದ ಧನುಷ್​ ನಟನೆಯ ಕರ್ಣನ್ ಚಿತ್ರವು 10 ವಿಭಾಗಗಳಲ್ಲಿ ನಾಮಿನೇಟ್ ಆಗಿದೆ. ಅಲ್ಲದೆ ನಿರ್ದೇಶಕ ಲೋಕೇಶ್ ಕನಗರಾಜ್ ಅವರ ವಿಜಯ್ ನಟನೆಯ ಮಾಸ್ಟರ್ ಚಿತ್ರ ಸೇರಿದಂತೆ ಡಾಕ್ಟರ್ ಮತ್ತು ತಲೈವಿ ತಲಾ 7 ವಿಭಾಗಗಳಲ್ಲಿ ನಾಮನಿರ್ದೇಶನಗೊಂಡಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!