ಧಾರ್ಮಿಕ ದತ್ತಿ ಇಲಾಖೆಗೆ ಒಳಪಟ್ಟ ಧಾರ್ಮಿಕ ಕೇಂದ್ರಗಳಲ್ಲಿ ವ್ಯಾಪಾರಕ್ಕೆ ಹಿಂದುಯೇತರರಿಗೆ ಅವಕಾಶ ನೀಡಬಾರದು: ವಿಹಿಂಪ

ಹೊಸದಿಗಂತ ವರದಿ,ಮಂಗಳೂರು:

ರಾಜ್ಯದ ಧಾರ್ಮಿಕ ದತ್ತಿ ಇಲಾಖೆಗೆ ಒಳಪಟ್ಟ ಎಲ್ಲ ದೇವಸ್ಥಾನ, ದೈವಸ್ಥಾನಗಳ ಜಾತ್ರಾ ಮಹೋತ್ಸವ, ರಥೋತ್ಸವ ಮತ್ತು ಇನ್ನಿತರ ಧಾರ್ಮಿಕ ಕಾರ್ಯಕ್ರಮ, ವ್ಯಾಪಾರಕ್ಕೆ ಹಿಂದುಯೇತರರಿಗೆ ಅವಕಾಶ ನೀಡಬಾರದು ಎಂಬ ಆದೇಶ ಹೊರಡಿಸಬೇಕು ಎಂದು ವಿಶ್ವಹಿಂದು ಪರಿಷತ್ ರಾಜ್ಯ ಸರಕಾರವನ್ನು ಆಗ್ರಹಿಸಿದೆ.
ಹಿಂದು ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ಅಧಿನಿಯಮ1997ರ 2002ರ ನಿಯಮ31 (12)ರ ಪ್ರಕಾರ ಧಾರ್ಮಿಕ ದತ್ತಿ ಇಲಾಖೆಗೆ
ಸಂಬಂಧಿಸಿದ ದೇವಸ್ಥಾನದ ಸುತ್ತಮುತ್ತಲಿನ ಪ್ರದೇಶದಲ್ಲಿ ಹಿಂದುಗಳಲ್ಲದವರಿಗೆ ಗುತ್ತಿಗೆಯನ್ನು ನೀಡತಕ್ಕದಲ್ಲ ಎಂಬ ಅಧಿನಿಯಮ ಇದೆ. ಈ ನಿಯಮದ ಪ್ರಕಾರ ಸ್ಪಷ್ಟವಾಗಿ ಉಲ್ಲೇಖವಿರುವ ಕಾರಣ ರಾಜ್ಯ ಧಾರ್ಮಿಕ ದತ್ತಿ ಇಲಾಖೆಯು ಕೂಡಲೇ ರಾಜ್ಯದ ಎಲ್ಲ ದೇವಸ್ಥಾನ, ದೈವಸ್ಥಾನ ಆಡಳಿತ ಮಂಡಳಿಗೆ ಈ ಆದೇಶವನ್ನು ಹೊರಡಿಸಿ, ಕರಾವಳಿ ಜಿಲ್ಲೆಗಳಲ್ಲಿ ಸೇರಿದಂತೆ ರಾಜ್ಯದ ಹಿಂದು ಧಾರ್ಮಿಕ ದತ್ತಿ ಇಲಾಖೆಗೆ ಒಳಪಟ್ಟ ಎಲ್ಲ ದೇವಸ್ಥಾನ, ದೈವಸ್ಥಾನಗಳ ಜಾತ್ರಾ ಮಹೋತ್ಸವ, ರಥೋತ್ಸವ ಮತ್ತು ಇನ್ನಿತರ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಹಿಂದುಯೇತರರಿಗೆ ಅವಕಾಶ ಕೊಡಬಾರದು ಹಾಗೂ ದೇವಸ್ಥಾನಕ್ಕೆ ಸಂಬಂಧಪಟ್ಟ ಯಾವುದೇ ಟೆಂಡರ್ ಪ್ರಕ್ರಿಯೆಗಳಲ್ಲಿ ಹಿಂದುಯೇತರರಿಗೆ ಭಾಗವಹಿಸದಿರಲು ಈ ನಿಯಮದ ಪ್ರಕಾರ ಕಾನೂನು ಜಾರಿಗೆ ತರಲು ಕ್ರಮ ಕೈಗೊಳ್ಳಲು ಸರಕಾರಕ್ಕೆ ಆಗ್ರಹಿಸಿ ಧಾರ್ಮಿಕ ದತ್ತಿ ಇಲಾಖೆ ಸಚಿವೆ ಶಶಿಕಲಾ ಜೊಲ್ಲೆ ಅವರಿಗೆ ದ.ಕ. ಜಿಲ್ಲಾಧಿಕಾರಿ ಮೂಲಕ ಬುಧವಾರ ಮನವಿ ಸಲ್ಲಿಸಲಾಗಿದೆ ಎಂದು ವಿಹಿಂಪ ವಿಭಾಗ ಕಾರ್ಯದರ್ಶಿ ಶರಣ್ ಪಂಪ್‌ವೆಲ್ ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಖಾಸಗಿ ದೇವಸ್ಥಾನ, ದೈವಸ್ಥಾನ ಆಡಳಿತ ಮಂಡಳಿಗೆ ವಿನಂತಿ
ಧಾರ್ಮಿಕ ದತ್ತಿ ಇಲಾಖೆಯ ಒಳಪಟ್ಟ ದೇವಸ್ಥಾನ ಆಡಳಿತ ಮಂಡಳಿತಯವರ ನಿರ್ಣಯದಂತೆ ಖಾಸಗಿ ದೇವಸ್ಥಾನ, ದೈವಸ್ಥಾನ, ಭಜನಾ ಮಂಡಳಿಗಳು ಕೂಡ ನಿರ್ಣಯವನ್ನು ಗಣನೆಗೆ ತೆಗೆದುಕೊಂಡು ತಾವೂ ಕೂಡಾ ಮುಂದಿನ ದಿನಗಳಲ್ಲಿ ತಮ್ಮ ಜಾತ್ರೆ, ಕೋಲ, ನೇಮಗಳಿಗೆ ಹಿಂದುಯೇತರರಿಗೆ ಅಂಗಡಿ ಮುಂಗಟ್ಟುಗಳನ್ನು ನೀಡದಿರುವಂತಹ ನಿರ್ಣಯವನ್ನು ತೆಗೆದುಕೊಳ್ಳುವಂತೆ ವಿನಂತಿಸುತ್ತೇವೆ ಎಂದು ಹೇಳಿದರು.
ವಿಹಿಂಪ ಜಿಲ್ಲಾ ಕಾರ್ಯದರ್ಶಿ ಶಿವಾನಂದ ಮೆಂಡನ್, ಜಿಲ್ಲಾ ಪ್ರಚಾರ ಪ್ರಮುಖ್ ಪ್ರದೀಪ್ ಸರಿಪಳ್ಳ, ಬಜರಂಗದಳ ವಿಭಾಗ ಸಂಚಾಲಕ ಭುಜಂಗ ಕುಲಾಲ್, ಜಿಲ್ಲಾ ಸಂಚಾಲಕ ಪುನೀತ್ ಅತ್ತಾವರ ಉಪಸ್ಥಿತರಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!