ಹೊಸದಿಗಂತ ವರದಿ,ಮಂಗಳೂರು:
ಕರಾವಳಿಯ ದೇವಸ್ಥಾನಗಳ ಜಾತ್ರೆಯಲ್ಲಿ ಮುಸಲ್ಮಾನ ವರ್ತಕರಿಗೆ ಪ್ರವೇಶವಿಲ್ಲ ಎಂಬ ನಿರ್ಧಾರ ಕೈಗೊಂಡಿರುವುದನ್ನು ವಿಶ್ವಹಿಂದು ಪರಿಷತ್ ಸ್ವಾಗತಿಸುತ್ತದೆ. ಗಂಗೊಳ್ಳಿಯಲ್ಲಿ ಹಿಂದು ಮೀನುಗಾರ ಮಹಿಳೆಯರಿಗೆ ಮುಸಲ್ಮಾನರು ಬಹಿಷ್ಕಾರ ಹಾಕಿದಾಗ ಸುಮ್ಮನಿದ್ದವರು ಈಗ ಸೌಹಾರ್ದತೆ, ಸಾಮರಸ್ಯದ ಪಾಠ ಮಾಡುತ್ತಿದ್ದಾರೆ. ಮಸೀದಿ ಕಟ್ಟಡಗಳಲ್ಲಿ, ಮಸೀದಿ, ಚರ್ಚ್ ಆವರಣದಲ್ಲಿ ಹಿಂದುಗಳಿಗೆ ಟೆಂಡರ್, ವ್ಯಾಪಾರಕ್ಕೆ ಅವಕಾಶ ನೀಡುತ್ತಾರೆಯೇ ಎಂದು ವಿಹಿಂಪ ಮಂಗಳೂರು ವಿಭಾಗ ಕಾರ್ಯದರ್ಶಿ ಶರಣ್ ಪಂಪ್‌ವೆಲ್ ಪ್ರಶ್ನಿಸಿದ್ದಾರೆ.
ನಗರದ ವಿಹಿಂಪ ಕಾರ್ಯಾಲದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.
ದೇವಸ್ಥಾನಗಳ ಜಾತ್ರೆಗಳಲ್ಲಿ ಹಿಂದುಯೇತರರಿಗೆ ವ್ಯಾಪಾರಕ್ಕೆ ಅವಕಾಶವಿಲ್ಲ ಎಂಬ ನಿರ್ಧಾರ ಅಪಾಯಕಾರಿ ಎಂಬ ಪಿಎಫ್‌ಐ ಹೇಳಿಕೆಗೆ ಪ್ರತಿಕ್ರಿಯಿಸಿದ ಶರಣ್ ಪಂಪ್‌ವೆಲ್, ಪಿಎಫ್‌ಐ ಎಂಬ ಸಂಘಟನೆಯೇ ಹಿಂದುಗಳಿಗೆ ಮಾತ್ರವಲ್ಲದೆ, ಇಡೀ ದೇಶಕ್ಕೆ ಅಪಾಯಕಾರಿಯಾಗಿದೆ. ಹಿಜಾಬ್ ಪ್ರಕರಣದ ಬಳಿಕ ಈ ಸಂಘಟನೆ ಮುಸಲ್ಮಾನರಿಗೂ ಅಪಾಯಕಾರಿಯಾಗಿ ಪರಿಣಮಿಸಿದೆ. ಹಿಜಾಬ್ ಕುರಿತು ಹೈಕೋರ್ಟ್ ತೀರ್ಪು ವಿರೋಧಿಸಿ ನ್ಯಾಯಾಧೀಶರ ವಿರುದ್ಧವೇ ಪ್ರತಿಭಟನೆ ವೇಳೆ ಮುಸಲ್ಮಾನರು ಮೆಡಿಕಲ್ ಶಾಪ್, ಮಂಗಳೂರಿನ ದಕ್ಕೆಯನ್ನು ಬಂದ್ ಮಾಡಿದ್ದಾರೆ. ನಮ್ಮ ತಾಳ್ಮೆಗೂ ಮಿತಿ ಇದೆ. ಸಂಘರ್ಷ ಬೇಡ ಎಂಬ ನೆಲೆಯಲ್ಲಿ ಇದುವರೆಗೆ ನಾವೂ ಸುಮ್ಮನಿದ್ದೆವು ಎಂದರು.