ಹೊಸದಿಗಂತ ಡಿಜಿಟಲ್ ಡೆಸ್ಕ್:
ಯುಎಸ್ ಮತ್ತು ದಕ್ಷಿಣ ಕೊರಿಯಾದ ಜಂಟಿ ಮಿಲಿಟರಿ ಕಾರ್ಯಾಚರಣೆ ವಿರುದ್ಧ ಉತ್ತರ ಕೊರಿಯಾ ಸತತ ಕ್ಷಿಪಣಿ ಪರೀಕ್ಷೆಗಳನ್ನು ನಡೆಸುತ್ತಿದೆ. ಉತ್ತರ ಕೊರಿಯಾ ಗುರುವಾರ ಮತ್ತೆ ಎರಡು ಬ್ಯಾಲಿಸ್ಟಿಕ್ ಕ್ಷಿಪಣಿಗಳನ್ನು ಉಡಾಯಿಸಿರುವುದಾಗಿ ವರದಿಯಾಗಿದೆ. ಮಂಗಳವಾರ ಸಹ ಮಧ್ಯಂತರ ಶ್ರೇಣಿಯ ಬ್ಯಾಲಿಸ್ಟಿಕ್ ಕ್ಷಿಪಣಿಯನ್ನು ಜಪಾನ್ ಮೇಲೆ ಉಡಾಯಿಸಲಾಗಿತ್ತು. ಇದ ವರ್ತನೆಗೆ ಕೆಂಡಾಮಂಡಲವಾದ ಅಮೆರಿಕ ಕೊರಿಯನ್ ಪೆನಿನ್ಸುಲಾದಲ್ಲಿ ಉದ್ವಿಗ್ನತೆಯನ್ನು ಹೆಚ್ಚಿಸಲು ಉತ್ತರ ಕೊರಿಯಾ ಕ್ಷಿಪಣಿ ಪರೀಕ್ಷೆಗಳನ್ನು ನಡೆಸುತ್ತಿದೆ ಎಂದು ಆರೋಪಿಸಿತ್ತು.
ಕಳೆದ ಎರಡು ವಾರಗಳಲ್ಲಿ ಉತ್ತರ ಕೊರಿಯಾ ಒಟ್ಟು 6 ಕ್ಷಿಪಣಿಗಳನ್ನು ಉಡಾವಣೆ ಮಾಡಿದೆ. ಇದರ ಬೆನ್ನಲ್ಲೇ ಗುರುವಾರ ಮುಂಜಾನೆ ಪೂರ್ವ ಸಮುದ್ರದ ಕಡೆಗೆ ಅಲ್ಪ-ಶ್ರೇಣಿಯ ಬ್ಯಾಲಿಸ್ಟಿಕ್ ಕ್ಷಿಪಣಿಗಳನ್ನು ಉಡಾಯಿಸಿದೆ ಎಂದು ದಕ್ಷಿಣ ಕೊರಿಯಾದ ಸೇನೆ ಘೋಷಿಸಿದೆ. ಉತ್ತರ ಕೊರಿಯಾದ ಕ್ಷಿಪಣಿ ಉಡಾವಣೆಗಳನ್ನು ಜಪಾನ್ ಕೂಡ ದೃಢಪಡಿಸಿದೆ. ಮೊದಲ ಕ್ಷಿಪಣಿ 100 ಕಿಲೋಮೀಟರ್ ಎತ್ತರದಲ್ಲಿ 350 ಕಿಲೋಮೀಟರ್ ಕ್ರಮಿಸಿದೆ ಎಂದು ಜಪಾನ್ ರಕ್ಷಣಾ ಸಚಿವ ಯಾಸುಕಾಜು ಹಮಡಾ ಹೇಳಿದ್ದಾರೆ.
ಈ ಕ್ಷಿಪಣಿ ಉಡಾವಣೆಗಳಿಗೆ ಅಮೆರಿಕವನ್ನು ದೂಷಿಸಿರುವ ಚೀನಾ, ದಕ್ಷಿಣ ಕೊರಿಯಾದೊಂದಿಗೆ ಯುನೈಟೆಡ್ ಸ್ಟೇಟ್ಸ್ ಮಿಲಿಟರಿ ಕಾರ್ಯಾಚರಣೆಗಳಿಂದಾಗಿಯೇ ಈ ಕ್ಷಿಪಣಿ ಪರೀಕ್ಷೆಗಳನ್ನು ನಡೆಸಲಾಗುತ್ತಿದೆ ಎಂದು ಯುಎನ್‌ನಲ್ಲಿ ಚೀನಾದ ಉಪ ರಾಯಭಾರಿ ಗೆಂಗ್ ಶುವಾಂಗ್ ಆರೋಪಿಸಿದ್ದಾರೆ. ಈ ನಡುವೆ ವಿಶ್ವಸಂಸ್ಥೆಯಲ್ಲಿ ರಷ್ಯಾ ಮತ್ತು ಚೀನಾ ಉತ್ತರ ಕೊರಿಯಾವನ್ನು ಬೆಂಬಲಿಸುತ್ತಿವೆ ಯುನೈಟೆಡ್ ಸ್ಟೇಟ್ಸ್ ಆರೋಪಿಸಿದೆ.