ಹೊಸದಿಗಂತ ಡಿಜಿಟಲ್ ಡೆಸ್ಕ್:
ಉತ್ತರ ಕೊರಿಯಾದ ಪ್ರಚೋದನೆಗಳು ಉಲ್ಬಣಗೊಳ್ಳುತ್ತಿದ್ದಂತೆ, ಯುನೈಟೆಡ್ ಸ್ಟೇಟ್ಸ್ ಮತ್ತು ದಕ್ಷಿಣ ಕೊರಿಯಾ ಐದು ವರ್ಷಗಳಲ್ಲಿ ಅತಿದೊಡ್ಡ ಜಂಟಿ ಮಿಲಿಟರಿ ಅಭ್ಯಾಸಗಳನ್ನು ನಡೆಸಿದವು. ಇಂತಹ ಸೇನಾಭ್ಯಾಸ ಯುದ್ಧ ಘೋಷಣೆ ಅಂತ ಪರಿಗಣಿಸಲಾಗುವುದು ಎಂದು ಉತ್ತರ ಕೊರಿಯಾ ಎಚ್ಚರಿಕೆ ನೀಡಿದಾಗ, ಅಮೆರಿಕ ಮತ್ತು ದಕ್ಷಿಣ ಕೊರಿಯಾ ಕಾಮೆಂಟ್‌ಗಳಿಗೆ ಕಿಮ್ಮತ್ತು ಕೊಡದೆ ಕಸರತ್ತು ನಡೆಸಿದ್ದು ಗಮನಾರ್ಹ.
ನಿಷೇಧಿತ ಶಸ್ತ್ರಾಸ್ತ್ರ ಪರೀಕ್ಷೆ ನಡೆಸುತ್ತಿರುವ ಉತ್ತರ ಕೊರಿಯಾದಿಂದ ಬೆದರಿಕೆ ಹೆಚ್ಚಿರುವ ಹಿನ್ನೆಲೆಯಲ್ಲಿ ಅಮೆರಿಕ ಮತ್ತು ದಕ್ಷಿಣ ಕೊರಿಯಾ ಈ ಕಸರತ್ತು ನಡೆಸಿವೆ. ಉತ್ತರ ಕೊರಿಯಾ ಇಂದು ಜಲಾಂತರ್ಗಾಮಿ ನೌಕೆಯಿಂದ ಎರಡು ಕಾರ್ಯತಂತ್ರದ ಕ್ರೂಸ್ ಕ್ಷಿಪಣಿಗಳನ್ನು ಪರೀಕ್ಷಿಸಿದೆ. ಈ ಹಿಂದೆ ಹ್ವಾಸಾಂಗ್-15 ಖಂಡಾಂತರ ಕ್ಷಿಪಣಿ ಪರೀಕ್ಷೆ ನಡೆಸಿತ್ತು.
ಉತ್ತರ ಕೊರಿಯಾದ ಕ್ರಮಗಳಿಂದ ಎಚ್ಚೆತ್ತ ಅಮೆರಿಕ ಮತ್ತು ದಕ್ಷಿಣ ಕೊರಿಯಾ ಕೆಲ ದಿನಗಳ ಹಿಂದೆ ಜಂಟಿ ಸೇನಾ ಸಮರಾಭ್ಯಾಸ ನಡೆಸಿದ್ದವು. ದಕ್ಷಿಣ ಕೊರಿಯಾದ F-35A ಮತ್ತು F-15K ಫೈಟರ್ ಜೆಟ್‌ಗಳು, ಅಮೆರಿಕದ F-16 ಫೈಟರ್ ಜೆಟ್‌ಗಳು ಮತ್ತು B-1B ಬಾಂಬರ್‌ಗಳು ಇದರಲ್ಲಿ ಭಾಗವಹಿಸಿದ್ದವು. ಎರಡೂ ದೇಶಗಳ ಸಾಮರ್ಥ್ಯ ಮತ್ತು ಯುದ್ಧ ಸನ್ನದ್ಧತೆಯನ್ನು ತೋರಿಸಲು ಈ ವ್ಯಾಯಾಮಗಳು ನಡೆಯುತ್ತಿವೆ. ಉತ್ತರ ಕೊರಿಯಾದ ಪ್ರಚೋದನೆಗಳನ್ನು ನಿರ್ಲಕ್ಷಿಸುವುದಿಲ್ಲ ಎಂದು ದಕ್ಷಿಣ ಕೊರಿಯಾ ಈಗಾಗಲೇ ಘೋಷಿಸಿದೆ. ಉತ್ತರ ಕೊರಿಯಾ ಪರಮಾಣು ಅಸ್ತ್ರ ಪರೀಕ್ಷೆ ನಡೆಸಲಿದೆ ಎಂದು ಅಮೆರಿಕದ ಗುಪ್ತಚರ ಮೂಲಗಳು ಎಚ್ಚರಿಕೆ ನೀಡಿವೆ.