October 23, 2026
Friday, October 23, 2026
spot_img

ಈಶಾನ್ಯ ಶಿಕ್ಷಕರ ಕ್ಷೇತ್ರದ ಚುನಾವಣೆ| ಬೆಳಗ್ಗೆ 8ರಿಂದ ಮತದಾನ ಆರಂಭ : ಎನ್ ವಿ ಮತಗಟ್ಟೆಗೆ ಜಿಲ್ಲಾಧಿಕಾರಿ ಭೇಟಿ

ಹೊಸದಿಗಂತ ವರದಿ ಕಲಬುರಗಿ:

ಈಶಾನ್ಯ ಶಿಕ್ಷಕರ ಕ್ಷೇತ್ರದ ವಿಧಾನ ಪರಿಷತ್ ಚುನಾವಣೆಯ ಮತದಾನ ಶುಕ್ರವಾರ ಬೆಳಿಗ್ಗೆ 8 ಗಂಟೆಯಿಂದ ಆರಂಭವಾಗಿದೆ. ಕಲಬುರಗಿ ನಗರದ ನೂತನ ವಿದ್ಯಾಲಯ (ಎನ್‌ವಿ) ಶಾಲೆ ಮತದಾನ ಕೇಂದ್ರದ 62 ಮತ್ತು 63ನೇ ಮತಗಟ್ಟೆಗಳಲ್ಲಿ ಮತದಾನ ಪ್ರಕ್ರಿಯೆ ನಡೆಯುತ್ತಿದೆ.

ಚುನಾವಣೆಯ ಸಹಾಯಕ ಚುನಾವಣಾಧಿಕಾರಿ (ಎಆರ್‌ಒ) ಹಾಗೂ ಜಿಲ್ಲಾಧಿಕಾರಿ ಇಕ್ರಂ ಉಲ್ಲಾ ಶರೀಫ್ ಅವರು ಮತದಾನ ಕೇಂದ್ರಕ್ಕೆ ಭೇಟಿ ನೀಡಿ, ಮತಗಟ್ಟೆಗಳನ್ನು ಪರಿಶೀಲಿಸಿದರು. ಮತದಾನ ಪ್ರಕ್ರಿಯೆ ಹಾಗೂ ಕೇಂದ್ರದಲ್ಲಿನ ವ್ಯವಸ್ಥೆಗಳ ಕುರಿತು ಮಾಹಿತಿ ಪಡೆದರು.

ಇನ್ನೂ ಈಶಾನ್ಯ ಶಿಕ್ಷಕರ ಕ್ಷೇತ್ರದ ಎನ್‌ಡಿಎ ಅಭ್ಯರ್ಥಿ ಶಶಿಲ್ ನಮೋಶಿ ಅವರು ಬೆಳಿಗ್ಗೆ 8.40ಕ್ಕೆ ನೂತನ ವಿದ್ಯಾಲಯದ ಮತದಾನ ಕೇಂದ್ರಕ್ಕೆ ಭೇಟಿ ನೀಡಿ, ಮತದಾನ ಪ್ರಕ್ರಿಯೆಯನ್ನು ವೀಕ್ಷಿಸಿದರು.

ಚುನಾವಣಾ ವೀಕ್ಷಕ ಶಿವಕುಮಾರ ಕೆ.ಬಿ. ಪರಿಶೀಲನೆ

ಈಶಾನ್ಯ ಶಿಕ್ಷಕರ ಕ್ಷೇತ್ರದ ವಿಧಾನ ಪರಿಷತ್ ಚುನಾವಣೆಯ ಹಿನ್ನೆಲೆಯಲ್ಲಿ ಚುನಾವಣಾ ವೀಕ್ಷಕ ಶಿವಕುಮಾರ ಕೆ.ಬಿ. ಅವರು ಶುಕ್ರವಾರ ಕಲಬುರಗಿ ನಗರದ ನೆಹರುಗಂಜ್ ಪ್ರದೇಶದ ನಗರೇಶ್ವರ ಪ್ರೌಢಶಾಲೆಯ ಮತಗಟ್ಟೆ ಸಂಖ್ಯೆ 65ಕ್ಕೆ ಭೇಟಿ ನೀಡಿ ಮತದಾನ ಪ್ರಕ್ರಿಯೆಯನ್ನು ವೀಕ್ಷಿಸಿದರು. ನಗರದ ಸೂಪರ್ ಮಾರ್ಕೆಟ್ ಪ್ರದೇಶದ ಸರ್ಕಾರಿ ಬಾಲಕರ ಪದವಿ ಪೂರ್ವ ಕಾಲೇಜು (ಎಂ.ಪಿ.ಎಚ್.ಎಸ್.) ಮತಗಟ್ಟೆ ಸಂಖ್ಯೆ 64ರಲ್ಲಿ ಬೆಳಿಗ್ಗೆ 10.10 ಗಂಟೆಯ ವೇಳೆಗೆ 533 ಮತದಾರರ ಪೈಕಿ 87 ಜನರು ಮತ ಚಲಾಯಿಸಿದ್ದಾರೆ. ಇವರಲ್ಲಿ 38 ಪುರುಷರು ಹಾಗೂ 49 ಮಹಿಳೆಯರು ಸೇರಿದ್ದಾರೆ.

ಅದೇ ರೀತಿ, ನೆಹರುಗಂಜ್‌ನ ನಗರೇಶ್ವರ ಪ್ರೌಢಶಾಲೆಯ ಮತಗಟ್ಟೆ ಸಂಖ್ಯೆ 65ರಲ್ಲಿ ಬೆಳಿಗ್ಗೆ 10.30 ಗಂಟೆಯ ವೇಳೆಗೆ 819 ಮತದಾರರ ಪೈಕಿ 154 ಜನರು ಮತದಾನ ಮಾಡಿದ್ದಾರೆ. ಇವರಲ್ಲಿ 55 ಪುರುಷರು ಹಾಗೂ 99 ಮಹಿಳೆಯರು ಸೇರಿದ್ದಾರೆ.

Must Read