ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜ್ಯದಲ್ಲಿ ನಮ್ಮ ನಿರೀಕ್ಷೆಯಂತೆ ಫಲಿತಾಂಶ ಬರಲಿಲ್ಲ. ಈ ಬಾರಿ ರಾಜ್ಯದಲ್ಲಿ 9 ಕಡೆ ಗೆಲುವು ಸಿಕ್ಕಿದೆ. ಕಳೆದ ಬಾರಿ ಕಾಂಗ್ರೆಸ್ ಒಂದು ಸೀಟ್ ಮಾತ್ರ ಗೆದ್ದಿತ್ತು. ಈ ಬಾರಿ 2019ಕ್ಕಿಂತ ನಮ್ಮ ಓಟಿಂಗ್ ಶೇರ್ ಜಾಸ್ತಿ ಆಗಿದೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು.
ಬೆಂಗಳೂರು ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿ ವೋಟಿಂಗ್ ಶೇರ್ ಶೇ. 5 ರಷ್ಟು ಕಡಿಮೆ ಆಗಿದೆ, ಆದರೆ, ಓಟಿಂಗ್ ಶೇರ್ ಜಾಸ್ತಿ ಆಗಿದ್ದರೂ ರಾಜ್ಯದಲ್ಲಿ ಕಾಂಗ್ರೆಸ್‌ಗೆ ಹೆಚ್ಚು ಸೀಟ್ ಬಂದಿಲ್ಲ. ದೇಶದಲ್ಲಿ ಕಾಂಗ್ರೆಸ್‌ಗೆ ಶೇ. 3 ರಷ್ಟು ಓಟಿಂಗ್ ಜಾಸ್ತಿ ಆಗಿದೆ. ಬಿಜೆಪಿ 2019ರಲ್ಲಿ 303 ಗೆದ್ದಿತ್ತು. ಈಗ, 246 ಗೆದ್ದಿದೆ. ಬಿಜೆಪಿ ಅತಿ ದೊಡ್ಡ ಪಾರ್ಟಿ ಆಗಿ ಬಂದಿದೆ. ಆದರೆ, ಎಲ್ಲೂ ಮೋದಿ ಅಲೆ ಇರಲಿಲ್ಲ. ಮೋದಿಯವರ ಜನಪ್ರಿಯತೆ ಕಡಿಮೆ ಆಗಿದೆ ಎಂದು ಸಿಎಂ ಹೇಳಿದರು.
ಯಾರು ಸರ್ಕಾರ ರಚಿಸುತ್ತಾರೋ ಅಂತ ನನಗೆ ಗೊತ್ತಿಲ್ಲ ಆದರೆ ಬಿಜೆಪಿಗೆ ಮೆಜಾರಿಟಿ ಸೀಟ್ ಅಂತೂ ಬಂದಿಲ್ಲ. ಮೋದಿ ಸೋಲುತ್ತೇವೆ ಅಂತ ಗೊತ್ತಾಗಿ ಧರ್ಮದ ಆಧಾರದ ಮೇಲೆ ಮತ ಕೇಳಲು ಶುರು ಮಾಡಿದರು. ಕೋಮುವಾದದ ಮೇಲೆ ಮತ ಕೇಳಿದ್ದು ವರ್ಕ್‌ಔಟ್ ಆಗಿಲ್ಲ, ಎನ್‌ಡಿಎಗೆ 60 ಸ್ಥಾನ ಕಡಿಮೆ ಆಗಿವೆ ಎಂದರು.
ನರೇಂದ್ರ ಮೋದಿ ಪ್ರಧಾನಿ ಆಗಲು ನೈತಿಕ ಹಕ್ಕಿಲ್ಲ. ಇ.ಡಿ. ದುರ್ಬಳಕೆ ಮಾಡಿಕೊಂಡು ದೆಹಲಿ ಮುಖ್ಯಮಂತ್ರಿಯನ್ನು ಜೈಲಿಗೆ ಕಳುಹಿಸಲಾಯಿತು. ಅಯೋಧ್ಯೆಯಲ್ಲಿ ಬಿಜೆಪಿ ಸೋತಿದೆ, ಅಲ್ಲಿ ಎಸ್‌ಪಿ ಅಭ್ಯರ್ಥಿ ಗೆಲುವು ಸಾಧಿಸಿದ್ದಾರೆ. ಒಟ್ಟಾರೆ ಬಿಜೆಪಿಗೆ ದೊಡ್ಡ ಹಿನ್ನಡೆ ಆಗಿದೆ ಎಂದು ಟೀಕಿಸಿದರು. .
ರಾಹುಲ್ ಗಾಂಧಿ ಅವರ ನಾಯಕತ್ವಕ್ಕೆ ದೇಶದಲ್ಲಿ ಬೆಂಬಲ ಸಿಕ್ಕಿದೆ. ರಾಹುಲ್ ಗಾಂಧಿಯವರು ಮಾಡಿದ ಯಾತ್ರೆಯಿಂದ ಇಂಡಿ ಮೈತ್ರಿ ಕೂಟಕ್ಕೆ ಬೆಂಬಲ ಸಿಕ್ಕಿದೆ. ರಾಹುಲ್ ಗಾಂಧಿಯವರು ಎರಡೂ ಕಡೆ ಗೆಲುವು ಸಾಧಿಸಿದ್ದಾರೆ, ಹೀಗಾಗಿ ಅವರಿಗೆ ನಾನು ವೈಯಕ್ತಿಕವಾಗಿ ಅಭಿನಂದನೆ ತಿಳಿಸುವೆ. ಪ್ರಜಾಪ್ರಭುತ್ವ ಮತ್ತು ಸಂವಿಧಾನ ಉಳಿಸಿಕೊಳ್ಳಲು ಜನರು ಮತದಾನ ಮಾಡಿದ್ದಾರೆ. ನಮಗೆ ಗೆಲುವು ಆಗಿಲ್ಲ ನಿಜ, ಆದರೆ ಶೇಕಡಾವಾರು ಮತ ಪ್ರಮಾಣ ಜಾಸ್ತಿ ಆಗಿದೆ ಎಂದು ತಿಳಿಸಿದರು.
ಹಳೆ ಮೈಸೂರು ಹಿನ್ನಡೆಗೆ ಕಾರಣ ತಿಳಿಸಿದ ಅವರು, ಎರಡು ಪಾರ್ಟಿ ಒಂದಾಗಿ ಚುನಾವಣೆ ಮಾಡಿದರು. ಹೀಗಾಗಿ ನಮ್ಮ ನಿರೀಕ್ಷೆಯಂತೆ ಗೆಲುವು ಸಾಧಿಸಿಲ್ಲ. ನಾವು ಗೆದ್ದೇ ಬಿಟ್ಟಿದ್ದೀವಿ ಅಂತ ಹೇಳಿಲ್ಲ. ನಾವು ಗೆದ್ದಿಲ್ಲ ಎಂದು ಒಪ್ಪಿಕೊಂಡಿದ್ದೇವೆ. ಪ್ರಧಾನಿಯಾಗಿದ್ದವರು ಯಾರು ಯಾರ ಹೆಸರಲ್ಲಿ ಓಟು ಕೇಳಿದರು ಎಂದು ಪ್ರಶ್ನಿಸಿದರು.
ಗ್ಯಾರಂಟಿ ವರ್ಕೌಟ್ ಆಗಿದ್ಯಾ ಎಂಬ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಗ್ಯಾರಂಟಿ ವರ್ಕ್ ಆಗಿದೆಯೋ, ಇಲ್ಲವೋ ಎನ್ನುವುದನ್ನು ವಿಶ್ಲೇಷಣೆ ಮಾಡಬೇಕು. ಮೇಲ್ನೋಟಕ್ಕೆ ವರ್ಕೌಟ್ ಆಗಿದೆ ಎಂಬುವುದು ತಿಳಿಯುತ್ತದೆ ಎಂದು ಹೇಳಿದರು.
ಇಡೀ ದೇಶದಲ್ಲಿ ರಾಜ್ಯದಲ್ಲಿ 2019ಕ್ಕಿಂತ ಬಿಜೆಪಿ ಪ್ರಭಾವ ವಿಪರೀತ ಕುಸಿದಿದೆ ಎಂದು ಸಿಎಂ ವಿವರಿಸಿದರು. ಕೇಂದ್ರದಲ್ಲಿ ಯಾರು ಸರ್ಕಾರ ರಚಿಸುತ್ತಾರೆ ಎನ್ನುವುದು ಅನಿಶ್ಚಿತವಾಗಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಸಚಿವ ಎಂ.ಸಿ. ಸುಧಾಕರ್, ಎಂಎಲ್‌ಸಿ ಸಲೀಂ ಅಹ್ಮದ್, ಗೋವಿಂದರಾಜು ಉಪಸ್ಥಿತರಿದ್ದರು