ಹೊಸದಿಗಂತ ಡಿಜಿಟಲ್ ಡೆಸ್ಕ್:
ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ಮುಡಾ ಹಗರಣಕ್ಕೆ ಸಂಬಂಧಿಸಿ ಸಿಎಂ ಸಿದ್ದರಾಮಯ್ಯ ವಿರುದ್ಧ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ವಾಗ್ದಾಳಿ ನಡೆಸಿದ್ದಾರೆ. ಏನೂ ಮಾಡಿಲ್ಲವೆಂದಾದರೆ ಡಿಸಿ ವರ್ಗಾವಣೆ ಮಾಡಿದ್ದು ಏಕೆ ಎಂದು ಅವರು ಪ್ರಶ್ನಿಸಿದ್ದಾರೆ.
ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, ಮುಡಾ ಹಗರಣದಲ್ಲಿ ಬಹಳ ದೊಡ್ಡ ಪ್ರಮಾಣದ ಭ್ರಷ್ಟಾಚಾರ ಆಗಿದೆ. ಮೇಲ್ನೋಟಕ್ಕೆ ಇದು ಸ್ಪಷ್ಟವಾಗಿದೆ. 2017 ರಲ್ಲಿ ಈ ನಿರ್ಣಯಗಳಾಗಿವೆ. ಸಿದ್ದರಾಮಯ್ಯ ಗಮನದಲ್ಲಿ ಇದ್ದೇ ಆಗಿರುವ ಬಹುದೊಡ್ಡ ಹಗರಣ ಎಂದು ಆರೋಪಿಸಿದ್ದಾರೆ.
ಈ ಹಗರಣದಲ್ಲಿ 4 ಸಾವಿರ ಕೋಟಿ ಅಕ್ರಮ ಎಸಗಿರುವ ಬಗ್ಗೆ ಆರೋಪಗಳಿವೆ. ಬಿಜೆಪಿ ಕಾಲದಲ್ಲಿ ಕೊಟ್ಟಿದ್ದು ಎನ್ನುತ್ತಾರೆ. ಈ ಎಲ್ಲ ಅವ್ಯವಹಾರ ಆಗಿದ್ದು 2013 ರಿಂದ 2018 ರವರೆಗೆ. ನೀವ ಏನೂ ಮಾಡಿಲ್ಲ ಅಂದ್ರೆ ಡಿಸಿಯನ್ನು ಯಾಕೆ ವರ್ಗಾವಣೆ ಮಾಡಿದ್ದೀರಿ? ಅವ್ಯವಹಾರ ನಡೆಯುತ್ತಿದೆ ಎಂದು ಡಿಸಿ ಪತ್ರ ಬರೆದಿದ್ದರು. ಕಳೆದ ಒಂದು ವರ್ಷದಲ್ಲಿ 15 ಕ್ಕೂ ಹೆಚ್ಚು ಪತ್ರ ಬರೆದಿದ್ದಾರೆ. ಅದರಲ್ಲಿ ಸಿದ್ದರಾಮಯ್ಯ ಹಾಗೂ ಮಗ ಜಮೀನು ವಶಪಡಿಸಿಕೊಂಡಿದ್ದಾರೆ ಎಂದಿದ್ದಾರೆ ಎಂದು ಜೋಶಿ ಹೇಳಿದರು.