ಅಭಿವೃದ್ಧಿಹೀನ ರಾಜ್ಯ ಸರ್ಕಾರವನ್ನು ಬೀಳಿಸೋದ್ರಲ್ಲಿ ಯಾವುದೇ ತಪ್ಪಿಲ್ಲ: ಕೆ.ಎಸ್.ಈಶ್ವರಪ್ಪ

ಹೊಸದಿಗಂತ ವರದಿ ಶಿವಮೊಗ್ಗ:

ಯಾವುದೇ ಅಭಿವೃದ್ಧಿ ಯೋಜನೆಗಳಿಗೆ ರಾಜ್ಯ ಸರ್ಕಾರದ ಬಳಿ ಹಣ ಇಲ್ಲ. ದುಡ್ಡು ಕೊಡುತ್ತೇವೆ ಕರೆಂಟ್ ಕೊಡಿ ಎಂದರೂ ಸರ್ಕಾರದ ಬಳಿ ಕರೆಂಟ್ ಇಲ್ಲ. ಹೀಗಾಗಿ ಈ ಅಭಿವೃದ್ಧಿಹೀನ ರಾಜ್ಯ ಸರ್ಕಾರವನ್ನು ಬೀಳಿಸೋದ್ರಲ್ಲಿ ಯಾವುದೇ ತಪ್ಪಿಲ್ಲ ಎಂದು ಮಾಜಿ ಡಿಸಿಎಂ ಕೆ.ಎಸ್‌.ಈಶ್ವರಪ್ಪ ಕಿಡಿಕಾರಿದ್ದಾರೆ.

ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಅಭಿವೃದ್ಧಿಹೀನ ಸರ್ಕಾರವನ್ನು ನೋಡಿಕೊಂಡು ಸುಮ್ಮನಿರಬೇಕೆ? ಜನರಲ್ಲಿ ಈ ಬಗ್ಗೆ ಅರಿವು ಮೂಡಿಸಿ ಸರ್ಕಾರ ಬೀಳಿಸಿದರೆ ಯಾವುದೇ ತಪ್ಪಿಲ್ಲ ಎಂದರು.

ಸರ್ಕಾರ ಬೀಳಿಸುವ ಯತ್ನ ಬೆಳಗಾವಿಯಿಂದಲೇ ಆರಂಭವಾಗಿದೆ. ಡಿಸಿಎಂ ಡಿ.ಕೆ. ಶಿವಕುಮಾರ್ ಬೆಳಗಾವಿಗೆ ಹೋದರೆ ಯಾವ ಶಾಸಕರು, ಸಚಿವರು ಅವರ ಸಭೆಗೆ ಹೋಗದಿರುವುದೇ ಇದಕ್ಕೆ ನಿದರ್ಶನವಾಗಿದೆ ಎಂದು ಹೇಳಿದರು.

ಡಿ.ಕೆ. ಶಿವಕುಮಾರ್ ಎಷ್ಟರ ಮಟ್ಟಿಗೆ ಅಕ್ರಮ ಆಸ್ತಿ ಸಂಪಾದಿಸಿದ್ದಾರೆಂಬುದನ್ನು ಪ್ರತ್ಯೇಕವಾಗಿ ಹೇಳಬೇಕಿಲ್ಲ. ಈಗ ಅವರು ಇರುವುದು ಜಾಮೀನಿನ ಮೇಲೆ. ಅವರು ತಿಹಾರ್ ಜೈಲಿನಲ್ಲಿ ಇರಲಿಲ್ಲವೇ ? ಅಕ್ರಮ ಆಸ್ತಿ, ಹಣವನ್ನು ಪತ್ತೆ ಮಾಡಿರುವುದು ಸುಳ್ಳೇ ? ಇದನ್ನು ಹೇಳಿದರೆ ಅವರಿಗೆ ಸಿಟ್ಟು ಬರುತ್ತದೆ. ಅದಕ್ಕೆ ಉತ್ತರ ಕೊಡುವಾಗಲೂ ಗೂಂಡಾಗಿರಿಯಲ್ಲಿಯೇ ಉತ್ತರ ನೀಡುತ್ತಾರೆ ಎಂದು ದೂರಿದರು.

ತಲೆಕೆಟ್ಟಿರುವ ಆಯನೂರು ಮಂಜುನಾಥ ಟೀಕೆಗೆ ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ. ಅವರು ಎಷ್ಟು ಪಕ್ಷಕ್ಕೆ ಹೋಗಿ ರಾಜಕೀಯ ಮಾಡಿದ್ದಾರೆ. ಯಾವ ಪಕ್ಷ ಅವರಿಗೆ ಅಧಿಕಾರ ಕೊಟ್ಟಿದೆ ಎಂಬುದು ಎಲ್ಲರಿಗೂ ಗೊತ್ತಿದೆ. ನನ್ನ ಬಗ್ಗೆ ಟೀಕೆ ಮಾಡಲು ಅವರಿಗೆ ನೈತಿಕತೆಯೇ ಇಲ್ಲ. ಇನ್ನು ಪಕ್ಷದಿಂದ ನೋಟಿಸ್ ಪಡೆದಿರುವ ರೇಣುಕಾಚಾರ್ಯ ಹೇಳಿಕೆಯನ್ನು ಗಂಭೀರವಾಗಿ ಪರಿಗಣಿಸುವುದೇ ಇಲ್ಲ‌ ಎಂದು ನುಡಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!