ಕಾಡುಪ್ರಾಣಿಗಳ ಹಾವಳಿಗೆ ಬೇಸತ್ತ ರೈತರು, ಬೆಳೆ ಕಾಪಾಡಿಕೊಳ್ಳಲು ಪರದಾಟ

– ಗಣೇಶ ಜೋಶಿ ಸಂಕೊಳ್ಳಿ

ಕುಮಟಾ ತಾಲೂಕಿನ ಕೂಜಳ್ಳಿ, ವಾಲ್ಗಳ್ಳಿ, ಕವಲೋಡಿ, ಸಂತೆಗುಳಿ, ಮಿರ್ಜಾನ್, ದೀವಗಿ, ಹೊಳೆಗದ್ದೆ ಮುಂತಾದ ಊರುಗಳಲ್ಲಿ ಕಾಡುಪ್ರಾಣಿಗಳ ಕಾಟಕ್ಕೆ ರೈತರು ಹೈರಾಣಾಗಿದ್ದಾರೆ.

ಮಂಗ ಬಾಳೆಕಾಯಿ, ಹಣ್ಣಡಿಕೆಗಳೊಂದಿಗೆ ಅಡಿಕೆಯ ಎಳೆ ಮಿಳ್ಳೆಗಳನ್ನೇ ತಿಂದು ಹಾಳು ಮಾಡುತ್ತಿವೆ. ಹಂದಿಗಳು ಭತ್ತದ ಗದ್ದೆಗಳಿಂದ ತೆಂಗಿನ ತೋಟಗಳಿಗೆ ನುಗ್ಗಿ, ಮರದಿಂದ ಕೆಳಗೆ ಉದುರಿದ ತೆಂಗಿನ ಕಾಯಿಗಳನ್ನು ಮನುಷ್ಯರಿಗಿಂತ ನಾಜೂಕಾಗಿ ಸುಲಿದು ತಿರುಳು ತಿನ್ನುವ ವಿಧಾನವನ್ನು ರೂಢಿಸಿಕೊಂಡಿವೆ.

ತಾಲೂಕಿನಲ್ಲಿ ಪ್ರಮುಖ ಬೆಳೆಗಳ ಜೊತೆಗೆ ಕಾಳುಮೆಣಸು, ಜಾಯಿಕಾಯಿ, ಬೇರು ಹಲಸು, ಅರಿಷಿಣ ಹೀಗೆ ಬಹಳಷ್ಟು ಬಗೆಯ ಉಪಬೆಳೆಗಳಿವೆ. ತೆಂಗಿನ ತೋಟದಲ್ಲಿ ಮಾವು, ಹಲಸು, ಬೆಣ್ಣೆಹಣ್ಣು ಮೊದಲಾದ ಉಪ ಉತ್ಪನ್ನದ ಗಿಡ ಮರಗಳಿವೆ. ಉಪ ಬೆಳೆಗಳನ್ನೂ ಬಿಡದೆ ತಿಂದು ತೇಗುವ ಮಂಗಗಳ ಕಾಟ. ಹಂದಿ ತೆಂಗಿನ ಕಾಯಿ ಸುಲಿದು ತಿನ್ನುವುದಲ್ಲದೆ, ಎಳೆಯ ಅರಿಷಿಣದ ಎಲೆಗಳನ್ನೂ ಹರಿದು ತಿನ್ನುತ್ತವೆ.

ತಾಲೂಕಿನಲ್ಲಿ ಅಡಿಕೆ 2538.83 ಹೆಕ್ಟೇರ್. ಬೆಳ್ಳುಳಿ 0.07 ಹೆಕ್ಟೇರ್, ವೀಳ್ಯದೆಲೆ 1.54 ಹೆಕ್ಟೇರ್, ಪಡವಲಕಾಯಿ 4.09 ಹೆಕ್ಟೇರ್, ಮೆಣಸಿನಕಾಯಿ 0.28 ಹೆಕ್ಟೇರ್, ಕೊಕೋ 0.75 ಹೆಕ್ಟೇರ್, ಗೋಡಂಬಿ 456.2 ಹೆಕ್ಟೇರ್, ತೆಂಗು 2592.22 ಹೆಕ್ಟೇರ್, ನುಗ್ಗೆ ಕಾಯಿ 0.26 ಹೆಕ್ಟೇರ್, ನೇರಳೆ 3.9 ಹೆಕ್ಟೇರ್, ಜಾಯಿಕಾಯಿ 56.09 ಹೆಕ್ಟೇರ್, ಶುಂಠಿ 2.02 ಹೆಕ್ಟೇರ್, ಬಾಳೆ 723.72 ಹೆಕ್ಟೇರ್, ಕಾಳುಮೆಣಸು 204.94 ಹೆಕ್ಟೇರ್, ಮಾವು 70.42 ಹೆಕ್ಟೇರ್, ಮುರುಗಲು 0.55 ಹೆಕ್ಟೇರ್ ಪ್ರದೇಶದಲ್ಲಿ ಬೆಳೆಯುತ್ತದೆ. ಆದರೆ, ಈ ಬೆಳೆಗಳನ್ನು ಕಾಪಾಡಿಕೊಳ್ಳುವುದೇ ರೈತರಿಗೆ ದೊಡ್ಡ ಸಮಸ್ಯೆ ಎನಿಸಿದೆ.

ಎರಡು ವರ್ಷಗಳ ಹಿಂದೆ ತೋಟದ ಸುತ್ತ ಬಲೆ ಕಟ್ಟಿದರೆ ಮಂಗಗಳು ಬರುತ್ತಿರಲಿಲ್ಲ. ಈಗ ಮಂಗಗಳು ಬಲೆಯನ್ನೇ ಹರಿದು ಒಳಗೆ ಬರುತ್ತವೆ ಎಂಬುದು ರೈತ ಸಮುದಾಯದ ಗೋಳು.

ರೈತರು ಲಕ್ಷಾಂತರ ರೂ. ಬಂಡವಾಳ ಹಾಕಿ ಬೆಳೆದ ಬೆಳೆಯನ್ನು ಕಾಡು ಪ್ರಾಣಿಗಳು ನಾಶ ಮಾಡಿದರೆ, ಅರಣ್ಯ ಇಲಾಖೆ ಕೇವಲ 5 ರಿಂದ 10 ಸಾವಿರ ರೂ. ಪರಿಹಾರ ನೀಡುತ್ತಾರೆ. ಇದನ್ನು ಪಡೆದುಕೊಳ್ಳಲು 2 ರಿಂದ 3 ತಿಂಗಳು ಅರಣ್ಯ ಇಲಾಖೆಗೆ ಅಲೆದಾಡಬೇಕು. ಆದ್ದರಿಂದ ಎಷ್ಟೋ ಮಂದಿ ರೈತರು ಸಾಲ ಮಾಡಿ ಬೆಳೆದ ಬೆಳೆಗಳನ್ನು ಕಾಡು ಪ್ರಾಣಿಗಳು ನಾಶ ಮಾಡಿರುವುದರಿಂದ ಸಾಲ ತೀರಿಸುವ ಸಲುವಾಗಿ ಊರು ಬಿಟ್ಟು ಪಟ್ಟಣ ಪ್ರದೇಶಗಳಲ್ಲಿ ಕೂಲಿ ಮಾಡುತ್ತಿದ್ದಾರೆ.

ಕರ್ನಾಟಕ ಸರ್ಕಾರದ ಆದೇಶದ ಪ್ರಕಾರ ಸೂಕ್ತ ಪರಿಹಾರ ನೀಡುತ್ತೇವೆ. 10-12 ಲಕ್ಷ ರೂ. ಪ್ರತಿ ವರ್ಷ ಪರಿಹಾರ ಬರುತ್ತಿದ್ದು, ಸೂಕ್ತ ದಾಖಲೆ ಒದಗಿಸಿದವರಿಗೆ ಸುತ್ತೋಲೆ ಪ್ರಕಾರ ಪರಿಹಾರದ ಮೊತ್ತ ನಿಗದಿಸಿ ಕೊಡುತ್ತಿದ್ದೇವೆ ಎಂದು ಅರಣ್ಯ ಇಲಾಖೆ ಅಧಿಕಾರಿ ರವಿಶಂಕರ ತಿಳಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!