September 30, 2026
Wednesday, September 30, 2026
spot_img

ಎಂಆರ್‌ಪಿಎಲ್‌ ಸ್ಫೋಟ | ಸಮರೋಪಾದಿ ರಕ್ಷಣಾ ಕ್ರಮ, ಆತಂಕಪಡದಂತೆ ಸಂಸದ ಚೌಟ ಮನವಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಮಂಗಳೂರು ನಗರದ ಹೊರವಲಯದ ಸುರತ್ಕಲ್‌ ಪರಿಸರದಲ್ಲಿರುವ ಎಂಆರ್‌ಪಿಎಲ್‌ ಸಮೀಪ ಸಂಭವಿಸಿದ ಭಾರೀ ಪ್ರಮಾಣದ ಸ್ಫೋಟದ ಕುರಿತಾಗಿ ದಕ್ಷಿಣ ಕನ್ನಡ‌ ಸಂಸದ ಕ್ಯಾ. ಬ್ರಿಜೇಶ್ ಚೌಟ ಪ್ರತಿಕ್ರಿಯೆ ನೀಡಿದ್ದು, ಘಟನೆಗೆ ಸಂಬಂಧಿಸಿದಂತೆ ಎಂ.ಆರ್.ಪಿ‌ಎಲ್ ಅಧಿಕಾರಿಗಳು, ಪೊಲೀಸ್ ಆಯುಕ್ತರು, ಬಜ್ಪೆ ಪಟ್ಟಣ ಪಂಚಾಯತ್ ಹಾಗೂ ಅಗ್ನಿಶಾಮಕದಳದ ಜೊತೆ ನಿರಂತರ ಸಂಪರ್ಕದಲ್ಲಿದ್ದೇವೆ ಎಂದು ಹೇಳಿದ್ದಾರೆ.

ಸ್ಫೋಟದ ನಂತರದ ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಅವಲೋಕಿಸಲಾಗಿದ್ದು, ಪರಿಸ್ಥಿತಿಯನ್ನು ಸಂಪೂರ್ಣವಾಗಿ ನಿಯಂತ್ರಣಕ್ಕೆ ತರುವ ಹಾಗೂ ಸುರಕ್ಷತೆ ಕಾರ್ಯಾಚರಣೆ ಭರದಿಂದ ಸಾಗಿಸಲು ಸೂಚಿಸಲಾಗಿದೆ. ಯಾವುದೇ ರೀತಿಯ ತುರ್ತು ಪರಿಸ್ಥಿತಿಯನ್ನು ಎದುರಿಸಲು ಹಾಗೂ ಮುಂಜಾಗ್ರತಾ ಕ್ರಮವಾಗಿ ಸ್ಥಳೀಯ ಆಸ್ಪತ್ರೆಗಳಿಗೆ ಅಗತ್ಯ ಸಿದ್ಧತೆಗಳನ್ನು ಮಾಡಿಕೊಂಡಿದ್ದೇವೆ. ಸಾರ್ವಜನಿಕರು ಆತಂಕಕ್ಕೆ ಒಳಗಾಗಬಾರದು ಎಂದಿದ್ದಾರೆ.

ಇಂದು ಬೆಳ್ತಂಗಡಿಯಲ್ಲಿ ಪೂರ್ವನಿಗದಿಯಾಗಿದ್ದ ನನ್ನ ಎಲ್ಲಾ ಸಾರ್ವಜನಿಕ ಕಾರ್ಯಕ್ರಮಗಳನ್ನು ರದ್ದುಗೊಳಿಸಿದ್ದು, ಪರಿಸ್ಥಿತಿಯನ್ನು ಖುದ್ದು ಪರಿಶೀಲಿಸಲು ಘಟನಾ ಸ್ಥಳಕ್ಕೆ ತೆರಳುತ್ತಿದ್ದೇನೆ. ಪ್ರತಿಯೊಬ್ಬರೂ ಶಾಂತಿಯುತವಾಗಿರಲು, ಯಾವುದೇ ರೀತಿಯ ವದಂತಿಗಳು ಅಥವಾ ತಪ್ಪು ಮಾಹಿತಿಗಳನ್ನು ಹರಡದಂತೆ ಮತ್ತು ಆಡಳಿತ ಮಂಡಳಿಯೊಂದಿಗೆ ಸಂಪೂರ್ಣವಾಗಿ ಸಾರ್ವಜನಿಕರು ಸಹಕರಿಸುವಂತೆ ವಿನಂತಿಸುತ್ತೇನೆ ಎಂದಿದ್ದಾರೆ.

Must Read