June 5, 2026
Friday, June 5, 2026
spot_img

ಗೊತ್ತುವಳಿ ಗದ್ದಲ: ಪಾಲಿಕೆ ವಿರುದ್ಧ ಕಿತ್ತೂರು ಕರ್ನಾಟಕ ಸೇನೆಯ ಆಕ್ರೋಶ

ಹೊಸದಿಗಂತ ವರದಿ ಬೆಳಗಾವಿ:

ಕರ್ನಾಟಕ ಪರ ಗೊತ್ತುವಳಿಯನ್ನು ಅಂಗೀಕರಿಸಲು ನಿರಾಕರಿಸುತ್ತಿರುವ ಬೆಳಗಾವಿ ಮಹಾನಗರ ಪಾಲಿಕೆಯ ನಿಲುವು ಕನ್ನಡ ನಾಡು, ನುಡಿ ಹಾಗೂ ಗಡಿ ಹಿತಾಸಕ್ತಿಗೆ ವಿರುದ್ಧವಾಗಿದೆ ಎಂದು ಆರೋಪಿಸಿ ಕಿತ್ತೂರು ಕರ್ನಾಟಕ ಸೇನೆ ನೇತೃತ್ವದಲ್ಲಿ ಶುಕ್ರವಾರ ಪ್ರಾದೇಶಿಕ ಆಯುಕ್ತರ ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು.

ಕರ್ನಾಟಕ ಪರ ಗೊತ್ತುವಳಿಗೆ ಆಗ್ರಹ

“ಬೆಳಗಾವಿ ಕರ್ನಾಟಕದ ಅವಿಭಾಜ್ಯ ಅಂಗ” ಹಾಗೂ “ಗಡಿವಿವಾದಕ್ಕೆ ಮಹಾಜನ ಆಯೋಗದ ವರದಿಯೇ ಅಂತಿಮ” ಎಂಬ ಕರ್ನಾಟಕ ಪರ ಗೊತ್ತುವಳಿಯನ್ನು ಮಹಾನಗರ ಪಾಲಿಕೆಯಲ್ಲಿ ಅಂಗೀಕರಿಸಬೇಕೆಂದು ಒತ್ತಾಯಿಸಿ 20ಕ್ಕೂ ಹೆಚ್ಚು ಕನ್ನಡಪರ ಸಂಘಟನೆಗಳು ಕಳೆದ ಮಾರ್ಚ್ 26ರಿಂದ ನಿರಂತರ ಹೋರಾಟ ನಡೆಸುತ್ತಿವೆ. ಆದರೆ ಇದುವರೆಗೆ ಯಾವುದೇ ಸ್ಪಂದನೆ ಸಿಕ್ಕಿಲ್ಲ ಎಂದು ಪ್ರತಿಭಟನಾಕಾರರು ಆರೋಪಿಸಿದರು.

ಮಹಾರಾಷ್ಟ್ರ ಪರ ಗೊತ್ತುವಳಿ ಉಲ್ಲೇಖ

2005ರ ಅಕ್ಟೋಬರ್ 27ರಂದು ಮಹಾನಗರ ಪಾಲಿಕೆಯಲ್ಲಿ ಅಂಗೀಕರಿಸಲಾದ ಮಹಾರಾಷ್ಟ್ರ ಪರ ಗೊತ್ತುವಳಿಯನ್ನು ಮಹಾರಾಷ್ಟ್ರ ಸರ್ಕಾರವು ಸುಪ್ರೀಂ ಕೋರ್ಟ್‌ನಲ್ಲಿ ಬಾಕಿ ಇರುವ ಗಡಿ ವಿವಾದ ಪ್ರಕರಣದಲ್ಲಿ ಪೂರಕ ದಾಖಲೆಯಾಗಿ ಬಳಸುತ್ತಿದೆ ಎಂದು ಪ್ರತಿಭಟನಾಕಾರರು ತಿಳಿಸಿದರು.

ಇದನ್ನೂ ಓದಿ:

ಬಿಜೆಪಿ ನಾಯಕತ್ವದ ವಿರುದ್ಧ ಅಸಮಾಧಾನ

ಪಾಲಿಕೆಯಲ್ಲಿ ಬಹುಮತ ಹೊಂದಿರುವ ಬಿಜೆಪಿ ಸದಸ್ಯರು ಕರ್ನಾಟಕ ಪರ ಗೊತ್ತುವಳಿ ಅಂಗೀಕರಿಸಲು ಮುಂದಾಗದಿರುವುದು ಬೇಸರದ ಸಂಗತಿ ಎಂದು ಕನ್ನಡಪರ ಸಂಘಟನೆಗಳ ಮುಖಂಡರು ಆಕ್ರೋಶ ವ್ಯಕ್ತಪಡಿಸಿದರು.

ಸರ್ಕಾರದ ಮಧ್ಯಪ್ರವೇಶಕ್ಕೆ ಮನವಿ

ಕನ್ನಡ ನಾಡು, ನುಡಿ ಮತ್ತು ರಾಜ್ಯದ ಹಿತಾಸಕ್ತಿಗೆ ಧಕ್ಕೆ ಉಂಟಾಗದಂತೆ ರಾಜ್ಯ ಸರ್ಕಾರ ತಕ್ಷಣ ಮಧ್ಯಪ್ರವೇಶಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಪ್ರಾದೇಶಿಕ ಆಯುಕ್ತರ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.

ಸಂಘಟನೆಗಳ ಭಾಗಿ

ಪ್ರತಿಭಟನೆಯಲ್ಲಿ ಕಿತ್ತೂರು ಕರ್ನಾಟಕ ಸೇನೆಯ ಕಾರ್ಯಕರ್ತರು, ವಿವಿಧ ಕನ್ನಡಪರ ಸಂಘಟನೆಗಳ ಪದಾಧಿಕಾರಿಗಳು, ಮುಖಂಡರು ಹಾಗೂ ಸಾರ್ವಜನಿಕರು ಭಾಗವಹಿಸಿದ್ದರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !