ಹೊಸದಿಗಂತ ಡಿಜಿಟಲ್ ಡೆಸ್ಕ್:
ತಮಿಳುನಾಡಿಗೆ ಕಾವೇರಿ ನೀರು ಹರಿಸಲು ಕಾವೇರಿ ನೀರು ನಿರ್ವಹಣಾ ಸಮಿತಿ ನೀಡಿರುವ ಆದೇಶವನ್ನು ಖಂಡಿಸಿ ನಾಳೆ ಕರ್ನಾಟಕ ಬಂದ್‌ಗೆ ಕರೆ ನೀಡಲಾಗಿದೆ. ಈ ಬಂದ್‌ಗೆ ನಾವು ಸಾಥ್ ನೀಡೋದಿಲ್ಲ ಎಂದು ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಪ್ರವೀಣ್ ಶೆಟ್ಟಿ ತಿಳಿಸಿದ್ದಾರೆ.
ಈಗಿನ ಪರಿಸ್ಥಿತಿಯಲ್ಲಿ ಬಂದ್ ಅವಶ್ಯಕತೆ ಇಲ್ಲ. ರಾಜ್ಯದಲ್ಲಿ ಮಳೆಯಾಗುತ್ತಿರುವ ಕಾರಣ ನೀರಿನ ಕೊರತೆ ಏರ್ಪಡುವ ಸಾಧ್ಯತೆ ಕಡಿಮೆ. ಹೀಗಾಗಿ ಬಂದ್‌ಗೆ ನಮ್ಮ ಬೆಂಬಲ ಇರೋದಿಲ್ಲ. ಆದರೆ ಮಹದಾಯಿ ಕಳಸಾ ಬಂಡೂರಿ ಯೋಜನೆ ಜಾರಿಗೆ ಹೋರಾಟ ಮುಂದುವರಿಯಲಿದೆ ಎಂದಿದ್ದಾರೆ. ಬಂದ್‌ಗೆ ಕರೆ ಕೊಟ್ಟು ತುಂಬಾ ದಿನಗಳಾಗಿವೆ. ಆಗ ಒಂದು ಹನಿ ಮಳೆ ಬಿದ್ದಿರಲಿಲ್ಲ. ಜಲಾಶಯಗಳು ತುಂಬಿರಲಿಲ್ಲ. ಆದರೆ ಇದೀಗ ಪರಿಸ್ಥಿತಿ ಬದಲಾಗಿದೆ. ಹೀಗಾಗಿ ಬಂದ್ ಅನಾವಶ್ಯಕ ಎಂದಿದ್ದಾರೆ.
ಕಾವೇರಿ ನೀರು ನಿರ್ವಹಣಾ ಸಮಿತಿಯು ಹದಿನೈದು ದಿನಗಳ ಕಾಲ ನಿತ್ಯ ನೀರನ್ನು ತಮಿಳುನಾಡಿಗೆ ಹರಿಸುವಂತೆ ಕರ್ನಾಟಕಕ್ಕೆ ಸೂಚನೆ ನೀಡಿತ್ತು. ಇದನ್ನು ಖಂಡಿಸಿ ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ಕರ್ನಾಟಕ ಬಂದ್‌ಗೆ ಕರೆ ನೀಡಿದ್ದರು.



