Thursday, March 23, 2023

Latest Posts

ಮೇಘಾಲಯದ ಮುಖ್ಯಮಂತ್ರಿಯಾಗಿ ಕಾನ್ರಾಡ್ ಸಂಗ್ಮಾ ಪ್ರಮಾಣ ವಚನ ಸ್ವೀಕಾರ

ಹೊಸದಿಗಂತ ಡಿಜಿಟಲ್‌ ಡೆಸ್ಕ್ :

ನ್ಯಾಷನಲ್ ಪೀಪಲ್ಸ್ ಪಾರ್ಟಿ (ಎನ್​​ಪಿಪಿ) ಮುಖ್ಯಸ್ಥ ಕಾನ್ರಾಡ್ ಸಂಗ್ಮಾ ಅವರು ಇಂದು ಪ್ರಧಾನಿ ನರೇಂದ್ರ ಮೋದಿ ಅವರ ಸಮ್ಮುಖದಲ್ಲಿ ಮೇಘಾಲಯದ ಮುಖ್ಯಮಂತ್ರಿಯಾಗಿ ಸತತ 2ನೇ ಅವಧಿಗೆ ಪ್ರಮಾಣ ವಚನ ಸ್ವೀಕರಿಸಿದರು.

ಮೇಘಾಲಯದ ರಾಜ್ಯಪಾಲ ಫಾಗು ಚೌಹಾಣ್ ಅವರು ಸಂಗ್ಮಾ ಅವರಿಗೆ ಮುಖ್ಯಮಂತ್ರಿಯಾಗಿ ಮತ್ತು ಇಬ್ಬರು ನಾಯಕರಿಗೆ ಉಪಮುಖ್ಯಮಂತ್ರಿಯಾಗಿ, ಇತರ ಒಂಬತ್ತು ಸಚಿವರಿಗೆ ಪ್ರಮಾಣ ವಚನ ಬೋಧಿಸಿದರು. ಹೊಸದಾಗಿ ಚುನಾಯಿತರಾದ ಹನ್ನೊಂದು ಶಾಸಕರು ಕೂಡ ಸಂಪುಟ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು.

ಶಿಲ್ಲಾಂಗ್‌ನಲ್ಲಿ ಮೇಘಾಲಯದ ಉಪಮುಖ್ಯಮಂತ್ರಿಗಳಾಗಿ ಪ್ರೆಸ್ಟೋನ್ ಟೈನ್‌ಸಾಂಗ್ ಮತ್ತು ಸ್ನಿಯಾವ್‌ಭಾಲಾಂಗ್ ಧಾರ್ ಪ್ರಮಾಣ ವಚನ ಸ್ವೀಕರಿಸಿದರು.

ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಹಾಗೂ ಇತರ ಬಿಜೆಪಿ ನಾಯಕರು ಉಪಸ್ಥಿತರಿದ್ದರು.

ಫೆ. 27 ರಂದು ನಡೆದ ಚುನಾವಣೆಯಲ್ಲಿ ಕಾನ್ರಾಡ್ ಸಂಗ್ಮಾ ನೇತೃತ್ವದ ಎನ್‌ಪಿಪಿ 26 ಸ್ಥಾನಗಳನ್ನು ಗೆದ್ದು, ಮೈತ್ರಿಕೂಟದ 45 ಶಾಸಕರ ಬೆಂಬಲದೊಂದಿಗೆ ಅಧಿಕಾರ ಮರಳಿ ಗಳಿಸಿತ್ತು.

ಮಾರ್ಚ್ 2 ರಂದು ಭಾರತದ ಚುನಾವಣಾ ಆಯೋಗವು ಹಂಚಿಕೊಂಡ ಅಂಕಿಅಂಶಗಳ ಪ್ರಕಾರ ಸಂಗ್ಮಾ ದಕ್ಷಿಣ ತುರಾ ಕ್ಷೇತ್ರದಿಂದ ಭಾರತೀಯ ಜನತಾ ಪಕ್ಷದ ಬರ್ನಾರ್ಡ್ ಎನ್ ಮರಕ್ ವಿರುದ್ಧ 5,016 ಅಂತರದಿಂದ ಗೆದ್ದಿದ್ದಾರೆ.

ಗುರುವಾರ ಪ್ರಕಟವಾದ ವಿಧಾನಸಭಾ ಚುನಾವಣೆಯ ಫಲಿತಾಂಶದಲ್ಲಿ ಯುನೈಟೆಡ್ ಡೆಮಾಕ್ರಟಿಕ್ ಪಾರ್ಟಿ (ಯುಡಿಪಿ) 11 ಸ್ಥಾನಗಳನ್ನು ಗಳಿಸಿದೆ. ಕಾಂಗ್ರೆಸ್ ಐದು ಸ್ಥಾನಗಳನ್ನು ಗೆದ್ದಿದೆ. ಹಿಂದಿನ ವಿಧಾನಸಭೆಯಲ್ಲಿ ಎಲ್ಲಾ ಕಾಂಗ್ರೆಸ್ ಶಾಸಕರನ್ನು ಸೇರಿಸಿಕೊಂಡಿದ್ದ ತೃಣಮೂಲ ಕಾಂಗ್ರೆಸ್ ಕೂಡ ಐದು ಸ್ಥಾನಗಳನ್ನು ಪಡೆದಿತ್ತು.

ಬಿಜೆಪಿ, ಪೀಪಲ್ಸ್ ಡೆಮಾಕ್ರಟಿಕ್ ಫ್ರಂಟ್ ಮತ್ತು ಹಿಲ್ ಸ್ಟೇಟ್ ಪೀಪಲ್ಸ್ ಡೆಮಾಕ್ರಟಿಕ್ ಪಾರ್ಟಿ ತಲಾ ಎರಡು ಸ್ಥಾನಗಳನ್ನು ಪಡೆದುಕೊಂಡಿವೆ. ವಾಯ್ಸ್ ಆಫ್ ಪೀಪಲ್ ಪಾರ್ಟಿ ನಾಲ್ಕು ಸ್ಥಾನಗಳನ್ನು ಪಡೆದುಕೊಂಡಿದೆ. ಎರಡು ಸ್ಥಾನಗಳನ್ನು ಸ್ವತಂತ್ರ ಅಭ್ಯರ್ಥಿಗಳು ಪಡೆದಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!