ವಿಜಯಪುರ ಜಿಲ್ಲಾಸ್ಪತ್ರೆಗೆ ಎನ್ಕ್ಯೂಎಎಸ್ ಪ್ರಶಸ್ತಿ

– ಪರಶುರಾಮ ಶಿವಶರಣ

ಸತತ ಎರಡು ಬಾರಿ ಕಾಯಕಲ್ಪ ಪ್ರಶಸ್ತಿಗೆ ಪಾತ್ರವಾಗಿದ್ದ ನಗರದ ಜಿಲ್ಲಾಸ್ಪತ್ರೆಗೆ ಮತ್ತೊಂದು ರಾಷ್ಟ್ರೀಯ ಗುಣಮಟ್ಟ ಮತ್ತು ಸೇವಾ (ಎನ್ಕ್ಯೂಎಎಸ್) ಪ್ರಶಸ್ತಿ ಒಲಿದು ಬಂದಿದೆ.

ಪ್ರಶಸ್ತಿ ಪಡೆದ ಏಕೈಕ ಆಸ್ಪತ್ರೆ:

ಬೆಳಗಾವಿ, ಕಲಬುರಗಿ ವಿಭಾಗದಲ್ಲಿಯೇ ಸ್ವಚ್ಛತೆ ಹಾಗೂ ಗುಣಮಟ್ಟ ಪರಿಗಣಿಸಿ ಪ್ರಶಸ್ತಿ ಪಡೆದ ಏಕೈಕ ಆಸ್ಪತ್ರೆ ವಿಜಯಪುರ ಜಿಲ್ಲಾಸ್ಪತ್ರೆ ಆಗಿದೆ. ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ರಾಷ್ಟ್ರೀಯ ಗುಣಮಟ್ಟ ಮತ್ತು ಸೇವೆ (ಎನ್ಕ್ಯೂಎಎಸ್) ಪ್ರಶಸ್ತಿ ಪ್ರಕಟಿಸಿದೆ. ಕಳೆದ ಜೂ.22 ಮತ್ತು 23ರಂದು ವಿಜಯಪುರ ಜಿಲ್ಲಾಸ್ಪತ್ರೆಗೆ ಭೇಟಿ ನೀಡಿದ್ದ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಕಾರಿಗಳ ತಂಡ ಜಿಲ್ಲಾಸ್ಪತ್ರೆಯಲ್ಲಿ ಎಲ್ಲ ವಿಭಾಗಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿತ್ತು. ಜಿಲ್ಲಾಸ್ಪತ್ರೆಯಲ್ಲಿರುವ ಸ್ವಚ್ಛತೆ, ರೋಗಿಗಳ ನೋಂದಣಿ ವ್ಯವಸ್ಥೆ, ರೋಗಿಗಳ, ರೋಗಗಳ ಮಾಹಿತಿ ದತ್ತಾಂಶ ಮತ್ತು ಮಾಹಿತಿ ನಿರ್ವಹಣೆ, ವೈದ್ಯರು ಮತ್ತು ದಾದಿಯರು ಹಾಗೂ ಇತರ ಸಿಬ್ಬಂದಿಯ ಸೇವೆ, ಪ್ರಯೋಗಾಲಯಗಳು, ಶೌಚಾಲಯ ವ್ಯವಸ್ಥೆ, ಚಿಕಿತ್ಸೆ ಕೊಠಡಿ, ವಾರ್ಡುಗಳ ಮಾಹಿತಿ ನಕ್ಷೆ, ಚಿಕಿತ್ಸೆ ಪಡೆದ ರೋಗಿಗಳಿಂದ ಅಭಿಪ್ರಾಯವನ್ನು ಕೇಂದ್ರ ಅಧಿಕಾರಿಗಳ ತಂಡ ಸಂಗ್ರಹಿಸಿ ಪ್ರಶಸ್ತಿ ನೀಡಿದೆ.

ಬೆಂಗಳೂರಿನಲ್ಲಿ ರಾಜ್ಯದ ಇತರ ಜಿಲ್ಲಾಸ್ಪತ್ರೆಗಳ ಮಾಹಿತಿ ತಂಡ ಸಂಗ್ರಹಿಸಿದೆ. ಈ ಪ್ರಶಸ್ತಿಗೆ ಅಗತ್ಯವಾಗಿರುವ ಮಾನದಂಡಗಳನ್ನು ಪರಿಗಣಿಸಿ ವಿಜಯಪುರ ಜಿಲ್ಲಾಸ್ಪತ್ರೆಗೆ ರಾಷ್ಟ್ರೀಯ ಗುಣಮಟ್ಟ ಮತ್ತು ಸೇವೆ ಪ್ರಶಸ್ತಿಗೆ ಆಯ್ಕೆ ಮಾಡಿದೆ. ರಾಜ್ಯದಲ್ಲಿ ಜಿಲ್ಲಾಸ್ಪತ್ರೆಗಳ ವಿಭಾಗದಲ್ಲಿ ವಿಜಯಪುರ ಆಸ್ಪತ್ರೆ ಸೇರಿದಂತೆ ಮೂರು ಆಸ್ಪತ್ರೆಗಳಿಗೆ ಪ್ರಶಸ್ತಿ ಲಭಿಸಿದರೆ ಅದರಲ್ಲಿ ಹೆಚ್ಚಿಗೆ ಅಂಕ ಪಡೆದ ಅಂದರೆ ಕೇಂದ್ರ ನಿಗದಿಪಡಿಸಿದ ಒಟ್ಟು 100 ರಲ್ಲಿ ಶೇ. 97 ರಷ್ಟು ಅಂಕ ಪಡೆಯುವ ಮೂಲಕ ವಿಜಯಪುರ ಜಿಲ್ಲಾಸ್ಪತ್ರೆ ಪ್ರಥಮ ಸ್ಥಾನದಲ್ಲಿದ್ದು, ಸೇವೆ ಮತ್ತೊಮ್ಮೆ ಕರ್ನಾಟಕವಷ್ಟೇ ಅಲ್ಲ, ದೇಶಾದ್ಯಂತ ಗಮನ ಸೆಳೆದಿದೆ. ಇನ್ನು ಹಾಸನದ ಹಾಸನ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ ಆಸ್ಪತ್ರೆ ಶೇ.95 ಹಾಗೂ ಕೋಲಾರದ ಸಿಎಚ್ಸಿ ಬೇತಮಂಗಲ ಆಸ್ಪತ್ರೆ 79.26 ಅಂಕ ಪಡೆದು ಕ್ರಮವಾಗಿ ದ್ವಿತೀಯ ಹಾಗೂ ತೃತೀಯ ಸ್ಥಾನದಲ್ಲಿವೆ.

ಕಾಯಕಲ್ಪ ಪ್ರಶಸ್ತಿಗೂ ಪಾತ್ರವಾಗಿತ್ತು:

ಈ ಹಿಂದೆಯೂ ಜಿಲ್ಲಾಸ್ಪತ್ರೆ ಸತತ ಎರಡು ಬಾರಿ ಕಾಯಕಲ್ಪ ಪ್ರಶಸ್ತಿಗೆ ಪಾತ್ರವಾಗಿತ್ತು. ಅಲ್ಲದೆ ಕಳೆದ ವರ್ಷಗಳ 2020 ಹಾಗೂ 2021ರ ಕೊರೋನಾ ಎರಡು ಅಲೆಗಳ ನಿಯಂತ್ರಣದಲ್ಲಿ ಮಾಡಿದ ಜಿಲ್ಲಾಸ್ಪತ್ರೆ ಕಾರ್ಯ ಮರೆಯುವಂತಿಲ್ಲ.

ಪ್ರಶಸ್ತಿಗೆ ಜೊತೆಗೆ 10 ಲಕ್ಷ ರೂ:
ಜಿಲ್ಲಾಸ್ಪತ್ರೆಗೆ ಲಭಿಸಿರುವ ರಾಷ್ಟ್ರೀಯ ಗುಣಮಟ್ಟ ಮತ್ತು ಸೇವೆ (ಎನ್ಕ್ಯೂಎಎಸ್) ಪ್ರಶಸ್ತಿ ಜೊತೆಗೆ 10 ಲಕ್ಷ ರೂ.ಗಳು ಕೂಡ ಸೇರಿದ್ದು, ಇದರಲ್ಲಿ ಶೇ.70 ರಷ್ಟು ಹಣ ಆಸ್ಪತ್ರೆಯ ಅಭಿವೃದ್ಧಿಗಾಗಿ ವಿನಿಯೋಗಿಸಿದರೆ, ಇನ್ನು ಶೇ.30 ರಷ್ಟು ಹಣ ಆಸ್ಪತ್ರೆ ವೈದರು ಹಾಗೂ ಸಿಬ್ಬಂದಿ ಪ್ರೋತ್ಸಾಹ ಧನಕ್ಕೆ ನೀಡಲಾಗುವುದು ವಿಶೇಷ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!