June 9, 2026
Tuesday, June 9, 2026
spot_img

ಉಜ್ವಲ ಸಬ್ಸಿಡಿ ಸಿಲಿಂಡರ್‌ಗಳ ಸಂಖ್ಯೆ 9 ರಿಂದ 4ಕ್ಕೆ ಇಳಿಕೆ: ಕೇಂದ್ರದ ಹೊಸ ನಿಯಮ ಜಾರಿ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ಪ್ರಧಾನ ಮಂತ್ರಿ ಉಜ್ವಲ ಯೋಜನೆ ಅಡಿಯ ಫಲಾನುಭವಿಗಳಿಗೆ ಕೇಂದ್ರ ಸರ್ಕಾರವು ದೊಡ್ಡ ಆಘಾತ ನೀಡಿದೆ. ಉಜ್ವಲ ಯೋಜನೆಯಡಿ ವಾರ್ಷಿಕವಾಗಿ ಸಿಗುತ್ತಿದ್ದ ಸಬ್ಸಿಡಿ ಅಡುಗೆ ಅನಿಲ (LPG) ಸಿಲಿಂಡರ್‌ಗಳ ಕೋಟಾವನ್ನು ಸರ್ಕಾರವು 9 ರಿಂದ ಕೇವಲ 4ಕ್ಕೆ ಕಡಿತಗೊಳಿಸಿದೆ. ಈ ಪರಿಷ್ಕೃತ ಆದೇಶವು ತಕ್ಷಣದಿಂದಲೇ ಜಾರಿಗೆ ಬರಲಿದೆ ಎಂದು ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯದ ಹೆಚ್ಚುವರಿ ಕಾರ್ಯದರ್ಶಿ ಪ್ರವೀಣ್ ಮಾಲ್ ಖಾನೂಜಾ ತಿಳಿಸಿದ್ದಾರೆ.

ಸಿಲಿಂಡರ್ ಕೋಟಾ ಹಂತ-ಹಂತವಾಗಿ ಕಡಿತ
ಮೇ 2016 ರಲ್ಲಿ ಈ ಮಹತ್ವಾಕಾಂಕ್ಷೆಯ ಯೋಜನೆಯನ್ನು ಪ್ರಾರಂಭಿಸಿದಾಗ, ಫಲಾನುಭವಿಗಳಿಗೆ ವರ್ಷಕ್ಕೆ 12 ಸಬ್ಸಿಡಿ ಸಿಲಿಂಡರ್‌ಗಳನ್ನು ನೀಡಲಾಗುತ್ತಿತ್ತು. ಆದರೆ ಕಳೆದ ವರ್ಷ ಈ ಕೋಟಾವನ್ನು 9 ಸಿಲಿಂಡರ್‌ಗಳಿಗೆ ಇಳಿಸಲಾಗಿತ್ತು, ಇದೀಗ ಅದನ್ನು ಮತ್ತಷ್ಟು ಕಡಿತಗೊಳಿಸಿ ಕೇವಲ 4 ಸಿಲಿಂಡರ್‌ಗಳಿಗೆ ಸೀಮಿತಗೊಳಿಸಲಾಗಿದೆ. ಸರಾಸರಿ ಕುಟುಂಬಗಳ ವಾರ್ಷಿಕ ಬಳಕೆಯ ಮಾದರಿಯನ್ನು ಆಧರಿಸಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಅಧಿಕಾರಿಗಳು ಸಮರ್ಥಿಸಿಕೊಂಡಿದ್ದಾರೆ.

ಸಬ್ಸಿಡಿ ದರ ಮತ್ತು ಗ್ರಾಹಕರು ಪಾವತಿಸಬೇಕಾದ ಹಣ
ಪ್ರಸ್ತುತ ಮಾರುಕಟ್ಟೆಯಲ್ಲಿ ಎಲ್‌ಪಿಜಿ ಬೆಲೆಗಳು ನಿರಂತರವಾಗಿ ಏರಿಕೆಯಾಗುತ್ತಿವೆ. ದೆಹಲಿಯಲ್ಲಿ 14.2 ಕೆಜಿಯ ಎಲ್‌ಪಿಜಿ ಸಿಲಿಂಡರ್ ಬೆಲೆ 942 ತಲುಪಿದೆ. ಉಜ್ವಲ ಯೋಜನೆಯ ಫಲಾನುಭವಿಗಳಿಗೆ ಸರ್ಕಾರ ನೀಡುತ್ತಿರುವ 300 ಸಬ್ಸಿಡಿಯನ್ನು ಕಡಿತಗೊಳಿಸಿದರೆ, ಅವರು ಪ್ರತಿ ಸಿಲಿಂಡರ್‌ಗೆ 642 ಪಾವತಿಸಬೇಕಾಗುತ್ತದೆ. ಜಾಗತಿಕವಾಗಿ ಅಡುಗೆ ಅನಿಲ ಬೆಲೆ ಹೆಚ್ಚಾಗಿದ್ದರೂ, ಭಾರತೀಯ ಕುಟುಂಬಗಳಿಗೆ ಕಡಿಮೆ ದರದಲ್ಲಿ ಗ್ಯಾಸ್ ಪೂರೈಸಲಾಗುತ್ತಿದೆ ಎಂದು ಸಚಿವಾಲಯ ತಿಳಿಸಿದೆ.

ಬೆಲೆ ಏರಿಕೆ ಮತ್ತು ತೈಲ ಕಂಪನಿಗಳ ನಷ್ಟ
ಮಧ್ಯಪ್ರಾಚ್ಯದಲ್ಲಿ ಉಂಟಾಗಿರುವ ಉದ್ವಿಗ್ನತೆಯಿಂದಾಗಿ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಎಲ್‌ಪಿಜಿ ಬೆಲೆಗಳು ತೀವ್ರವಾಗಿ ಏರಿಕೆ ಕಂಡಿವೆ. ಇದರಿಂದಾಗಿ ದೇಶೀಯವಾಗಿ ಸರಬರಾಜು ವೆಚ್ಚ ಪ್ರತಿ ಸಿಲಿಂಡರ್‌ಗೆ ಸುಮಾರು 1,600 ಕ್ಕೆ ತಲುಪಿದೆ. ಸದ್ಯ ತೈಲ ಮಾರಾಟ ಕಂಪನಿಗಳು ಪ್ರತಿ ಸಿಲಿಂಡರ್ ಮಾರಾಟದ ಮೇಲೆ 700 ರಷ್ಟು ನಷ್ಟ ಅನುಭವಿಸುತ್ತಿವೆ, ಇದೇ ಕಾರಣಕ್ಕೆ ಇತ್ತೀಚೆಗೆ ಸಿಲಿಂಡರ್ ಬೆಲೆಯಲ್ಲಿ 29 ರಷ್ಟು ಹೆಚ್ಚಳ ಮಾಡಲಾಗಿದೆ ಎಂದು ಸರ್ಕಾರಿ ಮೂಲಗಳು ಸ್ಪಷ್ಟಪಡಿಸಿವೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !