November 20, 2026
Friday, November 20, 2026
spot_img

ಬಾಕ್ಸ್ ಆಫೀಸ್‌ನಲ್ಲಿ ‘O.M’ ಅಬ್ಬರ: ಮಮ್ಮುಟ್ಟಿ-ಧನುಷ್ ನಟನೆಗೆ ಅಭಿಮಾನಿಗಳ ಬಹುಪರಾಕ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ಭಾರತೀಯ ಚಿತ್ರರಂಗದ ಬಹುನಿರೀಕ್ಷಿತ ಆಕ್ಷನ್ ಥ್ರಿಲ್ಲರ್ ಸಿನಿಮಾ ‘ಓ.ಎಂ: ಆಪರೇಷನ್ ಮೋಲ್’ (O.M.: Operation Mole) ಇಂದು ವಿಶ್ವದಾದ್ಯಂತ ಚಿತ್ರಮಂದಿರಗಳಲ್ಲಿ ಭರ್ಜರಿಯಾಗಿ ತೆರೆಕಂಡಿದೆ. ತಮಿಳಿನ ಸ್ಟಾರ್ ನಟ ಧನುಷ್, ಮಲಯಾಳಂ ಮೆಗಾಸ್ಟಾರ್ ಮಮ್ಮುಟ್ಟಿ, ನ್ಯಾಚುರಲ್ ಬ್ಯೂಟಿ ಸಾಯಿ ಪಲ್ಲವಿ ಹಾಗೂ ಶ್ರೀಲೀಲಾ ಅವರಂತಹ ಘಟಾನುಘಟಿ ಕಲಾವಿದರು ಒಂದೇ ಪರದೆಯ ಮೇಲೆ ಕಾಣಿಸಿಕೊಂಡಿರುವುದು ಈ ಚಿತ್ರದ ದೊಡ್ಡ ಆಕರ್ಷಣೆಯಾಗಿದೆ. ರಾಜ್‌ಕುಮಾರ್ ಪೆರಿಯಸಾಮಿ ನಿರ್ದೇಶನದ ಈ ಚಿತ್ರಕ್ಕೆ ಮೊದಲ ದಿನವೇ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಸಿನಿಮಾ ವೀಕ್ಷಿಸಿದ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಅನಿಸಿಕೆಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಚಿತ್ರದ ಮೊದಲಾರ್ಧ ಅತ್ಯಂತ ವೇಗವಾಗಿ ಮತ್ತು ರೋಚಕವಾಗಿ ಸಾಗುತ್ತದೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ. ಕಥೆಯ ಪಾತ್ರಗಳ ಪರಿಚಯ ಮತ್ತು ಸನ್ನಿವೇಶಗಳನ್ನು ನಿರ್ದೇಶಕರು ಅಚ್ಚುಕಟ್ಟಾಗಿ ಕಟ್ಟಿಕೊಟ್ಟಿದ್ದಾರೆ. ವಿಶೇಷವಾಗಿ, ಚಿತ್ರದ ಇಂಟರ್ವಲ್ ದೃಶ್ಯವು ಊಹಿಸಲಾಗದ ತಿರುವನ್ನು ಹೊಂದಿದ್ದು, ಪ್ರೇಕ್ಷಕರನ್ನು ಸೀಟಿನ ತುದಿಗೆ ತಂದು ಕೂರಿಸುತ್ತದೆ ಎಂದು ನೆಟ್ಟಿಗರು ಕೊಂಡಾಡಿದ್ದಾರೆ. “ಈ ಚಿತ್ರದ ನಿಜವಾದ ಸೂಪರ್ ಸ್ಟಾರ್ ನಿರ್ದೇಶಕ ರಾಜ್‌ಕುಮಾರ್ ಪೆರಿಯಸಾಮಿ” ಎಂದು ಅಭಿಮಾನಿಯೊಬ್ಬರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಚಿತ್ರದಲ್ಲಿ ಮಮ್ಮುಟ್ಟಿ ಮತ್ತು ಧನುಷ್ ಅವರ ನಟನೆಯ ಜುಗಲ್‌ಬಂದಿ ಪ್ರೇಕ್ಷಕರಿಗೆ ಹಬ್ಬದೂಟ ನೀಡಿದೆ. ಸಾಯಿ ಪಲ್ಲವಿ ಮತ್ತು ಶ್ರೀಲೀಲಾ ತಮ್ಮ ಪಾತ್ರಗಳಿಗೆ ಜೀವ ತುಂಬಿದ್ದು, ಭಾವನಾತ್ಮಕ ದೃಶ್ಯಗಳು ಮನಸ್ಸಿಗೆ ತಟ್ಟುತ್ತವೆ. ಮೈನವಿರೇಳಿಸುವ ಸಾಹಸ ದೃಶ್ಯಗಳು ಚಿತ್ರದ ತೂಕವನ್ನು ಹೆಚ್ಚಿಸಿವೆ.

ಚಿತ್ರಕ್ಕೆ ಧನಾತ್ಮಕ ಪ್ರತಿಕ್ರಿಯೆ ಸಿಕ್ಕಿದ್ದರೂ, ಕೆಲವು ಪ್ರೇಕ್ಷಕರು ಸಣ್ಣಪುಟ್ಟ ನ್ಯೂನತೆಗಳನ್ನು ಗುರುತಿಸಿದ್ದಾರೆ. ಕಥೆಯ ಕೆಲವು ಭಾಗಗಳು ಮೊದಲೇ ಊಹಿಸುವಂತಿವೆ ಮತ್ತು ಸಿನಿಮಾದ ಅವಧಿ ಸ್ವಲ್ಪ ದೀರ್ಘವಾಗಿದೆ ಎಂಬ ಅಭಿಪ್ರಾಯವೂ ಕೇಳಿಬಂದಿದೆ. ಆದರೂ, ಕಮರ್ಷಿಯಲ್ ಎಲಿಮೆಂಟ್ಸ್ ಮತ್ತು ಕಲಾವಿದರ ಅದ್ಭುತ ನಟನೆ ಈ ಸಣ್ಣ ಕೊರತೆಗಳನ್ನು ಮರೆಮಾಚುತ್ತದೆ. ಒಟ್ಟಾರೆಯಾಗಿ, ಆಕ್ಷನ್ ಮತ್ತು ಥ್ರಿಲ್ಲರ್ ಸಿನಿಮಾ ಪ್ರಿಯರಿಗೆ ‘ಆಪರೇಷನ್ ಮೋಲ್’ ಒಂದು ಉತ್ತಮ ಮನರಂಜನೆಯ ಪ್ಯಾಕೇಜ್ ಆಗಿ ಹೊರಹೊಮ್ಮಿದೆ.

Must Read