ಹೊಸದಿಗಂತ ಡಿಜಿಟಲ್ ಡೆಸ್ಕ್:
ಕಾವೇರಿ ನದಿ ನೀರು ಹಂಚಿಕೆ ವಿವಾದದಲ್ಲಿ ಕರ್ನಾಟಕಕ್ಕೆ ಮಹತ್ವದ ಕಾನೂನು ಜಯ ಸಿಕ್ಕಿದೆ. ಹೆಚ್ಚುವರಿಯಾಗಿ 11 ಟಿಎಂಸಿ ನೀರು ಬಿಡುಗಡೆ ಮಾಡುವಂತೆ ಕೋರಿ ತಮಿಳುನಾಡು ಸಲ್ಲಿಸಿದ್ದ ಎರಡು ಮಧ್ಯಂತರ ಅರ್ಜಿಗಳನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿದೆ. ಅಲ್ಲದೆ, ಇದೇ ವಿಚಾರವಾಗಿ ಮೂರನೇ ಬಾರಿಗೆ ಅರ್ಜಿ ಸಲ್ಲಿಸಿದರೂ ಅದನ್ನೂ ವಜಾಗೊಳಿಸುವುದಾಗಿ ನ್ಯಾಯಪೀಠ ಮೌಖಿಕವಾಗಿ ಸ್ಪಷ್ಟಪಡಿಸಿದೆ.
ಅಂತರರಾಜ್ಯ ಗಡಿ ಮಾಪನ ಕೇಂದ್ರವಾದ ಬಿಳಿಗುಂಡ್ಲುವಿನಲ್ಲಿ ಅಕ್ಟೋಬರ್ 6ರವರೆಗೆ ತಮಗೆ ಬರಬೇಕಿದ್ದ ನೀರಿನಲ್ಲಿ 11.719 ಟಿಎಂಸಿ ಕೊರತೆಯಾಗಿದೆ ಎಂದು ತಮಿಳುನಾಡು ನ್ಯಾಯಾಲಯಕ್ಕೆ ತಿಳಿಸಿತ್ತು. ಕರ್ನಾಟಕದ ಕಾವೇರಿ ಜಲಾನಯನ ಪ್ರದೇಶದ ಪ್ರಮುಖ ಜಲಾಶಯಗಳಲ್ಲಿ ಸುಮಾರು 49 ಟಿಎಂಸಿ ನೀರಿನ ಸಂಗ್ರಹವಿದ್ದರೂ ರಾಜ್ಯ ಸರ್ಕಾರ ಉದ್ದೇಶಪೂರ್ವಕವಾಗಿ ನೀರು ಬಿಡುಗಡೆ ಮಾಡುತ್ತಿಲ್ಲ ಎಂದು ಆರೋಪಿಸಿತ್ತು. ಇದರಿಂದ ತಮ್ಮ ರಾಜ್ಯದ ರೈತರು ಮತ್ತು ಬೆಳೆಗಳಿಗೆ ನಷ್ಟವಾಗುತ್ತಿದೆ ಎಂದು ವಾದಿಸಿತ್ತು.
ಕಾವೇರಿ ನ್ಯಾಯಮಂಡಳಿಯ ತೀರ್ಪಿನಂತೆ ಮಳೆ ಕೊರತೆಯ ವರ್ಷದಲ್ಲಿಯೂ ತಮಗೆ ಶೇ.55.29ರಷ್ಟು ಪ್ರಮಾಣಾನುಗುಣ ಪಾಲು ನೀಡಬೇಕು ಹಾಗೂ ಹಿಂದಿನ ಬಾಕಿ ನೀರನ್ನೂ ಕರ್ನಾಟಕ ಬಿಡುಗಡೆ ಮಾಡಬೇಕು ಎಂದು ತಮಿಳುನಾಡು ಒತ್ತಾಯಿಸಿತ್ತು.
ಇದಕ್ಕೆ ಪ್ರತಿಯಾಗಿ ಕರ್ನಾಟಕವು ರಾಜ್ಯದ ಕಾವೇರಿ ಜಲಾನಯನ ಪ್ರದೇಶದಲ್ಲಿ ತೀವ್ರ ಮಳೆ ಕೊರತೆಯಿದ್ದು, ಬೆಂಗಳೂರು ಸೇರಿದಂತೆ ಹಲವು ಭಾಗಗಳಲ್ಲಿ ಕುಡಿಯುವ ನೀರಿನ ಅಭಾವ ಎದುರಾಗಿದೆ ಎಂದು ನ್ಯಾಯಾಲಯದ ಗಮನಕ್ಕೆ ತಂದಿತ್ತು. ಬಿಳಿಗುಂಡ್ಲುವಿನವರೆಗೆ ಲಭ್ಯವಿರುವ 483 ಟಿಎಂಸಿ ನೀರಿನಲ್ಲಿ ತಮಿಳುನಾಡಿಗೆ 404.25 ಟಿಎಂಸಿ ಹಂಚಿಕೆಯಾಗಿದ್ದರೆ, ಕರ್ನಾಟಕದ ಬರಪೀಡಿತ ಪ್ರದೇಶಗಳ ಅಗತ್ಯವನ್ನು ಪರಿಗಣಿಸದೆ ರಾಜ್ಯಕ್ಕೆ 284.75 ಟಿಎಂಸಿ ಮಾತ್ರ ನೀಡಲಾಗಿದೆ ಎಂದು ತನ್ನ ಅಫಿಡವಿಟ್ನಲ್ಲಿ ಉಲ್ಲೇಖಿಸಿತ್ತು.
ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಮತ್ತು ಕಾವೇರಿ ನೀರು ನಿಯಂತ್ರಣ ಸಮಿತಿ ಪ್ರತಿ 15 ದಿನಗಳಿಗೊಮ್ಮೆ ಸಭೆ ನಡೆಸಿ, ವಾಸ್ತವಿಕ ಪರಿಸ್ಥಿತಿಯನ್ನು ಪರಿಶೀಲಿಸಿ ನೀರು ಬಿಡುಗಡೆಗೆ ಸಂಬಂಧಿಸಿದಂತೆ ಆದೇಶ ನೀಡುತ್ತಿವೆ. ಪ್ರಾಧಿಕಾರದ ಸೂಚನೆಯಂತೆ ಕರ್ನಾಟಕ ಈಗಾಗಲೇ ನೀರು ಹರಿಸಿದೆ ಎಂದೂ ರಾಜ್ಯದ ಪರ ವಕೀಲರು ವಾದಿಸಿದ್ದರು. ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಮೂರ್ತಿ ವಿಕ್ರಮ್ ನಾಥ್ ಮತ್ತು ನ್ಯಾಯಮೂರ್ತಿ ಅಪರೇಶ್ ಕುಮಾರ್ ಸಿಂಗ್ ಅವರನ್ನೊಳಗೊಂಡ ದ್ವಿಸದಸ್ಯ ಪೀಠವು, ಬಾಕಿ ನೀರಿನ ಪಾಲನ್ನು ತಕ್ಷಣ ಬಿಡುಗಡೆ ಮಾಡುವಂತೆ ಕರ್ನಾಟಕಕ್ಕೆ ನಿರ್ದೇಶನ ನೀಡಬೇಕೆಂದು ತಮಿಳುನಾಡು ಸಲ್ಲಿಸಿದ್ದ ಎರಡೂ ಮಧ್ಯಂತರ ಅರ್ಜಿಗಳನ್ನು ತಿರಸ್ಕರಿಸಿತು.
ಇದೇ ವೇಳೆ, ತೀರ್ಪು ಪ್ರಕಟಿಸುವ ಮುನ್ನ ತಮಿಳುನಾಡು ಪರ ವಕೀಲರು ನವೆಂಬರ್ 20ರಂದು ಮತ್ತೊಂದು ಹೊಸ ಅರ್ಜಿ ಸಲ್ಲಿಸಿರುವುದಾಗಿ ನ್ಯಾಯಪೀಠಕ್ಕೆ ತಿಳಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಮೂರ್ತಿ ವಿಕ್ರಮ್ ನಾಥ್, “ಆ ಅರ್ಜಿಯನ್ನೂ ವಜಾಗೊಳಿಸಲಾಗುವುದು” ಎಂದು ಮೌಖಿಕವಾಗಿ ಸ್ಪಷ್ಟಪಡಿಸಿದರು.



