May 9, 2026
Saturday, May 9, 2026
spot_img

ದುಬಾರೆ ತೂಗುಸೇತುವೆ ಶಂಕುಸ್ಥಾಪನೆಗೆ ವಿಘ್ನ? ಕೊಡಗಿನಲ್ಲಿ ‘ಕೈ’-ಕಮಲ ನಾಯಕರ ನಡುವೆ ವಾಕ್ಸಮರ

ಹೊಸದಿಗಂತ ಮಡಿಕೇರಿ:

ಕೊಡಗು ಜಿಲ್ಲೆಯಲ್ಲಿ ದಶಕಗಳಿಂದ ಕಾಡುತ್ತಿರುವ ಆನೆ-ಮಾನವ ಸಂಘರ್ಷ ಮತ್ತು ಸಿ ಅಂಡ್ ಡಿ ಭೂಮಿ ಸಮಸ್ಯೆ ರಾಜಕೀಯ ಕೆಸರೆರಚಾಟಕ್ಕೆ ವೇದಿಕೆಯಾಗಿದೆ. ಬುಧವಾರ ಕೊಡಗಿಗೆ ಭೇಟಿ ನೀಡಿದ್ದ ಅರಣ್ಯ ಸಚಿವ ಈಶ್ವರ ಬಿ. ಖಂಡ್ರೆ ಅವರ ವಾಹನವನ್ನು ತಡೆದು ಪ್ರತಿಭಟಿಸಲು ಯತ್ನಿಸಿದ ಬಿಜೆಪಿ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಪ್ರಖ್ಯಾತ ಪ್ರವಾಸಿ ತಾಣ ದುಬಾರೆ ಆನೆ ಶಿಬಿರಕ್ಕೆ ಸಂಪರ್ಕ ಕಲ್ಪಿಸುವ 7.50 ಕೋಟಿ ರೂ. ವೆಚ್ಚದ ತೂಗುಸೇತುವೆ ನಿರ್ಮಾಣದ ಶಂಕುಸ್ಥಾಪನೆಗಾಗಿ ಸಚಿವರು ಆಗಮಿಸಿದ್ದರು. ಈ ವೇಳೆ ಕುಶಾಲನಗರ ಮಾರ್ಗದ ಗುಡ್ಡೆಹೊಸೂರಿನಲ್ಲಿ ಸೋಮವಾರಪೇಟೆ ಮಂಡಲ ಬಿಜೆಪಿ ಕಾರ್ಯಕರ್ತರು, ಅರಣ್ಯ ಇಲಾಖೆಯ ವಿಫಲತೆ ಹಾಗೂ ಭೂಮಿ ಸಮಸ್ಯೆ ಬಗೆಹರಿಸದ ಸರ್ಕಾರದ ಧೋರಣೆ ಖಂಡಿಸಿ ಸಚಿವರಿಗೆ ಘೇರಾವ್ ಹಾಕಲು ಮುಂದಾದರು. ಮುನ್ನೆಚ್ಚರಿಕಾ ಕ್ರಮವಾಗಿ ಪೊಲೀಸರು ಪ್ರತಿಭಟನಾಕಾರರನ್ನು ತಡೆದು ಬಂಧಿಸಿದರು.

ಈ ಘಟನೆಯನ್ನು ಕೊಡಗು ಜಿಲ್ಲಾ ಕಾಂಗ್ರೆಸ್ ತೀವ್ರವಾಗಿ ಖಂಡಿಸಿದೆ. ಪಕ್ಷದ ವಕ್ತಾರ ತೆನ್ನಿರ ಮೈನಾ ಈ ಬಗ್ಗೆ ಮಾತನಾಡಿ, “ಶಾಸಕ ಡಾ. ಮಂಥರ್ ಗೌಡ ಅವರ ವಿಶೇಷ ಆಸಕ್ತಿಯಿಂದಾಗಿ ಸುಮಾರು 120 ಆದಿವಾಸಿ ಕುಟುಂಬಗಳ ಹಿತದೃಷ್ಟಿಯಿಂದ ಈ ಸೇತುವೆ ನಿರ್ಮಾಣವಾಗುತ್ತಿದೆ. ಕಳೆದ 25 ವರ್ಷಗಳಲ್ಲಿ ಬಿಜೆಪಿ ಶಾಸಕರಿಂದ ಆಗದ ಅಭಿವೃದ್ಧಿ ಕೆಲಸಗಳನ್ನು ಈಗಿನ ಸರ್ಕಾರ ಮಾಡುತ್ತಿರುವುದನ್ನು ಕಂಡು ಸಹಿಸದೆ ಬಿಜೆಪಿ ಈ ರೀತಿ ಹತಾಶೆಯಿಂದ ವರ್ತಿಸುತ್ತಿದೆ” ಎಂದು ಕಿಡಿಹಾಕಿದರು.

ಜಿಲ್ಲೆಯ ಶಾಸಕರಾದ ಎ.ಎಸ್. ಪೊನ್ನಣ್ಣ ಮತ್ತು ಡಾ. ಮಂಥರ್ ಗೌಡ ಅವರು ವಿವಿಧ ಇಲಾಖೆಗಳಿಂದ ಹೆಚ್ಚಿನ ಅನುದಾನ ತಂದು ಕೊಡಗಿನ ಚಿತ್ರಣ ಬದಲಿಸುತ್ತಿದ್ದಾರೆ. ಇದರಿಂದ ತಮ್ಮ ರಾಜಕೀಯ ಭವಿಷ್ಯ ಮಂಕಾಗಬಹುದೆಂಬ ಭಯದಿಂದ ಮಾಜಿ ಶಾಸಕರು ತಮ್ಮ ಬೆಂಬಲಿಗರ ಮೂಲಕ ಇಂತಹ ಕೃತ್ಯ ಎಸಗುತ್ತಿದ್ದಾರೆ ಎಂದು ಮೈನಾ ಆರೋಪಿಸಿದರು.

ಆನೆ-ಮಾನವ ಸಂಘರ್ಷವನ್ನು ತಡೆಗಟ್ಟಲು ಸರ್ಕಾರ ವೈಜ್ಞಾನಿಕ ಕ್ರಮಗಳನ್ನು ಕೈಗೊಳ್ಳುತ್ತಿದೆ. ಇಂತಹ ಸಮಯದಲ್ಲಿ ಸಹಕಾರ ನೀಡುವ ಬದಲು ರಾಜಕೀಯ ಲಾಭಕ್ಕಾಗಿ ಪ್ರತಿಭಟನೆ ಮಾಡುವುದು ಕೊಡಗಿನ ಜನತೆ ತಲೆತಗ್ಗಿಸುವಂತಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !