ದೆಹಲಿ ವಾಯು ಮಾಲಿನ್ಯ: ನ.13 ರಿಂದ 20ರ ವರೆಗೆ ಬೆಸ-ಸಮ ನಿಯಮ ಜಾರಿ, ಶಾಲೆಗಳಿಗೆ ರಜೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ರಾಷ್ಟ್ರ ರಾಜಧಾನಿಯಲ್ಲಿ ಗಾಳಿಯ ಗುಣಮಟ್ಟ ಹದಗೆಡುತ್ತಿರುವ ಹಿನ್ನೆಲೆಯಲ್ಲಿ ನವೆಂಬರ್‌ 13 ರಿಂದ 20ರ ವರೆಗೆ ವಾಹನಗಳ ಬೆಸ-ಸಮ ನಿಯಮ ಜಾರಿಗೆ ಬರಲಿದೆ. ದೆಹಲಿಯಾದ್ಯಂತ 10 ಮತ್ತು 12ನೇ ತರಗತಿಗಳನ್ನು ಹೊರತುಪಡಿಸಿ ಉಳಿದೆಲ್ಲಾ ಶಾಲೆಗಳಿಗೆ ರಜೆ ಇಲಿದೆ ಎಂದು ಎಂದು ರಾಜ್ಯ ಪರಿಸರ ಸಚಿವ ಗೋಪಾಲ್ ರೈ ಹೇಳಿದ್ದಾರೆ.

ದೆಹಲಿಯು ಸುಮಾರು ಒಂದು ವಾರದಿಂದ ವಿಷಕಾರಿ ಹೊಗೆಯಿಂದ ಕೂಡಿದ್ದು, ಡೀಸೆಲ್ ಟ್ರಕ್‌ಗಳ ಪ್ರವೇಶವನ್ನು ನಿಲ್ಲಿಸಲು ಮತ್ತು ಗ್ರೇಡೆಡ್ ರೆಸ್ಪಾನ್ಸ್ ಆಕ್ಷನ್ ಪ್ಲಾನ್ (GRAP) ಯ ಹಂತ-4ರ ಅಡಿಯಲ್ಲಿ ನಗರದಲ್ಲಿ ನಿರ್ಮಾಣ ಚಟುವಟಿಕೆಗಳನ್ನು ನಿಷೇಧಿಸಲು ಕೇಂದ್ರವು ಸೂಚನೆ ನೀಡಿತ್ತು. ಇದರ ಬೆನ್ನಲ್ಲೆ ಇದೀಗ ಸಮ ಬೆಸ ವಾಹನ ನಿಯಮ ಜಾರಿಗೆ ತರಲು ಮುಂದಾಗಿದೆ.

ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ನೇತೃತ್ವದಲ್ಲಿ ಇಂದು ನಡೆದ ಉನ್ನತ ಮಟ್ಟದ ಸಭೆಯಲ್ಲಿ  ತೆಗೆದುಕೊಂಡ ಕೆಲವು ನಿರ್ಧಾರಗಳ ಕುರಿತಾಗಿ ಮಾತನಾಡಿದ ಸಚಿವರು, ಪಟಾಕಿಗಳನ್ನು ನಿಷೇಧಿಸುವುದು ಮತ್ತು ಸ್ಮಗ್ ಗನ್‌ಗಳನ್ನು ಅಳವಡಿಸುವುದು ಸೇರಿದಂತೆ ತಮ್ಮ ಸರ್ಕಾರ ಕೈಗೊಂಡ ಇತರ ಕ್ರಮಗಳನ್ನು ವಿವರಿಸಿದರು.

ಕಳೆದ ಕೆಲವು ವರ್ಷಗಳಿಂದ ಮಾಲಿನ್ಯದ ವಿರುದ್ಧ ಹೋರಾಡುವಲ್ಲಿ ಅರವಿಂದ್ ಕೇಜ್ರಿವಾಲ್ ಸರ್ಕಾರದ ಪ್ರಮುಖ ಕ್ರಮವಾಗಿರುವ ಬೆಸ-ಸಮ ನಿಯಮವು ಈಗ ದೀಪಾವಳಿಯ ಮರುದಿನ ನವೆಂಬರ್ 13 ರಂದು ಒಂದು ವಾರದವರೆಗೆ ಜಾರಿಗೆ ಬರಲಿದೆ.

ಈ ನಿಯಮದ ಅಡಿಯಲ್ಲಿ, ಬೆಸ-ಸಂಖ್ಯೆಯಲ್ಲಿ ಕೊನೆಗೊಳ್ಳುವ ನೋಂದಣಿ ಸಂಖ್ಯೆಗಳನ್ನು ಹೊಂದಿರುವ ವಾಹನಗಳನ್ನು ಮಾತ್ರ ಬೆಸ-ಸಂಖ್ಯೆಯ ದಿನಗಳಲ್ಲಿ ದೆಹಲಿ ರಸ್ತೆಗಳಲ್ಲಿ ಅನುಮತಿಸಲಾಗುವುದು ಮತ್ತು ಸಮ-ಸಂಖ್ಯೆಯ ದಿನಗಳಲ್ಲಿ ಸಮ ಅಂಕಿಗಳನ್ನು ಹೊಂದಿರುವ ವಾಹನಗಳನ್ನು ಅನುಮತಿಸಲಾಗುತ್ತದೆ.

ನವೆಂಬರ್ 20ರ ನಂತರ ಬೆಸ-ಸಮ ನಿಯಮವನ್ನು ವಿಸ್ತರಿಸುವ ಅಗತ್ಯವನ್ನು ನಂತರ ಪರಿಶೀಲಿಸಲಾಗುವುದು ಎಂದು ಸಚಿವರು ಹೇಳಿದರು.

ಒಟ್ಟಾರೆ ವಾಯು ಗುಣಮಟ್ಟ ಸೂಚ್ಯಂಕವು (AQI) ಇಂದು ಬೆಳಿಗ್ಗೆ ದೆಹಲಿಯಲ್ಲಿ 488 ರಷ್ಟು ದಾಖಲಾಗಿದೆ. ಇದು ವಿಶ್ವ ಆರೋಗ್ಯ ಸಂಸ್ಥೆಯು ನಿಗದಿಪಡಿಸಿದ ಮೇಲ್ಮಟ್ಟಕ್ಕಿಂತ ಹೆಚ್ಚು ಎಂದು ಹೇಳಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!