ಹೊಸದಿಗಂತ ಡಿಜಿಟಲ್ ಡೆಸ್ಕ್:
ಒಡಿಶಾದ ಬಾಲಸೋರ್ ಜಿಲ್ಲೆಯಲ್ಲಿ ಮೂರು ರೈಲು ಅಪಘಾತದಲ್ಲಿ ಗಾಯಗೊಂಡಿದ್ದ ಪ್ರಯಾಣಿಕರು ಮತ್ತೆ ರಸ್ತೆ ಅಪಘಾತಕ್ಕೆ ಒಳಗಾಗಿದ್ದಾರೆ. ಬಸ್ ಅಪಘಾತದಲ್ಲಿ ಗಾಯಾಳುಗಳು ಮತ್ತಷ್ಟು ತತ್ತರಿಸುವಂತಾಗಿದೆ.
ರೈಲು ಅಪಘಾತದಲ್ಲಿ ಗಾಯಗೊಂಡವರನ್ನು ಕರೆದೊಯ್ಯುತ್ತಿದ್ದ ಬಸ್‌ವೊಂದು ಪಶ್ಚಿಮ ಬಂಗಾಳದ ಮೇದಿನಿಪುರದಲ್ಲಿ ಅಪಘಾತಕ್ಕೀಡಾಗಿದೆ. ಬಸ್ ಪಿಕಪ್ ವಾಹನಕ್ಕೆ ಡಿಕ್ಕಿ ಹೊಡೆದು ಬಸ್‌ನಲ್ಲಿದ್ದ ಪ್ರಯಾಣಿಕರು ಗಾಯಗೊಂಡಿದ್ದಾರೆ.
ಮಾಹಿತಿ ಪಡೆದ ಪೊಲೀಸರು ತಕ್ಷಣ ಸ್ಪಂದಿಸಿ ಗಾಯಾಳುಗಳನ್ನು ಚಿಕಿತ್ಸೆಗಾಗಿ ವಿವಿಧ ಆಸ್ಪತ್ರೆಗಳಿಗೆ ರವಾನಿಸಿದ್ದಾರೆ. ರೈಲು ಅಪಘಾತದಿಂದ ಪಾರಾಗಿ ಗಾಯಾಳುಗಳೊಂದಿಗೆ ತಮ್ಮ ಊರಿಗೆ ತೆರಳುತ್ತಿದ್ದ ಪ್ರಯಾಣಿಕರು ಮತ್ತೊಮ್ಮೆ ಬಸ್ ಅಪಘಾತದಲ್ಲಿ ಗಾಯಗೊಂಡಿರುವುದು ಮನಕಲಕುವಂತಿದೆ.
ಶುಕ್ರವಾರ ಒಡಿಶಾದ ಬಾಲಸೋರ್ ಬಳಿ ಲೂಪ್ ಲೈನ್‌ನಲ್ಲಿ ಶಾಲಿಮಾರ್-ಚೆನ್ನೈ ಕೋರಮಂಡಲ್ ಎಕ್ಸ್‌ಪ್ರೆಸ್ ರೈಲು ಗೂಡ್ಸ್ ರೈಲಿಗೆ ಡಿಕ್ಕಿ ಹೊಡೆದಿದೆ. ಜೊತೆಗೆ ಕೆಲವೇ ನಿಮಿಷಗಳಲ್ಲಿ ಮುಖ್ಯ ಮಾರ್ಗದಲ್ಲಿ ಬಂದ ಯಶವಂತಪುರ-ಹೌರಾ ಎಕ್ಸ್ ಪ್ರೆಸ್ ಹಳಿ ಮೇಲೆ ಬಿದ್ದ ಕೋರಮಂಡಲ್ ಎಕ್ಸ್ ಪ್ರೆಸ್ ಬೋಗಿಗಳಿಗೆ ಡಿಕ್ಕಿ ಹೊಡೆದು ಹಳಿ ತಪ್ಪಿದವು. ಈ ಅಪಘಾತದಲ್ಲಿ ಇಲ್ಲಿಯವರೆಗೆ 288 ಜನರು ಸಾವನ್ನಪ್ಪಿದ್ದು, ಸಾವಿರಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ.