ಹೊಸದಿಗಂತ ಡಿಜಿಟಲ್ ಡೆಸ್ಕ್:
ಒಡಿಶಾದ ರೈಲು ದುರಂತ ಸ್ಥಳಕ್ಕೆ ಪ್ರಧಾನಿ ಮೋದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಈ ವೇಳೆ ರೈಲ್ವೇ ಸಚಿವ ಅಶ್ವಿನಿ ವೈಷ್ಣವ್ ಹಾಗೂ ರೈಲು ಅಧಿಕಾರಿಗಳ ಜೊತೆ ಅಪಘಾತದ ಮಾಹಿತಿ ಪಡೆದುಕೊಂಡ ಪ್ರಧಾನಿ ಮೋದಿ ಅವರು, ಘಟನಾ ಸ್ಥಳದಿಂದ ಪ್ರಧಾನಿ ಮೋದಿ ದೂರವಾಣಿ ಮೂಲಕ ಎನ್‌ಡಿಆರ್‌ಎಫ್ ಹಾಗೂ ರಕ್ಷಣಾ ತಂಡಗಳ ಮುಖ್ಯಸ್ಥರ ಜೊತೆಗೆ ಮಾತನಾಡಿದ್ದಾರೆ.
ಸುಮಾರು 40 ನಿಮಿಷಗಳ ಕಾಲ ಘಟನಾ ಸ್ಥಳದಲ್ಲಿ ಪರಿಶೀಲನೆ ನಡೆಸಿದ ಮೋದಿ, ಬಳಿಕ ಕಟಕ್‌ಗೆ ತೆರಳಿದ್ದಾರೆ. ಆಸ್ಪತ್ರೆ ದಾಖಲಾಗಿರುವ ಗಾಯಾಳುಗಳನ್ನು ಭೇಟಿ ಮಾಡಿ ಸಾಂತ್ವನ ಹೇಳಿದ್ದಾರೆ. ಗಾಯಾಳುಗಳಿಗೆ ಎಲ್ಲಾ ನೆರವು ನೀಡುವುದಾಗಿ ಮೋದಿ ಹೇಳಿದ್ದಾರೆ. ಧೈರ್ಯವಾಗಿರಿ, ಸರ್ಕಾರ ಎಲ್ಲಾ ನೆರವು ನೀಡಲಿದೆ ಎಂದಿದ್ದಾರೆ.
ನಿನ್ನೆ ರಾತ್ರಿಯಿಂದ ಆರಂಭಗೊಂಡ ರಕ್ಷಣಾ ಕಾರ್ಯ ಇದೀಗ ಅಂತ್ಯಗೊಂಡಿದೆ. ಭೀಕರ ಅಪಘಾತದಲ್ಲಿ 261 ಮಂದಿ ಮೃತಪಟ್ಟಿದ್ದಾರೆ. ಇನ್ನು 900ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಇದರಲ್ಲಿ 300ಕ್ಕೂ ಹೆಚ್ಚು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ.
ಸತತ ಕಾರ್ಯಾಚರಣೆ ಹಾಗೂ ರಕ್ಷಣಾ ಕಾರ್ಯ ಅಂತ್ಯಗೊಂಡಿದೆ ಎಂದು ಕೇಂದ್ರ ರೈಲ್ವೇ ಸಚಿವಾಲಯ ಮಾಹಿತಿ ನೀಡಿದೆ. ಸದ್ಯ ರಕ್ಷಣಾ ಕಾರ್ಯ ಮುಗಿಸಿರುವ ತಂಡಗಳು ಇದೀಗ ಜೆಸಿಬಿ, ಕ್ರೇನ್ ಬಳಸಿ ರೈಲು ಬೋಗಿಗಳನ್ನು ಪಕ್ಕಕ್ಕೆ ಸರಿಸುವ ಕಾರ್ಯ ನಡೆಯುತ್ತಿದೆ. ಇದಾದ ಬಳಿಕ ರೈಲು ಹಳಿಗಳ ದುರಸ್ತಿ ಕಾರ್ಯಗಳು ನಡೆಯಲಿದೆ .