ಸಹಕಾರ ಸಂಘಗಳ ತೆರಿಗೆ ಇಳಿಕೆಯಿಂದ ಗ್ರಾಮೀಣ ಜನತೆಯ ಆರ್ಥಿಕ ಪರಿಸ್ಥಿತಿ ಸುಧಾರಣೆ: ಸಚಿವ ಸೋಮಶೇಖರ್

ಹೊಸ ದಿಗಂತ ವರದಿ, ಮೈಸೂರು:

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಇಂದು ಮಂಡಿಸಿದ ಬಜೆಟ್ ದೇಶದ ಆರ್ಥಿಕ ವ್ಯವಸ್ಥೆ ಚೇತರಿಕೆಗೆ ಪೂರಕವಾದ ವಾತಾವರಣ ನಿರ್ಮಿಸುವ, ಗ್ರಾಮೀಣ ಮೂಲ ಸೌಕರ್ಯಕ್ಕೆ ಒತ್ತು ನೀಡುವ ಜನಪರ ಬಜೆಟ್‌ಆಗಿದೆ ಎಂದು ಸಹಕಾರ ಸಚಿವರು ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಹೇಳಿದರು.
ಕೇಂದ್ರ ಸರ್ಕಾರದ ಬಜೆಟ್ ಕುರಿತಂತೆ ಪ್ರತಿಕ್ರಿಯಿಸಿರುವ ಅವರು, ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ದೂರದೃಷ್ಟಿಯ ಬಜೆಟ್ ಇದಾಗಿದೆ. ಜನಸಾಮಾನ್ಯರ ಜೀವನ ಮಟ್ಟ ಸುಧಾರಿಸುವಂತಹ ಬಜೆಟ್ ನಲ್ಲಿ ಉದ್ಯೋಗ ಸೃಷ್ಟಿ, ಬಂಡವಾಳ ಸೃಷ್ಟಿಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ ಎಂದು ತಿಳಿಸಿದ್ದಾರೆ.
ಸಹಕಾರ ಸಂಘಗಳ ತೆರಿಗೆಯನ್ನು ಕೇಂದ್ರ ಸರ್ಕಾರ ಇಳಿಕೆ ಮಾಡಿದೆ. ಪ್ರಸ್ತುತ ಸಹಕಾರ ಸಂಘಗಳು ಪಾವತಿಸುತ್ತಿದ್ದ 18% ತೆರಿಗೆಯನ್ನು 15%ಗೆ ಇಳಿಕೆ ಮಾಡಿದೆ. ಒಂದು ಕೋಟಿಗಿಂತ ಹೆಚ್ಚು ಮತ್ತು 10 ಕೋಟಿ ರೂ.ವರೆಗಿನ ಆದಾಯ ಹೊಂದಿರುವ ಸಹಕಾರ ಸಂಘಗಳ ಮೇಲಿನ ಸರ್ ಚಾರ್ಜ್ ಅನ್ನು 12% ನಿಂದ 7%ಗೆ ಇಳಿಕೆ ಮಾಡುವುದಾಗಿ ಕೇಂದ್ರ ಹಣಕಾಸು ಸಚಿವರಾದ ನಿರ್ಮಲಾ ಸೀತಾರಾಮನ್ ಅವರು ಬಜೆಟ್ ನಲ್ಲಿ ಪ್ರಸ್ತಾಪಿಸಿದ್ದಾರೆ.
ಇದರಿಂದಾಗಿ ಸಹಕಾರ ಸಂಘಗಳು ಮತ್ತು ಸಂಘದ ಸದಸ್ಯರುಗಳ ಆದಾಯ ಹೆಚ್ಚಳಕ್ಕೆ ಸಹಕಾರಿಯಾಗಲಿದೆ. ಬಹುಪಾಲು ಸದಸ್ಯರು ಗ್ರಾಮೀಣ ಭಾಗದವರಾದ್ದರಿಂದ ಅವರ ಆರ್ಥಿಕ ಪರಿಸ್ಥಿತಿ ಕೂಡ ಸುಧಾರಿಲಿದೆ ಎಂದು ಹೇಳಿದ್ದಾರೆ.
ಕೋವಿಡ್ ನಿಂದ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ದೇಶದ ಅರ್ಥವ್ಯವಸ್ಥೆಯನ್ನು ಸರಿದಾರಿಗೆ ತರುವುದನ್ನು ಕೇಂದ್ರಿಕರಿಸಿರುವ ಬಜೆಟ್ ಇದಾಗಿದೆ. ಈ ಬಾರಿಯ ಬಜೆಟ್ ನಿಂದ ದೇಶದ ಆರ್ಥಿಕ ಪ್ರಗತಿ ಸಾಧಿಸಲಿದೆ.
ಕಸ್ಟಮ್ಸ್ ಸುಂಕ ಕಡಿತದಿಂದ ಚಿನ್ನಾಭರಣಗಳ ಬೆಲೆ ಇಳಿಕೆಯಾಗಲಿದೆ. ಕೃಷಿಗೆ ಆರ್ಥಿಕ ನೆರವು ನೀಡುವುದು, ನದಿ ಜೋಡಣೆಯಂತಹ ಹತ್ತಾರು ಯೋಜನೆಗಳನ್ನು ಘೋಷಿಸುವ ಮೂಲಕ ಜನಪರ ಬಜೆಟ್ ಅನ್ನು ಮಂಡಿಸಲಾಗಿದೆ ಎಂದು ಸಚಿವರು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!