Wednesday, November 30, 2022

Latest Posts

ನ. 19 -20 ರಂದು ಮಂಗಳೂರಿನ ಸಂಘನಿಕೇತನದಲ್ಲಿ ಬೃಹತ್ ವಿದ್ಯಾರ್ಥಿ ಸಮಾವೇಶ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕನ್ನಡ ಮಾಧ್ಯಮದಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಗಳ ಆತ್ಮವಿಶ್ವಾಸ ವೃದ್ಧಿ ಹಾಗೂ ಕನ್ನಡ ಶಾಲೆಗಳನ್ನು ಉಳಿಸುವ ನಿಟ್ಟಿನಲ್ಲಿ ಅಪೂರ್ವ ಪ್ರಯತ್ನವೊಂದಕ್ಕೆ ರಾಜ್ಯದಲ್ಲೇ ಮೊದಲ ಬಾರಿಗೆ ಮಂಗಳೂರಿನ ಕೇಶವ ಸ್ಮೃತಿ ಸಂವರ್ಧನ ಸಮಿತಿ ಮುಂದಾಗಿದೆ.

ವಿದ್ಯಾರ್ಥಿ ಸಮುದಾಯದಲ್ಲಿ ಭಾಷೆ, ಸಾಹಿತ್ಯ, ಸಂಸ್ಕೃತಿ ಕುರಿತ ಅರಿವು ವಿಸ್ತರಿಸುವ ಉದ್ದೇಶದಿಂದ ನ. 19 ಮತ್ತು 20 ರಂದು ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನ ಸಂಘನಿಕೇತನದಲ್ಲಿ ಬೃಹತ್ ವಿದ್ಯಾರ್ಥಿ ಸಮಾವೇಶ ಆಯೋಜಿಸಲಾಗಿದೆ. ‘ಕನ್ನಡ ಶಾಲಾ ಮಕ್ಕಳ ಹಬ್ಬ- ನಾಡು ನುಡಿ ಸಂಸ್ಕೃತಿ ಸಮಾವೇಶ’ದ ಮೂಲಕ ಕನ್ನಡ ಮಾಧ್ಯಮ ಶಾಲಾ ವಿದ್ಯಾರ್ಥಿಗಳ ಮನೋಸ್ಥೈರ್ಯ ಹೆಚ್ಚಿಸುವ ಕಾರ್ಯಕ್ಕೆ ಮುಂದಡಿ ಇಡಲಾಗಿದೆ.

15 ಸಾವಿರ ವಿದ್ಯಾರ್ಥಿಗಳು
ಕನ್ನಡ ಶಾಲಾ ಮಕ್ಕಳ ಹಬ್ಬ ಸ್ವಾಗತ ಸಮಿತಿ ಅಧ್ಯಕ್ಷಡಾ.ಎಂ. ಮೋಹನ ಆಳ್ವ ಸಮಾವೇಶದ ವಿವರವನ್ನು ಗುರುವಾರ ಸುದ್ದಿಗೋಷ್ಠಿಯಲ್ಲಿ ನೀಡಿದರು. ಎರಡು ದಿನಗಳ ಈ ಸಮಾವೇಶದಲ್ಲಿ ದಕ್ಷಿಣ ಕನ್ನಡ ಉಡುಪಿ ಮತ್ತು ಕಾಸರಗೋಡು ಜಿಲ್ಲೆಯ 5ನೇ ತರಗತಿ ಮೇಲ್ಪಟ್ಟ 10ನೇ ತರಗತಿ ತನಕದ (ಹಿರಿಯ ಪ್ರಾಥಮಿಕ ಮತ್ತು ಪ್ರೌಢ ಶಾಲೆಯ) 15 ಸಾವಿರದಷ್ಟು ವಿದ್ಯಾರ್ಥಿಗಳು ಭಾಗವಹಿಸುವ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ನ. 19ರಂದು ಬೆಳಗ್ಗೆ 10ಕ್ಕೆ ಮಣ್ಣಗುಡ್ಡ ಬಳಿಯ ಶ್ರೀ ಗೋಕರ್ಣನಾಥೇಶ್ವರ ಕಾಲೇಜು ಮೈದಾನದಿಂದ ಸಂಘನಿಕೇತನದವರೆಗೆ ಮೆರವಣಿಗೆ ನಡೆಯಲಿದೆ. ಬೆಳಗ್ಗೆ 10. 30ಕ್ಕೆ ಕನ್ನಡ ನಾಡಿನ ಇತಿಹಾಸ, ಭಾಷೆ, ಸಾಹಿತ್ಯದ ಮಹತ್ವ, ರಾಷ್ಟ್ರೀಯ ಮತ್ತು ರಾಜ್ಯದ ಮಹನೀಯ ಚಿಂತನೆಗಳ ಸಾಕ್ಷ್ಯಚಿತ್ರ ಪ್ರದರ್ಶನ, ಪುಸ್ತಕ ಪ್ರದರ್ಶನದ ಪ್ರದರ್ಶಿನಿಗೆ ಚಾಲನೆ ದೊರಕಲಿದೆ. 11 ಗಂಟೆಗೆ ಬೃಹತ್ ವಿದ್ಯಾರ್ಥಿ ಸಮಾವೇಶನ್ನು ಕನ್ನಡ ಸಾಹಿತ್ಯ ಪರಿಷತ್ ರಾಜ್ಯಾಧ್ಯಕ್ಷ ಮಹೇಶ್ ಜೋಷಿ ಉದ್ಘಾಟಿಸುವರು. ನಾಡಿನ ಗಣ್ಯ ಸಾಧಕರು ಉಪಸ್ಥಿತರಿರುವರು. ನಂತರ ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಮತ್ತು ಕುದ್ರೋಳಿ ಗಣೇಶ್‌ರಿಂದ ಜಾದೂ ಪ್ರದರ್ಶನ ನಡೆಯಲಿದೆ ಎಂದರು.

ವಿವಿಧ ಗೋಷ್ಠಿ
ಮುಖ್ಯ ಸಭಾಂಗಣಕ್ಕೆ ಪಂಜೆ ಮಂಗೇಶ್ ರಾವ್ ಅವರ ಹೆಸರು, 2ನೇ ವೇದಿಕೆಗೆ ಶಿವರಾಮ ಕಾರಂತರ ಹೆಸರು ಇಡಲಾಗಿದೆ. ಇದರಲ್ಲಿ ಶಿಕ್ಷಕರ ಜತೆ ಸಂವಾದವನ್ನು ರೋಹಿತ್ ಚಕ್ರತೀರ್ಥ ನಡೆಸಿಕೊಡಲಿದ್ದಾರೆ. ಕನ್ನಡ ಮತ್ತು ರಾಷ್ಟ್ರೀಯತೆ ಗೋಷ್ಠಿಯನ್ನು ರಾಜೇಶ್ ಪದ್ಮಾರ್, ಕನ್ನಡ ಶಾಲೆಯಲ್ಲಿ ಓದಿದವರು ಸ್ಪರ್ಧಾತ್ಮಕ ಪರೀಕ್ಷೆಯನ್ನು ಎದುರಿಸುವ ಬಗ್ಗೆ ಐಎಎಸ್ ಅಕಾರಿ ನಂದಿನಿ ಸಂವಾದ ನೆರವೇರಿಸಲಿದ್ದಾರೆ. 3ನೇ ವೇದಿಕೆ ‘ಕುದ್ಮುಲ್ ರಂಗ ರಾವ್ ವೇದಿಕೆ’. ಈ ವೇದಿಕೆಯಲ್ಲಿ ವಿದ್ಯಾರ್ಥಿಗಳಿಗೆ ನಾಯಕತ್ವ ತರಬೇತಿ, ವೃತ್ತಿ ಮಾರ್ಗದರ್ಶನ, ಪ್ರತಿಭಾ ಪ್ರದರ್ಶನ ನಡೆಯಲಿದೆ ಎಂದು ಅವರು ಹೇಳಿದರು.

ಕನ್ನಡ ಶಾಲಾ ಯಶೋಗಾಥೆ
ನ. 20ರಂದು ಮೊದಲ ವೇದಿಕೆಯಲ್ಲಿ ಜೀವನ್‌ರಾಮ್ ಸುಳ್ಯ ಇವರಿಂದ ರಂಗಾಭಿನಯ ಹಾಗೂ ರಂಗಗೀತೆಗಳು, ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ. 2ನೇ ವೇದಿಕೆಯಲ್ಲಿ ಕನ್ನಡ ಎಂದರೆ ಬರಿ ನುಡಿ ಅಲ್ಲ ಎಂಬ ಗೋಷ್ಠಿಯನ್ನು ಚಕ್ರವರ್ತಿ ಸೂಲಿಬೆಲೆ, ಕನ್ನಡ ಶಾಲೆಗಳನ್ನು ಕಟ್ಟಿ ಬೆಳೆಸಿದ ಮಹನೀಯರಾದ ಡಾ. ಪ್ರಭಾಕರ ಭಟ್ ಕಲ್ಲಡ್ಕ, ಡಾ. ಮೋಹನ್ ಆಳ್ವ ಮತ್ತು ಚಂದ್ರಶೇಖರ ದಾಮ್ಲೆಯವರಿಂದ ಕನ್ನಡ ಶಾಲಾ ಯಶೋಗಾಥೆಯ ಗೋಷ್ಠಿಯು ಶಿಕ್ಷಕ ಹಾಗೂ ಪೋಷಕರೊಂದಿಗೆ ನಡೆಯಲಿದೆ. ಮುನಿರಾಜ ರೆಂಜಾಳ ಇವರಿಂದ ಜೀವನ ಮೌಲ್ಯ ಗೋಷ್ಠಿ, ನವದಂಪತಿ ಸಮಾವೇಶ ನಡೆಯಲಿದೆ.

ಹಬ್ಬದ ವಾತಾವರಣ
3ನೇ ವೇದಿಕೆಯಲ್ಲಿ ಪ್ರತಿಭಾ ಪ್ರದರ್ಶನ ನಡೆಯಲಿದೆ. ನ. 20ರಂದು ಮಧ್ಯಾಹ್ನ 3  ಗಂಟೆಗೆ ಸಮಾರೋಪ ಸಮಾರಂಭ ನಡೆಯಲಿದೆ. ರಾಜ್ಯ ವಿಧಾನಸಭೆ ಅಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಸಮಾರೋಪ ಭಾಷಣ ನಡೆಸುವರು. ವಿದ್ಯಾರ್ಥಿಗಳಿಗೆ ವಿವಿಧ ಆಟೋಟಗಳು, ತಿಂಡಿ ತಿನಿಸುಗಳು ಜತೆಗೆ ಹಬ್ಬದ ವಾತಾವರಣ ನಿರ್ಮಾಣವಾಗಲಿದೆ ಎಂದು ಡಾ. ಆಳ್ವ ಮಾಹಿತಿ ನೀಡಿದರು.
ಕನ್ನಡ ಶಾಲಾ ಮಕ್ಕಳ ಹಬ್ಬ ಸ್ವಾಗತ ಸಮಿತಿ ಉಪಾಧ್ಯಕ್ಷರಾದ ಪ್ರೊ. ಎಂ.ಬಿ. ಪುರಾಣಿಕ್, ಕೆ.ಸಿ. ನಾಯಕ್, ಡಾ. ಸುಧಾಕರ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ದೇವಿಪ್ರಸಾದ್ ಶೆಟ್ಟಿ, ಸಹ ಕಾರ್ಯದರ್ಶಿ ರಮೇಶ್ ಉಪಸ್ಥಿತರಿದ್ದರು.

ಈ ಸಂದರ್ಭ ಸಮಾವೇಶದ ಕರಪತ್ರ ಬಿಡುಗಡೆ ಮಾಡಲಾಯಿತು.

ಸಮಾವೇಶದ ವಿಶೇಷತೆ
ಹಿರಿಯರು, ಸಾಧಕರು ಭಾಗವಹಿಸುವ ಉದ್ಘಾಟನೆ ಹಾಗೂ ಸಮಾರೋಪ ಸಮಾರಂಭ. ಸಾಹಿತ್ಯ, ಶಿಕ್ಷಣ, ಸಂಸ್ಕಾರ, ಸಂವಾದ, ವಿಜ್ಞಾನ ಕುರಿತ ಚಿಂತನಗೋಷ್ಠಿ. ವಿದ್ಯಾರ್ಥಿಗಳಿಂದ ನಿರಂತರ ಪ್ರತಿಭಾ ಪ್ರದರ್ಶನ. ಜೀವನ ಮೌಲ್ಯ, ವೃತ್ತಿ ಮಾರ್ಗದರ್ಶನ, ಯಶಸ್ವಿ ಕನ್ನಡ ಶಾಲೆಗಳ ಯಶೋಗಾಥೆ, ರಂಗಾಭಿನಯ, ಜಾದೂ ಪ್ರದರ್ಶನ, ಶಿಕ್ಷಕರ, ಪೋಷಕರ ಸಭೆ, ಸರಕಾರಿ ಶಾಲೆಗಳ ಎಸ್‌ಡಿಎಂಸಿ ಸದಸ್ಯರ ಸಭೆ, ಸಾಂಸ್ಕೃತಿಕ ಕಾರ್ಯಕ್ರಮ. ನವದಂಪತಿಗಳಿಗೆ ವಿಶೇಷ ಚಿಂತನಾ ಗೋಷ್ಠಿ.

ಆಕರ್ಷಕ ಪ್ರದರ್ಶಿನಿ
ಸಮಾವೇಶದಲ್ಲಿ ಕನ್ನಡ ನಾಡಿನ ಇತಿಹಾಸ, ಭಾಷೆ, ಸಾಹಿತ್ಯದ ಮಹತ್ವ, ದೇಶಿಯ ತಿಂಡಿ ತಿನಿಸುಗಳ ಪರಿಚಯ, ರಾಷ್ಟ್ರೀಯ ಹಾಗೂ ರಾಜ್ಯದ ಮಹನೀಯರ ಚಿಂತನೆಗಳ ಸಾಕ್ಷ್ಯಚಿತ್ರ ಪ್ರದರ್ಶನ, ಪುಸ್ತಕ ಪ್ರದರ್ಶನ ಹಾಗೂ ಮಾರಾಟ ಇರಲಿದೆ.

ಕನ್ನಡ ಶಾಲಾ ಮಕ್ಕಳ ಹಬ್ಬ ಸ್ವಾಗತ ಸಮಿತಿ
ಡಾ.ಎಂ. ಮೋಹನ ಆಳ್ವ (ಅಧ್ಯಕ್ಷ), ಡಾ.ಎಂ.ಪಿ. ಶ್ರೀನಾಥ್, ರಂಗನಾಥ ಭಟ್, ಪ್ರೊ. ಎಂ.ಬಿ. ಪುರಾಣಿಕ್, ಡಾ.ಕೆ.ಸಿ. ನಾಯಕ್, ಕಿಶೋರ್‌ಕುಮಾರ್ ಕೊಡ್ಗಿ, ಪ್ರದೀಪ ಕುಮಾರ ಕಲ್ಕೂರ, ಡಾ. ಪದ್ಮನಾಭ ಕಾಮತ್, ಹರಿಕೃಷ್ಣ ಪುನರೂರು, ಡಾ. ಸುಧಾಕರ ಶೆಟ್ಟಿ (ಉಪಾಧ್ಯಕ್ಷರು), ದೇವಿಪ್ರಸಾದ ಶೆಟ್ಟಿ (ಪ್ರಧಾನ ಕಾರ್ಯದರ್ಶಿ), ರಮೇಶ್ (ಸಹ ಕಾರ್ಯದರ್ಶಿ), ಸಿಎ ಶಾಂತಾರಾಮ್ ಶೆಟ್ಟಿ (ಕೋಶಾಧಿಕಾರಿ).

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!