Friday, August 19, 2022

Latest Posts

ಲೋಕ ಹಿತದ ನಿಸ್ವಾರ್ಥ ಸೇವಕ ಗುರೂಜಿ: ಸು.ರಾಮಣ್ಣ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಯಾರು ಲೋಕ ಹಿತಕ್ಕೆ ಬದುಕುತ್ತಾರೊ ಅವರು ತಪಸ್ವಿಗಳಾಗುತ್ತಾರೆ. ಕಾಲ ಕಾಲಕ್ಕೆ ಅಂತಃ ತಪಸ್ವಿಗಳನ್ನು ಭಾರತ ನೀಡಿದೆ. ಅದೆ‌ ಕೆಲಸವನ್ನು ಸಂಘ ಮುಂದುವರೆಸುತ್ತಿದೆ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಜೇಷ್ಠ ಪ್ರಚಾರಕ ಸು. ರಾಮಣ್ಣ ಹೇಳಿದರು.

ನಗರದ ಗೋಕುಲ ರಸ್ತೆಯ ಕೇಶವಕುಂಜ ಸಂಘ ಕಾರ್ಯಾಲಯದಲ್ಲಿ ಶನಿವಾರ ಲೋಕಹಿತ ಟ್ರಸ್ಟ್ ಆಯೋಜಿಸಿದ್ದ ರಾಷ್ಟ್ರತಪಸ್ವಿ ಶ್ರೀ ಗುರೂಜಿ ಪುಸ್ತಕ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಮಾಧವರಾವ್ ಗೋಳ್ವಲಕರ್ (ಗುರೂಜಿ) ಅವರು 33 ವರ್ಷಗಳ ಕಾಲ ಸಂಘದ ನೇತೃತ್ವ ವಹಿಸಿ 75ಕ್ಕಿಂತ ಹೆಚ್ಚು ಬಾರಿ ಇಡೀ ದೇಶವನ್ನು ಸಂಚರಿಸಿ ಸಂಘಟನೆಯನ್ನು ಬೆಳೆಸಿದರು. ಸಂಘದಲ್ಲಿ ವ್ಯಕ್ತಿಯ ವೈಭವಿಕರಣ ಇಲ್ಲ. ವ್ಯಕ್ತಿ ಕೇಂದ್ರಿತ ಕೆಲಸ ನಡೆಯುವುದಿಲ್ಲ. ಸಂಘ ಸ್ಥಾಪಕ ಡಾಕ್ಟರ್ ಕೇಶವ ಹೆಡಗೆವಾರರ ಧ್ಯೇಯ, ಆದರ್ಶಗಳನ್ನು ಮುಂದುವರೆಸುವಲ್ಲಿ ಗುರೂಜಿ ಅವರು ಯಶಸ್ವಿಯಾಗಿದ್ದಾರೆ ಎಂದರು.

ದೇಶದ ಅತಿ ದೊಡ್ಡ ಸಂಘಟನೆಯನ್ನು ಮುನ್ನಡೆಸುತ್ತಿದ್ದರೂ ಸಹ ಗುರೂಜಿ ಎಂದಿಗೂ ಪ್ರಶಂಸೆಗೆ ಪ್ರೋತ್ಸಾಹಿಸಲಿಲ್ಲ. ಅದೊಂದು ಪದವಿ ಎನ್ನದೆ ಜವಾಬ್ದಾರಿ ಎಂದು ಭಾವಿಸಿದ್ದರು. ಇದು ಅವರ ವ್ಯಕ್ತಿತ್ವದ ವಿಶೇಷತೆ. ಗುರೂಜಿಯವರ ಗುಣಗಳು ಸದಾ ಅನುಕರಣೀಯ. ನೆಹರು ಅವರು ಗಾಂಧಿ ಹತ್ಯೆಯ ಮಿಥ್ಯಾರೋಪ ಸಂಘದ ಮೇಲೆ ಹೊರೆಸಿದಾಗ, ಪ್ರಾಣಾಪಾಯವಿದ್ದರೂ ಗುರೂಜಿ ಧೃತಿಗೆಡಲಿಲ್ಲ.‌ ಯಾವುದೇ ಸಂದರ್ಭದಲ್ಲೂ ಶಾಂತರಾಗಿರಿ ಎಂದು ಜೈಲಿನಿಂದಲೆ ಸ್ವಯಂಸೇವಕರಿಗೆ ಸಂದೇಶ ಕಳಿಸಿದ್ದರು ಎಂದರು.

ತಮ್ಮ ಸಂಪೂರ್ಣ ಜೀವನದುದ್ದಕ್ಕೂ ಗುರೂಜಿ ಅವರು ಧ್ಯೇಯಕ್ಕಾಗಿ ಬದುಕಿದರೆ ಹೊರತು ಪ್ರಶಂಸೆಗೆ ಬಲಿಯಾಗಲಿಲ್ಲ. ಗಾಂಧಿ ಹತ್ಯೆಯ ಆರೋಪದಿಂದ ಸಂಘ ಮುಕ್ತವಾದಾಗಲೂ ಗುರೂಜಿ ಆರೋಪ ಹೊರಿಸದವರ ಮೇಲೆ ಒಂದೂ ಅಪಶಬ್ದವನ್ನೂ ಸಹ ಎತ್ತಲಿಲ್ಲ ಬದಲಾಗಿ ಅವರಿಗೆ ಸತ್ಯ ತಿಳಿಸುವ ಪ್ರಯತ್ನ ಮಾಡಿದರು. ಹಿಂದೂ ಸಂಘಟನೆಗೆ ಬಲ ತುಂಬಲು ವಿಶ್ವ ಹಿಂದೂ ಪರಿಷತ್ ಆರಂಭಿಸಿ, ಹಿಂದೂಗಳೆಲ್ಲ ಸೋದರರು ಎಂಬ ಸಂದೇಶ ನೀಡಿದರು. ರಾಷ್ಟ್ರಾಯ ಸ್ವಾಹಾ ರಾಷ್ಟ್ರಾಯ ಇದಂ ನ ಮಮ ಎಂಬ ಉಕ್ತಿಗೆ ಅವರ ಜೀವನ ನಿದರ್ಶನವಾಗಿದೆ ಎಂದು ಹೇಳಿದರು.

ಪುಸ್ತಕ ಬಿಡುಗಡೆಗೊಳಿಸಿದ ಸಮಾಜ ಸೇವಕ ಮರಿಯಪ್ಪ ರಾಮಯ್ಯನವರ ಮಾತನಾಡಿ, ಗುರೂಜಿ ಅವರು ದೇಶ ಸೇವೆಯೆ ಈಶ ಸೇವೆ ಎಂದು ಬಾಳಿ ಬದುಕಿದವರು. ದೇಶದ ಕಾನೂನಿನ ಬಗ್ಗೆ ಅವರಿಗಿದ್ದ ಗೌರವ ಪ್ರಶಂಸನೀಯ. ಅವರ ಆಧ್ಯಾತ್ಮಿಕ ಜ್ಞಾನ, ಸಾಧು ಸಂತರ ಒಡನಾಟ ಅತ್ಯಂತ ಮಹತ್ವದಾಗಿತ್ತು ಎಂದು ಹೇಳಿದರು.

ಇದಕ್ಕೂ ಪೂರ್ವದಲ್ಲಿ ಕೇರಳದ ಸಂಘದ ಜೇಷ್ಠ ಪ್ರಚಾರಕ ರಂಗಾ ಹರಿ ಅವರು ರಚಿಸಿದ ಹಾಗೂ ಕರ್ನಾಟಕದ ಜೇಷ್ಠ ಪ್ರಚಾರಕ ಚಂದ್ರಶೇಖರ ಭಂಡಾರಿ ಅವರು ಅನುವಾದಿಸಿದ “ರಾಷ್ಟ್ರ ತಪಸ್ವಿ ಶ್ರೀ ಗುರೂಜಿ ಪುಸ್ತಕ ಲೋಕಾರ್ಪಣೆಗೊಳಿಸಲಾಯಿತು. ಕರ್ಅನಟಕ ಉತ್ತರ ಪ್ರಾಂತ ಕಾರ್ಯವಾಹ ರಾಘವೇಂದ್ರ ಕಾಗವಾಡ  ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಕರ್ನಾಟಕ ಉತ್ತರ ಪ್ರಾಂತದ ಸಂಘಚಾಲಕ ಖಗೇಶನ ಪಟ್ಟಣಶೆಟ್ಟಿ, ಹಿರಿಯ ವೈದ್ಯ ಡಾ. ಗೋವಿಂದ ನರೇಗಲ್, ಪ್ರಾಂತ ಪ್ರಚಾರಕ ಚ.ರಾ. ನರೇಂದ್ರ, ಪ್ರಾಂತ ಕಾರ್ಯಕಾರಿಣಿ ಸದಸ್ಯ ಶ್ರೀಧರ ನಾಡಗೇರ ಮತ್ತಿತರರು ಪಾಲ್ಗೊಂಡಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss

error: Content is protected !!