ಅಧಿಕಾರಿಗಳು ನೊಂದವರ ಕಷ್ಟ ಆಲಿಸಬೇಕು: ಸಚಿವ ಗೋವಿಂದ ಕಾರಜೋಳ

ಹೊಸದಿಗಂತ ವರದಿ,ಚಿತ್ರದುರ್ಗ:

ಬಸವಣ್ಣನವರು ಜಾತಿರಹಿತ ಸಮಾಜ ನಿರ್ಮಾಣಕ್ಕೆ ೧೨ನೇ ಶತಮಾನದಲ್ಲಿ ಶ್ರಮಿಸಿದರು. ಆದರೆ ಇಂದಿಗೂ ಜಾತಿ ಆಧರಿಸಿ ವ್ಯಕ್ತಿಗಳನ್ನು ಗುರುತಿಸುತ್ತಿರುವುದು ನೋವಿನ ಸಂಗತಿ ಎಂದು ಬೃಹತ್ ನೀರಾವರಿ ಸಚಿವ ಹಾಗೂ ಮಾಜಿ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ವಿಷಾದ ವ್ಯಕ್ತಪಡಿಸಿದರು.
ಶ್ರೀ ಶಿವಶರಣ ಮಾದಾರ ಚೆನ್ನಯ್ಯ ಗುರುಪೀಠದ ವತಿಯಿಂದ ನಗರದ ತರಾಸು ರಂಗ ಮಂದಿರದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಮಾದಿಗ ಸಮುದಾಯದ ನೈತನ ಐಪಿಎಸ್ ಅಧಿಕಾರಿಗಳಿಗೆ ಅಭಿನಂದನಾ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಬಸವಣ್ಣನವರು ವರ್ಗರಹಿತ ಸಮಾಜ ನಿರ್ಮಾಣದ ಕನಸು ಕಂಡರು. ಶೋಷಿತರನ್ನು ಮುಖ್ಯವಾಹಿನಿಗೆ ತರಲು ಹೋರಾಟ ನಡೆಸಿದರು. ಆದರೆ ಇಂದಿಗೂ ಅವರ ಕನಸು ನನಸಾಗಿಲ್ಲ ಎಂದು ನೊಂದು ನುಡಿದರು.
ಮಾದಿಗ ಸಮುದಾಯದ ಐಪಿಎಸ್ ಅಧಿಕಾರಿಗಳಿಗೆ ಇಂದು ಅಭಿನಂದನೆ ಸಲ್ಲಿಸುತ್ತಿರುವುದು ಉತ್ತಮ ಬೆಳವಣಿಗೆ. ಇದು ಇತರರಿಗೆ ಸ್ಫೂರ್ತಿ ಆಗಬೇಕು. ಅಧಿಕಾರಿಗಳು ತಮಗೆ ಸಿಕ್ಕ ಅವಕಾಶವನ್ನು ಸಮರ್ಪಕವಾಗಿ ಬಳಸಿಕೊಂಡು ಪ್ರಾಮಾಣಿಕತೆ, ಶ್ರದ್ಧೆಯಿಂದ ಕೆಲಸ ಮಾಡಬೇಕು. ಸಮಾಜದ ನಾಲ್ಕಾರು ಜನರಿಗೆ ನರವು ನೀಡಬೇಕು. ಅಂದಾಗ ಸಮಾಜದ ಋಣ ತೀರಿಸಿದಂತಾಗುತ್ತದೆ. ನೊಂದು ಪೊಲೀಸ್ ಠಾಣೆಗೆ ಬರುವವರ ಕಷ್ಟ ಆಲಿಸಿ ಅವರಿಗೆ ಅಗತ್ಯ ಸೇವೆ ನೀಡಬೇಕು ಎಂದರು.
ಮಾದಾರ ಚೆನ್ನಯ್ಯ ಸ್ವಾಮೀಜಿ ಹಾಗೂ ಹರಳಯ್ಯ ಸ್ವಾಮೀಜಿ ಮಾದಿಗ ಸಮುದಾಯದ ಎರಡು ಕಣ್ಣುಗಳಿದ್ದಂತೆ. ಅವರ ಮಾರ್ಗದರ್ಶನದಲ್ಲಿ ಎಲ್ಲರೂ ಒಂದಾಗಿ ಸಾಗಬೇಕಿದೆ. ನಮ್ಮ ಹೋರಾಟ ಸದಾ ನಮ್ಮ ಹಕ್ಕುಗಳನ್ನು ಪಡೆಯಲು ಇರಬೇಕೆ ಹೊರತು ಶಿಕ್ಷೆ ಕೊಡಿಸಲು ಅಲ್ಲ. ಶಿಕ್ಷಣ, ಸಂಘಟನೆ ಮೂಲಕ ಸಮುದಾಯ ಮತ್ತಷ್ಟು ಬಲಿಷ್ಠವಾಗಬೇಕು. ಇತ್ತೀಚಿನ ವರ್ಷಗಳಲ್ಲಿ ಅಂಬೇಡ್ಕರ್ ಹೆಸರನ್ನು ಬಳಸಿಕೊಂಡು ಕೆಟ್ಟ ಕೆಲಸ ಮಾಡುವ ಪ್ರವೃತ್ತಿ ಹೆಚ್ಚಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಖಾತೆ ರಾಜ್ಯ ಸಚಿವ ಎ.ನಾರಾಯಣಸ್ವಾಮಿ ಮಾತನಾಡಿ, ಸಮುದಾಯ ಗೋನಾಳ್ ಭೀಮಪ್ಪ ಅವರನ್ನು ಎಂದು ಮರೆಯಬಾರದು. ಅವರಲ್ಲಿದ್ದ ಸಂಸ್ಕಾರ, ಆದರ್ಶ ದೇಶಕ್ಕೆ ಮಾದರಿ. ಸ್ವಾತಂತ್ರ್ಯ ಬಂದು ೭೫ ವರ್ಷವಾದರೂ ಸಹ ಸಮುದಾಯದಿಂದ ಕೇವಲ ಮೂರು ಜನ ಐಎಎಸ್ ಅಧಿಕಾರಿಗಳಿದ್ದಾರೆ. ಇದು ನಿಜಕ್ಕೂ ಸಂತಸದ ಕಾರ್ಯಕ್ರಮವಲ್ಲ. ನಮ್ಮಲ್ಲಿನ ಕೀಳರಿಮೆ ಬಿಟ್ಟು ಹೊರಬಂದು ಶೈಕ್ಷಣಿಕ ಕ್ರಾಂತಿ ಮಾಡಬೇಕೆಂದು ಕರೆ ನೀಡಿದರು.
ಮಾದಾರ ಚೆನ್ನಯ್ಯ ಗುರುಪೀಠದ ಬಸವಮೂರ್ತಿ ಮಾದಾರ ಚೆನ್ನಯ್ಯ ಸ್ವಾಮೀಜಿ ಮಾತನಾಡಿ, ಸಚಿವರಾದ ನಾರಾಯಣಸ್ವಾಮಿ, ಗೋವಿಂದ ಕಾರಜೋಳ ಅವರ ಜತೆಗೂಡಿ ಸಮುದಾಯವನ್ನು ಒಂದು ಪಕ್ಷಕ್ಕೆ ಸಿಮೀತಗೊಳಿಸಲಾಗುತ್ತಿದೆ ಎಂಬ ಮಾತು ಕೇಳಿ ಬಂದಿವೆ. ನಾವು ಸಮುದಾಯವನ್ನು ಒಂದು ಪಕ್ಷಕ್ಕೆ ಸಿಮೀತಗೊಳಿಸಿಲ್ಲ. ಪಕ್ಷಗಳ ಅಧಿಕಾರವನ್ನು ಸದುಪಯೋಗಪಡಿಸಿಕೊಂಡು ಸಮುದಾಯವನ್ನು ಸಂಘಟಿಸಿ ಬೆಳೆಸುತ್ತಿದ್ದೇವೆ ಎಂದು ಸ್ಪಷ್ಟಪಡಿಸಿದರು.
ಐಮಂಗಲದ ಶ್ರೀ ಮಹಾಶರಣ ಹರಳಯ್ಯ ಗುರುಪೀಠದ ಬಸವ ಹರಳಯ್ಯ ಸ್ವಾಮೀಜಿ, ಶಾಸಕರಾದ ಎಂ.ಚಂದ್ರಪ್ಪ, ಟಿ.ರಘುಮೂರ್ತಿ, ಪೂರ್ಣಿಮಾ ಶ್ರೀನಿವಾಸ್, ವಿಧಾನ ಪರಿಷತ್ ಸದಸ್ಯ ಕೆ.ಎಸ್.ನವೀನ್, ಮಾಜಿ ಸಂಸದ ಬಿ.ಎನ್.ಚಂದ್ರಪ್ಪ, ಕಾಂಗ್ರೆಸ್ ಅಸಂಘಟಿತ ಕಾರ್ಮಿಕರ ವಿಭಾಗದ ರಾಜ್ಯಾಧ್ಯಕ್ಷ ಜಿ.ಎಸ್.ಮಂಜುನಾಥ್, ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ಬಿ.ಎಚ್.ಅನಿಲ್ ಕುಮಾರ್, ಮತ್ತಿತರರು ಭಾಗವಹಿಸಿದ್ದರು.
ಕಾರ್ಯಕ್ರಮದಲ್ಲಿ ಐಪಿಎಸ್ ಅಧಿಕಾರಿಗಳಾದ ಆರ್.ಜಯಪ್ರಕಾಶ್, ಡಾ.ಬಿ.ಟಿ.ಕವಿತಾ, ಎಂ.ರಾಜೀವ್ ಇವರನ್ನು ಅಭಿನಂದಿಸಲಾಯಿತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!