May 28, 2026
Thursday, May 28, 2026
spot_img

ಒಲಂಪಿಕ್ ಕ್ರೀಡಾಕೂಟ ಆಯೋಜನೆ? ಕೇಂದ್ರ ಸಚಿವ ಡಾ.ಮನ್ಸೂಕ್ ಮಾಂಡವೀಯ ಹೇಳಿದ್ದೇನು?

ಹೊಸದಿಗಂತ ವರದಿ ವೀರಾಜಪೇಟೆ:

ಮುಂದಿನ ವರ್ಷಗಳಲ್ಲಿ ಒಲಂಪಿಕ್ ಕ್ರೀಡಾಕೂಟ ಆಯೋಜನೆ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಯೋಜನೆ ರೂಪಿಸುತ್ತಿದೆ ಎಂದು ಕೇಂದ್ರ ಸರಕಾರದ ಕ್ರೀಡಾ ಸಚಿವ ಸಚಿವ ಡಾ. ಮನ್ಸೂಕ್ ಮಾಂಡವೀಯ ನುಡಿದರು.

ಕೊಡಗು ಜಿಲ್ಲೆಯ ನಾಪೋಕ್ಲುವಿನಲ್ಲಿ ಆಯೋಜಿತ 26ನೇ ವರ್ಷದ ಕೊಡವ ಕೌಟುಂಬಿಕ ಹಾಕಿ ಪಂದ್ಯಾವಳಿಯ ಫೈನಲ್ ಪಂದ್ಯಾಟದ ಸಭಾ ಕಾರ್ಯಕ್ರಮದಲ್ಲಿ ಶನಿವಾರ ಅವರು ಮಾತನಾಡಿದರು.

ಕ್ರೀಡಾ ಅಕಾಡೆಮಿಗೆ ನೆರವು: ಕೊಡಗಿನಲ್ಲಿ ಕ್ರೀಡಾ ಬೆಳವಣಿಗೆಗೆ ಕೇಂದ್ರ ಕ್ರೀಡಾ ಇಲಾಖೆ ಎಲ್ಲಾ ರೀತಿಯ ಸಹಕಾರ ನೀಡಲಿದೆ. ಜಿಲ್ಲೆಯಲ್ಲಿ ಹಾಕಿ ಅಕಾಡೆಮಿ ಸ್ಥಾಪಿಸಿದ್ದೇ ಆದಲ್ಲಿ ಕೇಂದ್ರ ಸರ್ಕಾರದಿಂದ ಎಲ್ಲಾ ಸೌಲಭ್ಯ ನೀಡಲು ಬದ್ಧವಾಗಿರುವುದಾಗಿ ಅವರು ಘೋಷಿಸಿದರು.
ಕ್ರೀಡೆಯನ್ನು ಕ್ರೀಡಾಪಟುಗಳ ಉತ್ತೇಜನಕ್ಕೆ ಬಳಸಬೇಕೇ ವಿನಹ ರಾಜಕೀಯಕ್ಕೆ ಬಳಸಬಾರದು ಎಂದು ಅಭಿಪ್ರಾಯಪಟ್ಟ ಅವರು, ಗ್ರಾಮೀಣ ಪ್ರದೇಶ ಸೇರಿದಂತೆ ಭಾರತದಾದ್ಯಂತಲಿನ ಕ್ರೀಡಾ ಪ್ರತಿಭೆಗಳನ್ನು ಬೆಳಕಿಗೆ ತರುವಲ್ಲಿ ಎಲ್ಲರೂ ಒಗ್ಗೂಡಬೇಕು. ಎಂದು ಕರೆ ನೀಡಿದರಲ್ಲದೆ, ಪ್ರತಿಭೆ ಎಂಬುದನ್ನು ಗೋಲುಗಳ ಆಧಾರದಲ್ಲಿ ಪರಿಗಣಿಸದೆ, ಕ್ರೀಡಾ ಕೌಶಲ್ಯದ ಆಧಾರದಲ್ಲಿ ಗಮನಿಸಬೇಕೆಂದು ಕಿವಿಮಾತು ಹೇಳಿದರು.

ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಮತ್ತು ವೀರಾಜಪೇಟೆ ಶಾಸಕ ಎ.ಎಸ್. ಪೊನ್ನಣ್ಣ ಮಾತನಾಡಿ, ಭಾರತದ ಕ್ರೀಡಾ ಕ್ಷೇತ್ರಕ್ಕೆ ಕೊಡಗಿನ ಕೊಡುಗೆ ಅಪಾರವಾಗಿದ್ದು, ಕೊಡಗು ಜಿಲ್ಲೆಯ ಬಾಡಗ ಗ್ರಾಮದಲ್ಲಿ 12 ಎಕರೆ ಜಾಗದಲ್ಲಿ ನಿರ್ಮಾಣವಾಗುತ್ತಿರುವ ಸುಸಜ್ಜಿತ ಕ್ರೀಡಾ ಸಂಕೀರ್ಣಕ್ಕೆ ಕೇಂದ್ರ ಕ್ರೀಡಾ ಇಲಾಖೆಯಿಂದ ಸೂಕ್ತ ಅನುದಾನ ನೀಡುವಂತೆ ಕೋರಿದರು.

ಕೊಡಗು-ಮೈಸೂರು ಕ್ಷೇತ್ರದ ಸಂಸದ ಯದುವೀರ್ ಒಡೆಯರ್ ಮಾತನಾಡಿ, ಕೊಡವ ಕೌಟುಂಬಿಕ ಹಾಕಿ ಮೂಲಕ ಕೊಡವ ಸಮುದಾಯದ ಸೌಹಾರ್ದತೆ ಹೆಚ್ಚಾಗಿದೆ. ದೇಶದಲ್ಲಿಯೇ ಈ ಪಂದ್ಯಾಟ ಗಮನ ಸೆಳೆದಿದೆ ಎಂದರು.
ಸರ್ವೋಚ್ಛ ನ್ಯಾಯಾಲಯದ ನಿವೖತ್ತ ನ್ಯಾಯಾಧೀಶ ಎ. ಬೋಪಣ್ಣ, ಕರ್ನಾಟಕ ಕ್ರೀಡಾ ಪ್ರಾಧಿಕಾರದ ಉಪಾಧ್ಯಕ್ಷ ಸಿ.ಎಸ್. ಅರುಣ್ ಮಾಚಯ್ಯ, ಕೊಡವ ಹಾಕಿ ಅಕಾಡೆಮಿಯ ಅಧ್ಯಕ್ಷ ಪಾಂಡಂಡ ಕೆ.ಬೋಪಣ್ಣ, ಚೇನಂಡ ಕುಟುಂಬದ ಪ್ರಮುಖರೂ ಸೇರಿದಂತೆ ಗಣ್ಯರು ಹಾಜರಿದ್ದರು
ಹಾಕಿ ಪಂದ್ಯಾಟದ ಫೈನಲ್ ಪಂದ್ಯಾಟ ವೀಕ್ಷಣೆಗೆ ನಾಪೋಕ್ಲು ಮೈದಾನದಲ್ಲಿ ಕ್ರೀಡಾಪ್ರೇಮಿಗಳು ಕಿಕ್ಕಿರಿದು ನೆರೆದಿದ್ದರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !